Meghalaya election 2023; ಟಿಎಂಸಿ ಬಲ ಹೆಚ್ಚಿಸಿದ ಮುಕುಲ್ ಸಂಗ್ಮಾ
ಮೇಘಾಲಯ ವಿಧಾನಸಭೆ ಚುನಾವಣೆ 2023ರ ಮತ ಎಣಿಕೆಯಲ್ಲಿ ಟಿಎಂಸಿ ಪಕ್ಷ ಮುನ್ನಡೆ ಕಾಯ್ದುಕೊಂಡಿದೆ. ಮುಕುಲ್ ಸಂಗ್ಮಾ ಟಿಎಂಸಿ ಪಕ್ಷಕ್ಕೆ ಬಂದಿದ್ದು ಸಹಾಯಕವಾಗಿದೆ.
ಶಿಲ್ಲಾಂಗ್, ಮಾರ್ಚ್ 02; ಮೇಘಾಲಯ ವಿಧಾನಸಭೆ ಚುನಾವಣೆ ಮತ ಎಣಿಕೆಯಲ್ಲಿ ಟಿಎಂಸಿ ಮುನ್ನಡೆ ಪಡೆಯುತ್ತಿದೆ. 60 ಸದಸ್ಯ ಬಲದ ವಿಧಾನಸಭೆಯ ಪೈಕಿ 59 ಸ್ಥಾನಗಳಿಗೆ ಫೆಬ್ರವರಿ 27ರಂದು ಚುನಾವಣೆ ನಡೆದಿದೆ. ಬುಡಕಟ್ಟು ಮತ್ತು ಕ್ರೈಸ್ತ ಸಮುದಾಯದ ಪ್ರಾಬಲ್ಯವಿರುವ ಚಿಕ್ಕ ರಾಜ್ಯವಾದ ಮೇಘಾಲಯದಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯವನ್ನು ಕಳೆದುಕೊಂಡಿದೆ. ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಟಿಎಂಸಿಗೆ ಪೈಪೋಟಿ ನೀಡುತ್ತಿದೆ.
ಗುರುವಾರ ಮೇಘಾಲಯ ವಿಧಾನಸಭೆ ಚುನಾವಣೆ ಮತ ಎಣಿಕೆ ನಡೆಯುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಟಿಎಂಸಿ 12, ಎನ್‌ಪಿಪಿ 19 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಕಳೆದ ಚುನಾವಣೆ ಬಳಿಕ ರಚನೆಯಾಗಿದ್ದ ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್ (ಎಂಡಿಎ) ಮೈತ್ರಿಕೂಟ ಈ ಬಾರಿ ಒಂದಾಗಿ ಚುನಾವಣೆಗೆ ಹೋಗಿಲ್ಲ. ಎನ್‌ಪಿಪಿ, ಟಿಎಂಸಿ, ಬಿಜೆಪಿ, ಕಾಂಗ್ರೆಸ್, ಯುನೈಟೆಡ್ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಮತ ಎಣಿಕೆಯಲ್ಲಿ ಎನ್‌ಪಿಪಿ ಮತ್ತು ಟಿಎಂಸಿ ಸದ್ಯ ಮುನ್ನಡೆ ಕಾಯ್ದುಕೊಂಡಿವೆ. 2021ರಲ್ಲಿ ಮುಕುಲ್ ಸಂಗ್ಮಾ ನೇತೃತ್ವದಲ್ಲಿ 11 ಕಾಂಗ್ರೆಸ್ ಶಾಸಕರು ಟಿಎಂಸಿಗೆ ವಲಸೆ ಹೋದರು. ಇದು ಟಿಎಂಸಿ ಬಲವನ್ನು ಹೆಚ್ಚಿಸಿದೆ. ಆದ್ದರಿಂದ ಕಾಂಗ್ರೆಸ್ ಪ್ರಾಬಲ್ಯವೂ ಕುಸಿದಿದ್ದು, ಪಕ್ಷ ಎರಡಂಕಿಯ ಸ್ಥಾನದಲ್ಲಿ ಜಯಗಳಿಸಲಿದೆಯೇ? ಎಂಬುದು ಪ್ರಶ್ನೆಯಾಗಿದೆ.
2012ರಲ್ಲಿ ಮೇಘಾಲಯ ರಾಜ್ಯದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ)ವನ್ನು ಸ್ಥಾಪನೆ ಮಾಡಲಾಗಿದೆ. ಮೊದಲ ಚುನಾವಣೆಯಲ್ಲಿ 60 ಸ್ಥಾನಗಳ ಪೈಕಿ, 35ರಲ್ಲಿ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿದರು. 2023ರ ಚುನಾವಣೆಯಲ್ಲಿ ರಾಜ್ಯದಲ್ಲಿ ಪಕ್ಷದ ಬಲವರ್ಧನೆಗಾಗಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ತಂಡದ ಸಹಾಯ ಪಡೆಯಲಾಗಿದೆ.

