Mumbai Rain: ಧೂಳಿನ ಬಿರುಗಾಳಿ, ಮಳೆಗೆ ಬೆಚ್ಚಿಬಿದ್ದ ಮುಂಬೈ; ಮೂವರು ಸಾವು
ಧೂಳಿನ ಬಿರುಗಾಳಿ ಮತ್ತು ಮಳೆಗೆ ಮುಂಬೈ ಮಹಾನಗರಿ ಬೆಚ್ಚಿಬಿದ್ದಿದೆ. ಧೂಳಿನ ಬಿರುಗಾಳಿ ಕಾರಣ ಮುಂಬೈ ವಿಮಾನ ನಿಲ್ದಾಣದಲ್ಲಿ ಒಂದು ಗಂಟೆಗೂ ಹೆಚ್ಚು ಅವಧಿಗೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಸ್ಥಳೀಯ ರೈಲುಗಳು ವಿಳಂಬಗೊಂಡಿದ್ದು, ಜನ ಜೀವನ ಅಸ್ತವ್ಯಸ್ಥವಾಗಿದೆ.
ಘಾಟ್‌ಕೋಪರ್ ಪ್ರದೇಶದ ಚೆಡ್ಡಾನಗರ ಜಂಕ್ಷನ್‌ನಲ್ಲಿ ಪೆಟ್ರೋಲ್ ಪಂಪ್‌ನಲ್ಲಿ 100 ಅಡಿ ಎತ್ತರದ ಅಕ್ರಮ ಜಾಹೀರಾತು ಫಲಕ ಬಿದ್ದಿದ್ದು, ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಮತ್ತು 59 ಮಂದಿ ಗಾಯಗೊಂಡಿದ್ದಾರೆ, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

ಮತ್ತೊಂದು ಘಟನೆಗಲ್ಲಿ ವಡಾಲಾ ಪ್ರದೇಶದಲ್ಲಿ ಬಿರುಗಾಳಿಯ ಗಾಳಿಯ ನಡುವೆ ನಿರ್ಮಾಣ ಹಂತದಲ್ಲಿರುವ ಲೋಹದ ಪಾರ್ಕಿಂಗ್ ಟವರ್ ರಸ್ತೆಯ ಮೇಲೆ ಕುಸಿದು ಮೂವರು ವ್ಯಕ್ತಿಗಳು ಗಾಯಗೊಂಡಿದ್ದು, ಅನೇಕ ವಾಹನಗಳು ಜಖಂಗೊಂಡಿವೆ.
ಸ್ಥಳಕ್ಕೆ ಸಿಎಂ ಏಕನಾಥ್ ಶಿಂಧೆ ಭೇಟಿ
15 ವಿಮಾನಗಳನ್ನು ವಿವಿಧ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಯಿತು ಮತ್ತು ರನ್‌ವೇಗಳ ಕಾರ್ಯಾಚರಣೆಯು ಸಂಜೆ 5.03 ಕ್ಕೆ ಪುನರಾರಂಭವಾಯಿತು ಎಂದು ವಿಮಾನ ನಿಲ್ದಾಣದ ನಿರ್ವಾಹಕರು ತಿಳಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಘಾಟ್‌ಕೋಪರ್‌ನಲ್ಲಿ ಹೋರ್ಡಿಂಗ್ ಕುಸಿದ ಘಟನೆಯ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ) ತಂಡವು ಹೋರ್ಡಿಂಗ್ ಕುಸಿದ ಸ್ಥಳಕ್ಕೆ ತಲುಪಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
100 ಕ್ಕೂ ಹೆಚ್ಚು ಜನರು ಹೋರ್ಡಿಂಗ್ ಅಡಿಯಲ್ಲಿ ಸಿಲುಕಿರುವ ಶಂಕೆ ಇದೆ. ಇದುವರೆಗೆ 62 ಜನರನ್ನು ಹೊರತೆಗೆಯಲಾಗಿದೆ, ಅದರಲ್ಲಿ ಮೂವರು ಸಾವನ್ನಪ್ಪಿದ್ದಾರೆ, 59 ಇತರರು ಗಾಯಗೊಂಡಿದ್ದಾರೆ ಮತ್ತು ಪ್ರತ್ಯೇಕ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ನಾಗರಿಕ ಪ್ರಧಾನ ಕಚೇರಿಯಲ್ಲಿನ ವಿಪತ್ತು ನಿಯಂತ್ರಣ ಕೊಠಡಿಗೆ ಭೇಟಿ ನೀಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಂಬೈ ಮಹಾನಗರ ಪಾಲಿಕೆ ಆಯುಕ್ತ ಭೂಷಣ್ ಗಗ್ರಾನಿ, ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅನುಮತಿ ನೀಡದ ಕಾರಣ ಹೋರ್ಡಿಂಗ್ ಕಾನೂನುಬಾಹಿರವಾಗಿದೆ ಎಂದು ಹೇಳಿದ್ದಾರೆ.
ಬಿಎಂಸಿ ಅಧಿಕಾರಿಗಳ ಪ್ರಕಾರ, 120 x 120 ಅಡಿ ಅಳತೆಯ ಹೋರ್ಡಿಂಗ್ ಸಂಜೆ 4:30 ರ ಸುಮಾರಿಗೆ ಪೆಟ್ರೋಲ್ ಪಂಪ್ ಮೇಲೆ ಕುಸಿದು ಬಿದ್ದಿದೆ. 40 x 40 ಅಡಿಗಿಂತ ಹೆಚ್ಚಿನ ಅಳತೆಯ ಹೋರ್ಡಿಂಗ್ ಅಳವಡಿಸಲು ಅವಕಾಶ ನೀಡುವುದಿಲ್ಲ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.












Click it and Unblock the Notifications