ಕಾರ್ಪೊರೇಟ್ ಕೆಲಸ ಬಿಟ್ಟು ಕಂಟೆಂಟ್ ಕ್ರಿಯೇಷನ್‌ಗಿಳಿದ ಯುವಕ: ಈಗ ತಿಂಗಳಿಗೆ 2.5 ಲಕ್ಷ ರೂ. ಆದಾಯ!
ಮುಂಬೈ: ಇಂದಿನ ಡಿಜಿಟಲ್ ಯುಗದಲ್ಲಿ ಸೋಷಿಯಲ್ ಮೀಡಿಯಾ ಕೇವಲ ಮನರಂಜನೆಯ ಸಾಧನವಾಗಿ ಉಳಿದಿಲ್ಲ, ಬದಲಾಗಿ ಅದೊಂದು ಬಹುದೊಡ್ಡ ಆದಾಯದ ಮೂಲವಾಗಿ ಬದಲಾಗಿದೆ . ಇದಕ್ಕೆ ಒಂದು ಒಳ್ಳೇಯ ಉದಾಹರಣೆಯೆಂದರೆ ಮುಂಬೈ ಮೂಲದ ಯುವಕ ಶುಭ್ ಸಾರಂಗ್.
ಹೌದು, ಬರೋಬ್ಬರಿ ಒಂದು ಲಕ್ಷ ರೂಪಾಯಿಯ ಬ್ರಾಂಡ್ ಡೀಲ್ ಸಿಕ್ಕ ಬಳಿಕ ತಮ್ಮ ಕಾರ್ಪೊರೇಟ್ ಉದ್ಯೋಗಕ್ಕೆ ಗುಡ್‌ಬೈ ಹೇಳಿರುವ ಇವರು, ಈಗ ಇನ್‌ಸ್ಟಾಗ್ರಾಮ್‌ನಲ್ಲಿ ಫುಲ್ ಟೈಮ್ ಕಂಟೆಂಟ್ ಕ್ರಿಯೇಟರ್ ಆಗಿ ಮಿಂಚುತ್ತಿದ್ದಾರೆ.

ಕೇವಲ ಒಂದು ವಿಡಿಯೋದಿಂದ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿರುವ ಇವರ ಯಶೋಗಾಥೆ ಮತ್ತು ಅವರು ಪಟ್ಟಿರುವ ಕಷ್ಟದ ಹಾದಿ ಯುವಜನತೆಗೆ ನಿಜಕ್ಕೂ ಸ್ಫೂರ್ತಿ ಎನ್ನಬಹುದು.
ಒಂದೇ ಬ್ರಾಂಡ್ ಡೀಲ್‌ನಿಂದ 1 ಲಕ್ಷ ರೂ. ಗಳಿಕೆ
ಶುಭ್ ಸಾರಂಗ್ ಅವರು ಕೂಡ ಎಲ್ಲರಂತೆ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಕಚೇರಿಯಲ್ಲಿ ಕಾರ್ಪೊರೇಟ್ ಉದ್ಯೋಗ ಮಾಡುತ್ತಿದ್ದರು. ತಿಂಗಳಾದರೆ ನಿಗದಿತ ಸಂಬಳ ಕೈಸೇರುತ್ತಿತ್ತು. ಆದರೆ, ಇವರಿಗೆ ಕಂಟೆಂಟ್ ಕ್ರಿಯೇಷನ್ ಮೇಲೆ ಅಪಾರ ಆಸಕ್ತಿ ಇತ್ತು. ಹೀಗಿರುವಾಗ, ಒಂದು ಪ್ರತಿಷ್ಠಿತ ಬ್ರಾಂಡ್‌ನಿಂದ ಇವರಿಗೆ 1 ಲಕ್ಷ ರೂ. ಮೌಲ್ಯದ ಭರ್ಜರಿ ಡೀಲ್ ಒಲಿದುಬಂತು.
