MP: ಅಪಹರಣ ಪ್ರಕರಣ: ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ- ಸೆಕ್ಷನ್ 144 ಜಾರಿ
ಖಾಂಡ್ವಾ ಏಪ್ರಿಲ್ 17: ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದಲ್ಲಿ ಗುಂಪು ಘರ್ಷಣೆ ಸಂಭವಿಸಿದ್ದು ಖಾಂಡ್ವಾ ನಗರದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಇದರಿಂದಾಗಿ ನಾಲ್ಕು ಅಥವಾ ಹೆಚ್ಚು ಜನ ಸಭೆ ಸೇರುವುದನ್ನು ಪ್ರದೇಶದಲ್ಲಿ ನಿಷೇಧಿಸಲಾಗಿದೆ.
ಆನಂದ್ ನಗರ ಪ್ರದೇಶದ ಕೆಫೆಯೊಂದರಲ್ಲಿ ಭಾನುವಾರ ಬಾಲಕಿಯೊಬ್ಬಳು ಇಬ್ಬರು ಪುರುಷರೊಂದಿಗೆ ಕುಳಿತಿದ್ದಳು. ಈ ವೇಳೆ ಜನರ ಗುಂಪೊಂದು ಇಬ್ಬರು ಪುರುಷರನ್ನು ಅಪಹರಿಸಿದೆ. ಇದು ಘರ್ಷಣೆಗೆ ಕಾರಣವಾಗಿದೆ ಎಂದು ಮಧ್ಯಪ್ರದೇಶ ಖಾಂಡ್ವಾ ನಗರದ ಪೊಲೀಸರು ತಿಳಿಸಿದ್ದಾರೆ.

ಕೋಮು ಕಿಚ್ಚು ಹಚ್ಚಲು ವಿನಾಕಾರಣ ಪುರುಷರನ್ನು ಅಪಹರಣ ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಗುಂಪು ಕಲ್ಲು ತೂರಾಟ ನಡೆಸಿದೆ. ಜೊತೆಗೆ ಮೊಘಾಟ್ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ಕೂಡ ಮಾಡಿದೆ. ಈ ವೇಳೆ ಉದ್ವಿಗ್ನತೆ ಉಂಟಾಗಿ ಘರ್ಷಣೆ ನಡೆದಿದೆ. ಕೆಲವರು ಕೋಮುಗಲಭೆ ಸೃಷ್ಟಿಸಲು ಯತ್ನಿಸಿದ್ದು, ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮ್ಮನ್ನು ಅಪಹರಿಸಲಾಗಿತ್ತು ಎಂದು ಇಬ್ಬರು ಪುರುಷರು ಪೊಲೀಸರಿಗೆ ದೂರನ್ನು ನೀಡಿದ್ದರು. ಇದರ ಬೆನ್ನಲ್ಲೆ ಪೊಲೀಸರು ನಾಲ್ವರ ವಿರುದ್ಧ ಥಳಿಸಿದ ಮತ್ತು ಅಪಹರಣದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದರು. ಅಲ್ಲದೆ, ಬಾಲಕಿಯ ದೂರಿನ ಆಧಾರದ ಮೇಲೆ, ಅದೇ ಘಟನೆಗೆ ಸಂಬಂಧಿಸಿದಂತೆ ಮತ್ತೊಂದು ಎಫ್‌ಐಆರ್ ದಾಖಲಿಸಲಾಗಿತ್ತು.

ಎರಡು ಪ್ರಕರಣಗಳ ನಂತರ ಎಫ್‌ಐಆರ್‌ನಲ್ಲಿ ಹೆಸರಿಸಲಾದ ಇಬ್ಬರನ್ನು ಬಂಧಿಸಲಾಗಿದೆ ಮತ್ತು ಇತರ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸುವುದನ್ನು ವಿರೋಧಿಸಿ ಕೆಲವರು ಮೊಘಾಟ್ ಠಾಣೆಗೆ ಆಗಮಿಸಿ ಪ್ರತಿಭಟನೆ ನಡೆಸಿ ಉದ್ವಿಗ್ನತೆಯನ್ನು ಹೆಚ್ಚಿಸಿದರು. ಇನ್ನು ಕೆಲವರು ಕೋಮುಗಲಭೆ ಸೃಷ್ಟಿಸಲು ಯತ್ನಿಸಿದ್ದರಿಂದ ಮುಂದಿನ ಆದೇಶದವರೆಗೆ ನಗರದಲ್ಲಿ ಸಿಆರ್‌ಪಿಸಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈಗ ಪರಿಸ್ಥಿತಿ ಶಾಂತವಾಗಿದೆ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಸತ್ಯೇಂದ್ರ ಶುಕ್ಲಾ ಅವರು, 'ನಗರದಲ್ಲಿ ಶಾಂತಿ ಕದಡುವ ಯತ್ನ ನಡೆದಿದೆ. ಕೆಲ ಕಿಡಿಗೇಡಿಗಳು ವಿನಾಕಾರಣ ಪುರುಷರನ್ನು ಶಂಕಿಸಿ ಅಪಹರಿಸಿದ್ದಾರೆ. ಅದು ನಗರದಲ್ಲಿ ದ್ವೇಷದ ಕಿಚ್ಚನ್ನು ಹೊತ್ತಿಸಿದೆ. ಅಪಹರಣದ ಘಟನೆಯ ನಂತರ ಎಫ್‌ಐಆರ್‌ನಲ್ಲಿ ನಾಲ್ವರನ್ನು ಹೆಸರಿಸಲಾಗಿದೆ ಮತ್ತು ಅವರಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಇವರ ಬಂಧನದಿಮದಾಗಿ ಗುಂಪೊಂದು ಪೊಲೀಸ್ ಠಾಣೆಯಲ್ಲಿ ಗದ್ದಲ ಸೃಷ್ಟಿಸಿ ಕಲ್ಲು ತೂರಾಟ ಮಾಡಿದೆ' ಎಂದರು.
ರಾಜ್ಯದಲ್ಲಿ ಕೋಮದ್ವೇಷ ಹರಡುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ನಾಗರೀಕರು ಎಚ್ಚರಕೆಯಿಂದ ಇರಲು ಮನವಿ ಮಾಡುತ್ತೇನೆ. ಯಾವುದೇ ತಪ್ಪು ಸಂದೇಶಗಳನ್ನು ನಂಬಬೇಡಿ. ಅಂತಹ ಸಂದೇಶಗಳು ಕಂಡು ಬಂದರೆ ನಮಗೆ ಮಾಹಿತಿ ನೀಡಿ ಎಂದು ಪೊಲೀಸ್ ವರಿಷ್ಠಾಧಿಕಾರಿ ಸತ್ಯೇಂದ್ರ ಶುಕ್ಲಾ ಅವರು ಮನವಿ ಮಾಡಿದ್ದಾರೆ.












Click it and Unblock the Notifications