ಈ ಬಾರಿಯ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮೇಘಾಲಯ ರಾಜ್ಯದ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ನೇತೃತ್ವದಲ್ಲಿ 11 ಕಾಂಗ್ರೆಸ್ ಶಾಸಕರು ಟಿಎಂಸಿ ಸೇರಿದರು. ಈ ಮೂಲಕ ವಿಧಾನಸಭೆಯಲ್ಲಿ ಟಿಎಂಸಿ ಬಲ ಹೆಚ್ಚಾಯಿತು. ಆದ್ದರಿಂದ ಟಿಎಂಸಿಯೇ ವಿಧಾನಸಭೆಯಲ್ಲಿ ಅಧಿಕೃತ ವಿರೋಧದ ಪಕ್ಷವಾಯಿತು.
ಕಾಂಗ್ರೆಸ್ ರಾಷ್ಟ್ರೀಯ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದ ಹಾಲಿ ಶಾಸಕ ಮುಕುಲ್ ಸಂಗ್ಮಾ 11 ಶಾಸಕರ ಜೊತೆ ಟಿಎಂಸಿಗೆ ಬಂದರು. ಈ ಮೂಲಕ ಮುಂದಿನ ಚುನಾವಣೆಯಲ್ಲಿ ಭಾರೀ ಪೈಪೋಟಿ ನೀಡುತ್ತೇವೆ ಎಂಬ ಸಂದೇಶವನ್ನು ಎರಡು ವರ್ಷಗಳ ಹಿಂದೆಯೇ ಕೊಟ್ಟಿದ್ದರು.
2018ರ ಚುನಾವಣೆಯಲ್ಲಿ ಮುಕುಲ್ ಸಂಗ್ಮಾ ನೇತೃತ್ವದಲ್ಲಿ 18 ಶಾಸಕರು ಗೆಲುವು ಸಾಧಿಸಿದ್ದರು. ಈ ಪೈಕಿ ಮುಕುಲ್ ಸಂಗ್ಮಾ ಮತ್ತು ಇತರ 11 ಶಾಸಕರು ಕಾಂಗ್ರೆಸ್ ತೊರೆದು ಟಿಎಂಸಿ ಸೇರಿದ್ದರು. ಆದ್ದರಿಂದ ವಿಧಾನಸಭೆಯಲ್ಲಿ ಟಿಎಂಸಿ ವಿರೋಧ ಪಕ್ಷವಾಗಿತ್ತು. ಬಳಿಕ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ಪಕ್ಷ ಭಿನ್ನಾಭಿಪ್ರಾಯಗಳ ನಡುವೆಯೂ ಟಿಎಂಸಿ ಜೊತೆ ವಿರೋಧ ಪಕ್ಷವಾಗಿ ರಾಜ್ಯದಲ್ಲಿ ಕೆಲಸ ಮಾಡಲು ಕಾಂಗ್ರೆಸ್ ಸಿದ್ಧವಿದೆ ಎಂದು ಘೋಷಣೆ ಮಾಡಿತ್ತು.
ಈ ಬಾರಿಯ ಚುನಾವಣೆಯಲ್ಲಿ ಮುಕುಲ್ ಸಂಗ್ಮಾ ಸಾಂಗ್‌ಸಾಕ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಅವರು ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಎನ್‌ಪಿಪಿ ಪಕ್ಷ ಸ್ಪಷ್ಟ ಬಹುಮತದತ್ತ ಸಾಗುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ತಲಾ 4 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದ್ದು, ಟಿಎಂಸಿ 7 ಮತ್ತು ಯುಡಿಪಿ 8 ಸ್ಥಾನದಲ್ಲಿ ಮುನ್ನಡೆ ಪಡೆದಿವೆ. ಎನ್‌ಪಿಪಿ ಸ್ಪಷ್ಟಬಹುಮತ ಪಡೆದು ಅಧಿಕಾರ ಪಡೆಯಲಿದೆ ಎಂದು ಅಂದಾಜಿಸಲಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಮುಲ್ಲಿಕಾರ್ಜನ ಖರ್ಗೆ ರಾಜ್ಯದಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದರು. ಅಲ್ಲದೇ ರಾಜ್ಯದ ಜನರು ಬದಲಾವಣೆಗೆ ಒಂದು ಅವಕಾಶ ನೀಡಿ ಎಂದು ಮನವಿ ಮಾಡಿದ್ದರು. 60 ಸದಸ್ಯ ಬಲದ ಮೇಘಾಲಯ ವಿಧಾನಸಭೆಯಲ್ಲಿ 369 ಅಭ್ಯರ್ಥಿಗಳು ಕಣದಲ್ಲಿದ್ದಾರೆ.












Click it and Unblock the Notifications