ಈ ಒಂದು ಮೊತ್ತ ಅವರಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿತು. ಸೋಶಿಯಲ್ ಮೀಡಿಯಾದಲ್ಲಿ ಫುಲ್‌ಟೈಮ್ ತೊಡಗಿಸಿಕೊಂಡರೆ ಆರ್ಥಿಕವಾಗಿ ಮತ್ತಷ್ಟು ಸದೃಢರಾಗಬಹುದು ಎಂಬ ನಂಬಿಕೆ ಅವರಲ್ಲಿ ಮೂಡಲು ಈ ಮೊದಲ ಡೀಲ್ ಪ್ರಮುಖ ಕಾರಣವಾಯಿತು.
ಕಂಟೆಂಟ್ ಕ್ರಿಯೇಷನ್ ಮತ್ತು ನಿದ್ದೆಯಿಲ್ಲದ ರಾತ್ರಿಗಳು
ಆದರೆ, ಈ ಯಶಸ್ಸು ಅವರಿಗೆ ರಾತ್ರೋರಾತ್ರಿ ಒಲಿದಿರಲಿಲ್ಲ. ಕಚೇರಿಯ ಕೆಲಸ ಮತ್ತು ಕಂಟೆಂಟ್ ಕ್ರಿಯೇಷನ್ ಎರಡನ್ನೂ ಒಟ್ಟಿಗೆ ನಿಭಾಯಿಸಲು ಅವರು ಹಗಲಿರುಳು ಶ್ರಮಿಸಿದ್ದಾರೆ. ಪ್ರತಿದಿನ ಸಂಜೆ 6 ಗಂಟೆಗೆ ಕಚೇರಿಯಿಂದ ಬಂದ ತಕ್ಷಣ ಸ್ವಲ್ಪ ಹೊತ್ತು ವಿಶ್ರಮಿಸಿ ವಿಡಿಯೋ ಶೂಟಿಂಗ್‌ಗೆ ಹೋಗುತ್ತಿದ್ದರು.
ತಡರಾತ್ರಿ ಬಂದು ವಿಡಿಯೋ ಎಡಿಟಿಂಗ್ ಮುಗಿಸುವಷ್ಟರಲ್ಲಿ ಬೆಳಗಿನ ಜಾವ 4 ಗಂಟೆಯಾಗುತ್ತಿತ್ತು. ಕೇವಲ ಮೂರರಿಂದ ನಾಲ್ಕು ಗಂಟೆ ನಿದ್ದೆ ಮಾಡಿ ಮತ್ತೆ ಬೆಳಿಗ್ಗೆ 8 ಗಂಟೆಗೆ ಎದ್ದು ಕಚೇರಿಗೆ ಓಡುತ್ತಿದ್ದರು. ನಿದ್ದೆಯ ಮಂಪರಿನಲ್ಲೇ ಕಚೇರಿಯಲ್ಲಿ ಕೆಲಸ ಮಾಡಿದ ದಿನಗಳನ್ನ ಶುಭ್ ಸಾರಂಗ್ ತಮ್ಮ ವಿಡಿಯೋದಲ್ಲಿ ಮೆಲುಕು ಹಾಕಿದ್ದಾರೆ.
ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್ ಆದಾಯದಲ್ಲಿ ಭಾರೀ ಏರಿಕೆ
ಆರಂಭದಲ್ಲಿ ಕೇವಲ 10,000 ಫಾಲೋವರ್ಸ್ ಹೊಂದಿದ್ದ ಶುಭ್, ತಮ್ಮ ಭಿನ್ನ ಶೈಲಿಯ ಕಂಟೆಂಟ್ ಮೂಲಕ ಎರಡೇ ತಿಂಗಳಲ್ಲಿ 1 ಲಕ್ಷ ಫಾಲೋವರ್ಸ್ ಗಳಿಸಿದರು. ಮತ್ತೊಂದು ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಸಂಖ್ಯೆ 2 ಲಕ್ಷಕ್ಕೆ ಏರಿಕೆಯಾಯಿತು. ಪ್ರಸ್ತುತ ಅವರು ಇನ್‌ಸ್ಟಾಗ್ರಾಮ್‌ನಲ್ಲಿ 2.33 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ.
