ವಿಮಾನದಲ್ಲಿ ಮೂತ್ರ ವಿಸರ್ಜನೆ: ಮುಂಬೈ ವ್ಯಕ್ತಿಯನ್ನು ಕೆಲಸದಿಂದ ಕಿತ್ತುಹಾಕಿದ ಅಮೆರಿಕಾದ ಕಂಪನಿ
ನವದೆಹಲಿ, ಜ. 06: ನವೆಂಬರ್‌ನಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ವಯಸ್ಸಾದ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಮುಂಬೈನ ಶಂಕರ್ ಮಿಶ್ರಾ ಅವರು ಕೆಲಸ ಮಾಡುತ್ತಿದ್ದ ಅಮೆರಿಕದ ಕಂಪನಿ ವೆಲ್ಸ್ ಫಾರ್ಗೋ ವಜಾಗೊಳಿಸಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ನ್ಯೂಯಾರ್ಕ್-ನವದೆಹಲಿ ವಿಮಾನದಲ್ಲಿ ವಯಸ್ಸಾದ ಮಹಿಳಾ ಸಹ-ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪ ಹೊತ್ತಿರುವ ವ್ಯಕ್ತಿ ಶಂಕರ್ ಮಿಶ್ರಾ ಅವರನ್ನು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕಾರ್ಪೊರೇಟ್ ಪ್ರಧಾನ ಕಚೇರಿಯನ್ನು ಹೊಂದಿರುವ ಅಮೆರಿಕದ ಬಹುರಾಷ್ಟ್ರೀಯ ಹಣಕಾಸು ಸೇವೆಗಳ ಕಂಪನಿ ವೆಲ್ಸ್ ಫಾರ್ಗೋ ವಜಾಗೊಳಿಸಿದೆ.
34 ವರ್ಷದ ಶಂಕರ್ ಮಿಶ್ರಾ ಅವರು ಅಮೆರಿಕಾ ಮೂಲದ ಸಂಸ್ಥೆಯ ಭಾರತ ವಿಭಾಗದ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಉದ್ಯೋಗಿ ಶಂಕರ್ ಮಿಶ್ರಾ ವಿರುದ್ಧದ ಆರೋಪಗಳು ಆಳವಾಗಿ ಮನಸ್ಸನ್ನು ಕಲುಕಿದೆ ಎಂದು ಕಂಪನಿ ಹೇಳಿದೆ.

"ವೆಲ್ಸ್ ಫಾರ್ಗೋ ಕಂಪನಿಯು ಉದ್ಯೋಗಿಗಳ ವೃತ್ತಿಪರ ಮತ್ತು ಉತ್ತಮ ನಡವಳಿಕೆಯನ್ನು ಬಯಸುತ್ತದೆ. ಈ ಆರೋಪಗಳು ಆಳವಾಗಿ ಮನಸ್ಸನ್ನು ಕಲುಕಿದೆ. ಹೀಗಾಗಿ ಈ ವ್ಯಕ್ತಿಯನ್ನು ವೆಲ್ಸ್ ಫಾರ್ಗೋದಿಂದ ವಜಾಗೊಳಿಸಲಾಗಿದೆ. ನಾವು ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಹಕರಿಸುತ್ತಿದ್ದೇವೆ. ಯಾವುದೇ ಹೆಚ್ಚುವರಿ ವಿಚಾರಣೆಗಳಿದ್ದರೂ ನಾವು ಸಹಕರಿಸುತ್ತೇವೆ" ಎಂದು ಕಂಪನಿಯು ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.
ಶಂಕರ್ ಮಿಶ್ರಾ ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿರುವಂತೆಯೇ ಲುಕ್‌ಔಟ್ ನೋಟಿಸ್ ಮತ್ತು ವಿಮಾನ ನಿಲ್ದಾಣದ ಎಚ್ಚರಿಕೆಯನ್ನು ಹೊರಡಿಸಲಾಗಿದೆ. ಶುಕ್ರವಾರ ಆತ ತನ್ನ ವಕೀಲರ ಮೂಲಕ ಹೇಳಿಕೆ ಬಿಡುಗಡೆ ಮಾಡಿಸಿದ್ದಾರೆ.
ನವೆಂಬರ್ 26 ರಂದು ನ್ಯೂಯಾರ್ಕ್ - ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ, ಶಂಕರ್ ಮಿಶ್ರಾ ಅವರು ವೃದ್ಧ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ತನ್ನ ಹೆಂಡತಿ ಮತ್ತು ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿ ಪೊಲೀಸರಿಗೆ ದೂರು ನೀಡದಂತೆ ಮಹಿಳೆಯನ್ನು ಬೇಡಿಕೊಂಡಿದ್ದರು.
ಏರ್ ಇಂಡಿಯಾ ಈ ವಾರವಷ್ಟೇ ಪೊಲೀಸ್ ದೂರು ದಾಖಲಿಸಿದೆ. ಈ ವಾರದ ಆರಂಭದಲ್ಲಿ ಘಟನೆ ಬೆಳಕಿಗೆ ಬಂದ ನಂತರ ವಿಮಾನಯಾನ ಸಂಸ್ಥೆಯು ಶಂಕರ್ ಮಿಶ್ರಾಗೆ 30 ದಿನಗಳ ಕಾಲ ವಿಮಾನ ಪ್ರಯಾಣವನ್ನು ನಿಷೇಧಿಸಿದೆ.












Click it and Unblock the Notifications