ಮುಂಗಾರು: ಮಹಾರಾಷ್ಟ್ರ, ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆ ಸಂಭವ
ಬೆಂಗಳೂರು, ಜೂನ್ 11: ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಅದರಲ್ಲೂ ಪ್ರಮುಖವಾಗಿ ಕರಾವಳಿ ಪ್ರದೇಶಗಳಲ್ಲಿ ಕಳೆದ 24 ಗಂಟೆಯಲ್ಲಿ ಭಾರೀ ಮಳೆ ಸುರಿದಿದೆ. ಇದೀಗ ಮಹಾರಾಷ್ಟ್ರದ ಥಾಣೆ ಸೇರಿದಂತೆ ಅಹಮದ್ ನಗರ, ಪರ್ಭಾನಿ, ಯೆಟ್ಮಾಲ್, ಬ್ರಹ್ಮಪುರಿ, ರಾಜಾನಂದಗಢ್, ಭವಾನಿಪಟ್ನ, ಪುರಿ, ಅಗರ್ತಲಾ, ಲುಮ್ದಿಂಗ್, ಉತ್ತರ ಲಖಿಂಪುರದಲ್ಲಿ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಮುಂಗಾರು ಮಳೆ ವಿದರ್ಭ, ಛತ್ತೀಸ್ ಗಢ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ನಲ್ಲಿ ಮುಂದಿನ 48 ಗಂಟೆಗಳಲ್ಲಿ ಸುರಿಯಲಿದೆ ಎಂದು ಇಲಾಖೆ ಹೇಳಿದೆ. ಇದೇ ವೇಳೆ ಜಾರ್ಖಂಡ್ ಮತ್ತು ಬಿಹಾರಕ್ಕೂ ಮುಂಗಾರು ಕಾಲಿಡಲಿದ್ದು ಮುಂದಿನ 48 ಗಂಟೆಗಳಲ್ಲಿ ಮಳೆ ಹೊತ್ತು ತರಲಿದೆ ಎಂದು ಹವಾಮಾನ ಮುನ್ಸೂಚನೆ ನೀಡಲಾಗಿದೆ.

ಕರ್ನಾಟಕದಲ್ಲಿ ಮುಂಗಾರು
ಹವಾಮಾನ ಇಲಾಖೆ ಪ್ರಕಾರ ಕರಾವಳಿ ಕರ್ನಾಟಕ, ದಕ್ಷಿಣ ಕೊಂಕಣ್ ಮತ್ತು ಗೋವಾದಲ್ಲಿ ಕಳೆದ 24 ಗಂಟೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಸುರಿದಿದೆ. ಉತ್ತರ ಕೊಂಕಣ್, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ, ಕೇಂದ್ರ ಮಹಾರಾಷ್ಟ್ರ, ದಕ್ಷಿಣ ಒಳನಾಡು ಕರ್ನಾಟಕ ಮತ್ತು ಕೇರಳದಲ್ಲೂ ಭಾರೀ ಮಳೆಯಾಗಿದೆ.
ಇದೇ ಸಂದರ್ಭದಲ್ಲಿ ಹವಾಮಾನ ಇಲಾಖೆ ಮುಂದಿನ 24 ಗಂಟೆಗಳಲ್ಲಿ ಕರಾವಳಿ, ಕರ್ನಾಟಕ, ಗೋವಾ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಕೊಂಕಣ್ ಪ್ರದೇಶ, ಮಣಿಪುರ, ಮಿಜೋರಾಂ, ತ್ರಿಪುರಾ, ಒಡಿಶಾ ಮತ್ತು ಕೇರಳದಲ್ಲಿ ಭಾರೀ ಮಳೆಯಾಗಬಹುದು ಎಂದು ಅಂದಾಜಿಸಿದೆ.

ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ನ ಹಲವು ಪ್ರದೇಶಗಳಲ್ಲಿ ಗಾಳಿ, ಗುಡುಗು ಸಹಿತ ಭಾರೀ ಮಳೆಯಾಗಲಿದೆ. ಇನ್ನು ಪಶ್ಚಿಮ ರಾಜಸ್ಥಾನದಲ್ಲಿ ಬಿಸಿಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿಯಲ್ಲಿ ಬಂಗಾಳ ಕೊಲ್ಲಿ ಕಡೆಯಿಂದ ಗಂಟೆಗೆ 60 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸಲಿದ್ದು ಸಮುದ್ರ ಪ್ರಕ್ಷುಬ್ಧಗೊಳ್ಳಲಿದೆ. ಹಾಗಾಗಿ ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚನೆ ನೀಡಲಾಗಿದೆ.












Click it and Unblock the Notifications