ಜನಪ್ರಿಯತೆ ಹೆಚ್ಚಾದಂತೆ ಬ್ರಾಂಡ್‌ಗಳು ಒಂದು ವಿಡಿಯೋಗೆ 1.3 ಲಕ್ಷದಿಂದ 1.5 ಲಕ್ಷ ರೂ.ವರೆಗೆ ನೀಡಲು ಆರಂಭಿಸಿದವು. ಈಗ ಅವರ ಮಾಸಿಕ ಕಂಟೆಂಟ್ ಕ್ರಿಯೇಷನ್ ಆದಾಯ 2.2 ಲಕ್ಷದಿಂದ 2.5 ಲಕ್ಷ ರೂ.ಗೆ ತಲುಪಿದೆ. ತಮ್ಮ ಕಾರ್ಪೊರೇಟ್ ಸಂಬಳಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚು ಆದಾಯ ಬರಲು ಶುರುವಾದಾಗ ಅವರು ಯಾವುದೇ ಆತಂಕವಿಲ್ಲದೆ ಕಚೇರಿ ಕೆಲಸಕ್ಕೆ ರಾಜೀನಾಮೆ ನೀಡಿದರು.
ಆರ್ಥಿಕ ಭದ್ರತೆ ಇಲ್ಲದೆ ಉದ್ಯೋಗ ಬಿಡಬೇಡಿ ಎಂಬ ಎಚ್ಚರಿಕೆ
ಬಾಸ್ ಕಿರಿಕಿರಿ, ಟಾರ್ಗೆಟ್ ಮತ್ತು ಸಾಫ್ಟ್‌ವೇರ್ ಸಮಸ್ಯೆಗಳ ಒತ್ತಡದಿಂದ ಸಂಪೂರ್ಣವಾಗಿ ಹೊರಬಂದಿರುವ ಶುಭ್ ಈಗ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಆದರೆ, ತಮ್ಮ ಯಶಸ್ಸನ್ನು ನೋಡಿ ದಿಢೀರನೆ ಯಾರೂ ಕೆಲಸ ಬಿಡಬಾರದು ಎಂದು ಅವರು ಎಚ್ಚರಿಸಿದ್ದಾರೆ.
ಪ್ರತಿಯೊಬ್ಬರಿಗೂ ತಿಂಗಳ ಇಎಂಐ ಮತ್ತು ಜೀವನ ನಿರ್ವಹಣೆಯ ಜವಾಬ್ದಾರಿಗಳಿರುತ್ತವೆ. ಹೀಗಾಗಿ ಆರ್ಥಿಕ ಭದ್ರತೆ ಅತಿ ಮುಖ್ಯ. ಕಂಟೆಂಟ್ ಕ್ರಿಯೇಷನ್‌ನಿಂದ ಬರುವ ಆದಾಯವು, ನಿಮ್ಮ ಪ್ರಸ್ತುತ ಸಂಬಳಕ್ಕಿಂತ ನಿರಂತರವಾಗಿ ಹೆಚ್ಚಿದ್ದರೆ ಮಾತ್ರ ಉದ್ಯೋಗ ಬಿಡುವ ರಿಸ್ಕ್ ತೆಗೆದುಕೊಳ್ಳಿ ಎಂದು ಅವರು ಯುವಜನತೆಗೆ ಕಿವಿಮಾತು ಹೇಳಿದ್ದಾರೆ. ಶುಭ್ ಸಾರಂಗ್ ಅವರ ಈ ವಿಡಿಯೋ 9 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ವೈರಲ್ ಆಗಿದೆ.


Click it and Unblock the Notifications
