Hit and Run: ಹಿಟ್ ಅಂಡ್ ರನ್ ಪ್ರಕರಣದಲ್ಲಿ ರಾಜಕಾರಣೀಯ ಪುತ್ರನ ಬಂಧನ
ಮುಂಬೈ ಜುಲೈ 10: ಮುಂಬೈ ಹಿಟ್ ಅಂಡ್ ರನ್ ಪ್ರಕರಣದಲ್ಲಿ ರಾಜಕಾರಣೀಯ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಬಿಎಂಡಬ್ಲ್ಯು ಹಿಟ್ ಅಂಡ್ ರನ್ ಪ್ರಕರಣದಲ್ಲಿ ಶಿವಸೇನಾ ಮುಖಂಡ ರಾಜೇಶ್ ಶಾ ಅವರ ಪುತ್ರ ಮಿಹಿರ್ ಶಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಿಹಿರ್ ಅವರ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ 45 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.

ಮಿಹಿರ್ ಶಾ ಘಟನೆ ನಡೆದ ಬಳಿಕ ಮಿಹಿರ್ ತಲೆಮರೆಸಿಕೊಂಡಿದ್ದರು. 60 ಗಂಟೆಗಳ ಶೋಧದ ನಂತರ ವಿರಾರ್‌ನ ಹೋಟೆಲ್‌ನಿಂದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಬಳಿಕ ಮಿಹಿರ್ ಮತ್ತು ಆತನ ಕುಟುಂಬ ನಗರ ತೊರೆದು ಶಹಪುರದ ರೆಸಾರ್ಟ್‌ನಲ್ಲಿ ತಂಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಪೊಲೀಸರು ಜಾಣತನದಿಂದ ಪತ್ತೆ ಮಾಡಿದ್ದಾರೆ.
ಆರೋಪಿಯನ್ನು ಪತ್ತೆ ಮಾಡಿದ್ದು ಹೇಗೆ?
ಘಟನೆ ನಡೆದ ಸೋಮವಾರ ರಾತ್ರಿ ಮಿಹಿರ್ ಮತ್ತು ಆತನ ಸ್ನೇಹಿತನೊಂದಿಗೆ ವಿರಾರ್‌ನಲ್ಲಿರುವ ಹೋಟೆಲ್‌ಗೆ ತೆರಳಿದ್ದರು.
ಮಂಗಳವಾರ ಮಿಹಿರ್‌ನ ಸ್ನೇಹಿತ ವಿರಾರ್‌ನಲ್ಲಿರುವ ಹೋಟೆಲ್‌ನಿಂದ ಹೊರಗೆ ಬಂದಿದ್ದನು. ಸ್ವಲ್ಪ ದೂರ ನಡೆದ ನಂತರ ಅವನು ತನ್ನ ಫೋನ್ ಸ್ವಿಚ್ ಆನ್ ಮಾಡಿದ್ದಾನೆ. ಆಗ ಪೊಲೀಸರಿಗೆ ಆ ಸ್ಥಳವನ್ನು ಪತ್ತೆಹಚ್ಚಲು ಸಹಾಯವಾಗಿದೆ. ವಿರಾರ್‌ನಲ್ಲಿ ಆರೋಪಿ ತಂಗಿದ್ದ ಸ್ಥಳವನ್ನು ಪೊಲೀಸರು ಕಂಡುಹಿಡಿದಿದ್ದಾರೆ.

