Meghalaya Election 2023 ; ಮೇಘಾಲಯ ಮಾಜಿ ಸಿಎಂ ಪತ್ನಿಗೆ ಸೋಲಿನ ರುಚಿ!
ಮೇಘಾಲಯ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ, ಟಿಎಂಸಿ ನಾಯಕ ಮುಕುಲ್ ಸಂಗ್ಮಾ ಪತ್ನಿ ಸೋಲು ಕಂಡಿದ್ದಾರೆ.
ಶಿಲ್ಲಾಂಗ್, ಮಾರ್ಚ್ 02; ಮೇಘಾಲಯ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಚುನಾವಣಾ ಆಯೋಗದ ಸದ್ಯದ ಮಾಹಿತಿ ಪ್ರಕಾರ 43 ಸ್ಥಾನಗಳ ಫಲಿತಾಂಶ ಘೋಷಣೆಯಾಗಿದೆ. 17 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಎನ್‌ಪಿಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ರಾಜ್ಯದ 60 ಕ್ಷೇತ್ರಗಳ ಪೈಕಿ 59 ಕ್ಷೇತ್ರಗಳಿಗೆ ಫೆಬ್ರವರಿ 27ರಂದು ಮತದಾನ ನಡೆದಿತ್ತು.
ಮೇಘಾಲಯ ರಾಜ್ಯದಲ್ಲಿ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಮತ್ತೊಮ್ಮೆ ಅಧಿಕಾರ ಪಡೆಯುವತ್ತ ಹೆಜ್ಜೆ ಹಾಕಿದೆ. ಯನೈಟೆಡ್ ಡೆಮಾಕ್ರಟಿಕ್ ಪಕ್ಷ 9 ಸ್ಥಾನದಲ್ಲಿ ಜಯಗಳಿಸುವ ಮೂಲಕ 2ನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಸಹೋದರ ಜೇಮ್ಸ್ ಪಾಂಗ್ಸಾಂಗ್ ಕೆ ಸಂಗ್ಮಾ ದಾಡೆಂಗ್ರೆ ಕ್ಷೇತ್ರದಲ್ಲಿ 7 ಮತಗಳ ಅಂತರದಿಂದ ಸೋತಿದ್ದಾರೆ.

ರಾಜ್ಯದ ಮಾಜಿ ಮುಖ್ಯಮಂತ್ರಿ, ಟಿಎಂಸಿ ನಾಯಕ ಮುಕುಲ್ ಸಂಗ್ಮಾ ಪತ್ನಿ ಡಿ. ಡಿ. ಶೈರಾ
ಮಹನೇದ್ರಗಂಜ್ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಎನ್‌ಪಿಪಿಯ ಸಂಜಯ್ ಎ. ಸಂಗ್ಮಾ ಡಿ. ಡಿ. ಶೈರಾಗೆ ಸೋಲಿನ ರುಚಿ ತೋರಿಸಿದ್ದಾರೆ. ಆದರೆ ಮುಕುಲ್ ಸಂಗ್ಮಾ ಪುತ್ರಿ ಎಂ. ಡಿ. ಶೈರಾ ಅಂಪತಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

ಮುಕುಲ್ ಸಂಗ್ಮಾ ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿಯೂ ಆಗಿದ್ದರು. 2021ರಲ್ಲಿ 11 ಶಾಸಕರ ಜೊತೆ ಅವರು ಟಿಎಂಸಿಗೆ ಸೇರಿದ್ದರು. ಈ ಬಾರಿಯ ಚುನಾವಣೆಯಲ್ಲಿ ಟಿಎಂಸಿ ಎನ್‌ಪಿಪಿಗೆ ಪೈಪೋಟಿ ನೀಡಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ 3 ಸ್ಥಾನದಲ್ಲಿ ಗೆದ್ದಿರುವ ಪಕ್ಷ, 2ರಲ್ಲಿ ಇನ್ನೂ ಮುನ್ನಡೆಯಲ್ಲಿದೆ.
ಯಾವ ಪಕ್ಷಕ್ಕೆ ಎಷ್ಟು ಸೀಟು?; ಮೇಘಾಲಯ ವಿಧಾನಸಭೆ ಚುನಾವಣೆ 2023ರ ಅಂತಿಮ ಫಲಿತಾಂಶ ಪ್ರಕಟವಾಗಿದೆ. 26 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಕಾನ್ರಾಡ್ ಸಂಗ್ಮಾ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಯುಡಿಪಿ ಪಕ್ಷ 11 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ 2ನೇ ಅತಿ ದೊಡ್ಡ ಪಕ್ಷವಾಗಿದೆ.
ಟಿಎಂಸಿ 5, ಕಾಂಗ್ರೆಸ್ 5, ಬಿಜೆಪಿ 2 ಸ್ಥಾನಗಳಲ್ಲಿ ಜಯಗಳಿಸಿದೆ, ಉಳಿದಂತೆ ಹೆಚ್‌ಎಸ್‌ಪಿಡಿಪಿ 2, ಪಿಡಿಎಫ್ 2, ವಿಪಿಪಿ 4, ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಕಾನ್ರಾಡ್ ಸಂಗ್ಮಾ ಮನವಿಯಂತೆ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಎನ್‌ಪಿಪಿಗೆ ಬಿಜೆಪಿ ಬೆಂಬಲ ನೀಡಲಿದೆ.
60 ಸದಸ್ಯ ಬಲದ ಮೇಘಾಲಯ ವಿಧಾನಸಭೆಯ 59 ಸ್ಥಾನಗಳಿಗೆ ಮಾತ್ರ ಫೆಬ್ರವರಿ 27ರಂದು ಚುನಾವಣೆ ನಡೆದಿದೆ. ಶಿಲ್ಲಾಂಗ್ ವಿಧಾನಸಭಾ ಕ್ಷೇತ್ರದ ಯುನೈಟೆಡ್ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಎಚ್. ಡಿ. ಆರ್. ಲಿಂಗ್ಡೊ ಮೃತಪಟ್ಟ ಕಾರಣ ಆ ಕ್ಷೇತ್ರದ ಚುನಾವಣೆ ಮುಂದೂಡಲಾಗಿದೆ.












Click it and Unblock the Notifications