ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ರಾಜೀನಾಮೆಗೆ ಕೇಜ್ರಿವಾಲ್ ಒತ್ತಾಯ
ನವದೆಹಲಿ, ನವೆಂಬರ್ 01: ಗುಜರಾತ್‌ನ ಮೋರ್ಬಿ ಸೇತುವೆ ದುರಂತಕ್ಕೆ ಸಂಬಂಧಿಸಿದಂತೆ ತಕ್ಷಣವೇ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಆ ಮೂಲಕ ವಿಧಾನಸಭೆ ಚುನಾವಣೆಗೆ ಹೋಗಬೇಕು ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ನಡೆದಿರುವ ಮೋರ್ಬಿ ತೂಗು ಸೇತುವೆ ದುರಂತದಲ್ಲಿ 140ಕ್ಕೂ ಹೆಚ್ಚು ಮಂದಿ ಸಾವನ್ನಪ್ಪುವುದಕ್ಕೆ ಬಿಜೆಪಿ ಸರ್ಕಾರವೇ ನೇರ ಹೊಣೆ ಎಂದು ಕೇಜ್ರಿವಾಲ್ ದೂಷಿಸಿದ್ದಾರೆ. ಈ ವರ್ಷಾಂತ್ಯದಲ್ಲಿ ನಡೆಯಲಿರುವ ರಾಜ್ಯ ಚುನಾವಣೆಯ ಪೂರ್ವದಲ್ಲಿ ನಡೆದಿರುವ ದುರಂತವು ರಾಜಕೀಯ ವಲಯದಲ್ಲೂ ಸಾಕಷ್ಟು ಸಂಚಲನ ಮೂಡಿಸುತ್ತಿದೆ.
ಮೋರ್ಬಿ ಸೇತುವೆ ದುರಂತವು ಭ್ರಷ್ಟಾಚಾರದ ಪ್ರತಿಫಲವಾಗಿದೆ ಎಂದು ಆರೋಪಿಸಿದ ಅರವಿಂದ್ ಕೇಜ್ರಿವಾಲ್, ತೂಗು ಸೇತುವೆ ನವೀಕರಣದ ಉಸ್ತುವಾರಿಯನ್ನು ನೀಡುವಾಗ ಸರ್ಕಾರ ಏನು ಮಾಡುತ್ತಿತ್ತು ಎಂದು ಪ್ರಶ್ನಿಸಿದ್ದಾರೆ.

ಗಡಿಯಾರ ತಯಾರಿಸುವ ಕಂಪನಿಗೆ ಸೇತುವೆಯ ಟೆಂಡರ್:
"ಗಡಿಯಾರಗಳನ್ನು ತಯಾರಿಸುವ ಕಂಪನಿಗೆ ಸೇತುವೆಯ ಟೆಂಡರ್ ಅನ್ನು ಏಕೆ ನೀಡಲಾಯಿತು? ಇದರರ್ಥ ಅವರು ಭಾರತೀಯ ಜನತಾ ಪಕ್ಷದೊಂದಿಗೆ (ಬಿಜೆಪಿ) ಸಂಪರ್ಕ ಹೊಂದಿದ್ದರು ಎಂದರ್ಥ. ಈ ಪ್ರಕರಣದ ಎಫ್‌ಐಆರ್‌ನಲ್ಲಿ ಕಂಪನಿ ಅಥವಾ ಅದರ ಮಾಲೀಕರನ್ನು ಉಲ್ಲೇಖಿಸಲಾಗಿಲ್ಲ. ಕಂಪನಿಯ ಮಾಲೀಕರಿಂದ ಆಡಳಿತ ಪಕ್ಷವು ಭಾರಿ ದೇಣಿಗೆ ಪಡೆದಿದೆ ಎಂಬ ಆರೋಪಗಳಿವೆ, ಅಂತಹ ಆರೋಪಗಳ ಬಗ್ಗೆ ತನಿಖೆ ನಡೆಸಬೇಕಾಗಿದೆ," ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು.
ತೇಪೆ ಹಚ್ಚುವ ಕಾರ್ಯಕ್ಕೆ ಕೇಜ್ರಿವಾಲ್ ಸಿಡಿಮಿಡಿ:
ತೂಗು ಸೇತುವೆ ದುರಂತದಲ್ಲಿ ಬದುಕುಳಿದವರನ್ನು ಭೇಟಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಹೋಗುತ್ತಿದ್ದು, ಇದಕ್ಕೂ ಪೂರ್ವದಲ್ಲಿ ಮೋರ್ಬಿ ಸಿವಿಲ್ ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಲಾಗುತ್ತಿದೆ. ಇದನ್ನು ಉಲ್ಲೇಖಿಸಿದ ಅರವಿಂದ್ ಕೇಜ್ರಿವಾಲ್, "ಆಸ್ಪತ್ರೆಯಲ್ಲಿನ ನವೀಕರಣವು ಪ್ರತ್ಯೇಕ ವಿಷಯವಾಗಿದೆ, ಆದರೆ ಈ ವಿಷಯವನ್ನು ಮುಚ್ಚಿಡಲಾಗುತ್ತಿದೆ. ಹೀಗಾಗಿ ಭೂಪೇಂದರ್ ಪಟೇಲ್ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಯೋಗ್ಯರಲ್ಲ, ಆದ್ದರಿಂದ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಕೇಜ್ರಿವಾಲ್ ಒತ್ತಾಯಿಸಿದ್ದಾರೆ.
140ಕ್ಕೂ ಹೆಚ್ಚು ಮಂದಿ ಸಾವು:
ಗುಜರಾತ್‌ನ ಮೊರ್ಬಿ ಸೇತುವೆ ದುರಂತದಲ್ಲಿ 140ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಶೋಧ ಕಾರ್ಯ ಮುಂದುವರಿದಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಲಿದೆ ಎಂದು ತಿಳಿದುಬಂದಿದೆ. ಈಗ ಮೃತಪಟ್ಟವರಲ್ಲಿ 50 ಮಕ್ಕಳು ಹಾಗೂ 40 ಮಹಿಳೆಯರು ಸೇರಿದ್ದಾರೆ.












Click it and Unblock the Notifications