ತಕ್ಷಣ ವಿರಾರ್‌ಗೆ ತೆರಳಿದ ಪೊಲೀಸ್ ತಂಡ, ಮೊಬೈಲ್ ಟವರ್ ಲೊಕೇಶನ್ ಪರಿಶೀಲಿಸಿ, ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಹೋಟೆಲ್‌ನಲ್ಲಿ ಆರೋಪಿಯನ್ನು ಪತ್ತೆ ಮಾಡಿದ್ದಾರೆ. ಪೊಲೀಸರು ಇಂದು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಅಲ್ಲದೆ ಆರೋಪಿಯ ಕುಟುಂಬ ಸದಸ್ಯರನ್ನೂ (ತಾಯಿ ಮತ್ತು ಸಹೋದರಿಯರನ್ನು) ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಅಪಘಾತದ ನಂತರ ಗೆಳತಿಯ ಮನೆಗೆ ಹೋಗಿದ್ದ ಆರೋಪಿ
ಅಪಘಾತದ ನಂತರ ಮಿಹಿರ್ ತನ್ನ ಕಾರನ್ನು ಬಾಂದ್ರಾದ ಕಲಾ ನಗರ ಪ್ರದೇಶದಲ್ಲಿ ಬಿಟ್ಟು ಆಟೋದಲ್ಲಿ ತನ್ನ ಗೆಳತಿಯ ಮನೆಗೆ ಹೋಗಿದ್ದನು. ಮಿಹಿರ ತನ್ನ ಗೆಳತಿಗೆ ಅಪಘಾತದ ಬಗ್ಗೆ ವಿವರಿಸಿದ್ದಾನೆ. ಇದಾದ ನಂತರ ಗೆಳತಿ ಮಿಹಿರ್ ಸಹೋದರಿಗೆ ಕರೆ ಮಾಡಿದ್ದಾಳೆ. ಸೋದರಿ ಮಿಹಿರ್‌ನನ್ನು ಗೋರೆಗಾಂವ್‌ನಿಂದ ಬೊರಿವಲಿಯಲ್ಲಿರುವ ಅವನ ಮನೆಗೆ ಕರೆದೊಯ್ದಿದ್ದಾಳೆ.
ಪೊಲೀಸರ ಪ್ರಕಾರ, ಮಿಹಿರ್ ತನ್ನ ಇಬ್ಬರು ಸಹೋದರಿಯರು, ತಾಯಿ ಮತ್ತು ಸ್ನೇಹಿತನೊಂದಿಗೆ ಎರಡು ವಾಹನಗಳಲ್ಲಿ ಮನೆಯಿಂದ ಹೊರಟು ಎಸ್ಕೇಪ್ ಆಗಿದ್ದಾರೆ. ಪೊಲೀಸ್ ವಿಚಾರಣೆ ಆರಂಭಿಸುವ ಹೊತ್ತಿಗೆ ಮನೆಯವರು ಮೊಬೈಲ್ ಸ್ವಿಚ್ ಆಫ್ ಮಾಡಿದ್ದು, ಅವರ ಮನೆಗೆ ಬೀಗ ಹಾಕಲಾಗಿತ್ತು.
ಮಿಹಿರ್ ತಂದೆಗೆ ಜಾಮೀನು
ಆರಂಭದಲ್ಲಿ ರಾಜೇಶ್ ಶಾ ಅವರ ಮತ್ತೊಬ್ಬ ಚಾಲಕ ಮೊಹಮ್ಮದ್ ಹಸನ್ ಕುಟುಂಬದೊಂದಿಗೆ ಇದ್ದಾನೆ ಎಂಬ ಮಾಹಿತಿ ಸಿಕ್ಕಿತ್ತು. ಮಿಹಿರ್ ಅವರ ಕುಟುಂಬವನ್ನು ಅಪರಾಧ ವಿಭಾಗದ 3 ನೇ ಘಟಕ ರೆಸಾರ್ಟ್‌ನಿಂದ ಬಂಧಿಸಿದೆ. ಕುಟುಂಬಸ್ಥರನ್ನು ಮಿಹಿರ್‌ನನ್ನು ಉಳಿಸುವ ಪ್ರಯತ್ನಿಸಿದ್ದಕ್ಕಾಗಿ ಬಂಧಿಸಲಾಗಿದೆ.
ಪೊಲೀಸರು ಭಾನುವಾರವೇ ಮಿಹಿರ್ ತಂದೆ ರಾಜೇಶ್ ಶಾ ಮತ್ತು ಕಾರು ಚಾಲಕ ರಿಷಿರಾಜ್ ಬಿಡಾವತ್ ಅವರನ್ನು ಬಂಧಿಸಿದ್ದರು. ರಾಜೇಶ್ ಶಾಗೆ ಸೋಮವಾರ ಜಾಮೀನು ದೊರೆತಿದ್ದು, ಮಂಗಳವಾರ ಬಿಡಾವತ್ ಅವರನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಕೋರ್ಟ್ ಕಳುಹಿಸಿದೆ. ಮಿಹಿರ್ ನನ್ನು ಇಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಅವರ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications