Monsoon 2023: ಈ ಬಾರಿ ಸುದೀರ್ಘ ಮಳೆಗಾಲಕ್ಕೆ ಸಾಕ್ಷಿಯಾಗಲಿದೆ ಭಾರತ- ಹವಾಮಾನ ಇಲಾಖೆ ಮಹತ್ವದ ಮಾಹಿತಿ
ನವದೆಹಲಿ, ಸೆಪ್ಟೆಂಬರ್ 21: ಈ ಬಾರಿ ಸುದೀರ್ಘ ಮಳೆಗಾಲಕ್ಕೆ ಭಾರತ ಸಾಕ್ಷಿಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇನ್ನೂ ಕೆಲವು ದಿನಗಳವರೆಗೆ ನೈಋತ್ಯ ಮಾನ್ಸೂನ್ ಭಾರತದಾದ್ಯಂತ ವಿಸ್ತರಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಈ ಕುರಿತು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಮಾತನಾಡಿದ್ದಾರೆ.
'ನಾವು ದೇಶದ ಹಲವು ಭಾಗಗಳಲ್ಲಿ ಹೊಸ ಪರಿಚಲನೆ ಮತ್ತು ಕಡಿಮೆ ಒತ್ತಡದ ಪ್ರದೇಶಗಳನ್ನು ಕಾಣುತ್ತಿದ್ದೇವೆ, ಆದ್ದರಿಂದ, ಈ ಹಂತದಲ್ಲಿ ಮಳೆಗಾಲ ನಿಲ್ಲುವ ಸಾಧ್ಯತೆಗಳಿಲ್ಲ. ಈ ಬಾರಿಯ ಮಳೆಗಾಲ ಮುಗಿಯುವುದು ತಡವಾಗಲಿದೆ' ಎಂದು ಹೇಳಿದ್ದಾರೆ.

ಮಾನ್ಸೂನ್ ಜೂನ್ ಆರಂಭದಲ್ಲಿ ಭಾರತವನ್ನು ಪ್ರವೇಶಿಸುತ್ತದೆ, ಜುಲೈ ಆರಂಭದ ವೇಳೆಗೆ ಇಡೀ ರಾಷ್ಟ್ರವನ್ನು ಆವರಿಸುತ್ತದೆ. ಮಾನ್ಸೂನ್ ಮಳೆಯು ಸೆಪ್ಟೆಂಬರ್ 17 ರ ಹೊತ್ತಿಗೆ ಉತ್ತರ ಭಾರತದ ರಾಜ್ಯಗಳಿಂದ ಕ್ರಮೇಣ ಕಡಿಮೆಯಾಗಲು ಆರಂಭಿಸುತ್ತದೆ. ತೇವಾಂಶದಲ್ಲಿನ ಇಳಿಕೆ ಸೇರಿದಂತೆ ಹಲವು ಮಾನದಂಡಗಳು ಪರಿಗಣಿಸಿದಾಗ ಮಾನ್ಸೂನ್ ಆಂತ್ಯವಾಗಿದೆ ಎಂದು ಘೋಷಿಸಲಾಗುತ್ತದೆ.
ಈ ವರ್ಷ ಮುಂಗಾರು ಹಂಗಾಮು ದುರ್ಬಲವಾಗಿ ಆರಂಭವಾಗಿದೆ. ಜೂನ್‌ನಲ್ಲಿ ಸರಾಸರಿಗಿಂತ ಶೇ 9ರಷ್ಟು ಕಡಿಮೆ ಮಳೆಯಾಗಿದೆ. ಜುಲೈನಲ್ಲಿ ಇದು ಪ್ರಭಾವಶಾಲಿಯಾಗಿ ಚೇತರಿಸಿಕೊಂಡಿತು. ಸರಾಸರಿಗಿಂತ ಶೇ 13 ರಷ್ಟು ಮಳೆಯನ್ನು ದಾಖಲಿಸಿತು. ಮತ್ತೊಂದೆಡೆ, ಆಗಸ್ಟ್‌ನಲ್ಲಿ ಸರಾಸರಿಗಿಂತ ಶೇ 36 ರಷ್ಟು ಕಡಿಮೆ ಮಳೆ ದಾಖಲಾಗಿದೆ.
ಕರ್ನಾಟಕದಲ್ಲಿ ನಿನ್ನೆ ಸುರಿದ ಮಳೆ ಪ್ರಮಾಣ
ಉತ್ತರ ಕನ್ನಡ: 65.5 ಮಿ.ಮೀ
ತುಮಕೂರು: 55.5 ಮಿ.ಮೀ
ದಕ್ಷಿಣ ಕನ್ನಡ: 49.5 ಮಿ.ಮೀ
ಮೈಸೂರು: 47 ಮಿ.ಮೀ
ವಿಜಯಪುರ: 41 ಮಿ.ಮೀ
ಚಾಮರಾಜನಗರ: 40.5 ಮಿ.ಮೀ
ಕೊಡಗು: 34.5 ಮಿ.ಮೀ
ಉಡುಪಿ: 34.5 ಮಿ.ಮೀ
ಚಿಕ್ಕಮಗಳೂರು: 30 ಮಿ.ಮೀ
ಮಂಡ್ಯ: 28 ಮಿ.ಮೀ
ಬೆಂಗಳೂರು ನಗರ: 26.5 ಮಿ.ಮೀ
ಕೋಲಾರ: 26.5 ಮಿ.ಮೀ
ಹಾಸನ: 25 ಮಿ.ಮೀ
ಯಾದಗಿರಿ: 25 ಮಿ.ಮೀ

ಹೆಚ್ಚು ಮಳೆ ಬಿದ್ದ ಊರುಗಳು
ಹನೇಹಳ್ಳಿ, ಉತ್ತರ ಕನ್ನಡ: 65.5 ಮಿ.ಮೀ
ಹೆಗ್ಡೆ, ಉತ್ತರ ಕನ್ನಡ: 56.5 ಮಿ.ಮೀ
ಕುಪ್ಪೂರು, ತುಮಕೂರು: 55.5 ಮಿ.ಮೀ
ಸೋಮೇಶ್ವರ, ದಕ್ಷಿಣ ಕನ್ನಡ: 49.5 ಮಿ.ಮೀ
ಕೊಡಕಣಿ, ಉತ್ತರ ಕನ್ನಡ: 48 ಮಿ.ಮೀ
ದೇಶದಾದ್ಯಂತ ಮಳೆ ಮನ್ಸೂಚನೆ - ಸೆಪ್ಟೆಂಬರ್ 21
ಉಪ-ಹಿಮಾಲಯ ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ ಮತ್ತು ಬಿಹಾರದಲ್ಲಿ ಭಾರೀ ಮಳೆ ಮತ್ತು ಗುಡುಗು ಸಹಿತ ವ್ಯಾಪಕ ಮಳೆಯು ಸುರಿಯಬಹುದು.
ಸಿಕ್ಕಿಂ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಜಾರ್ಖಂಡ್, ಗಂಗಾ-ಪಶ್ಚಿಮ ಬಂಗಾಳ ಮತ್ತು ಛತ್ತೀಸ್‌ಗಢದಲ್ಲಿ ವ್ಯಾಪಕ ಮಳೆ ಮತ್ತು ಗುಡುಗು ಸಹಿತ ಮಳೆಯಾಗಬಹುದು.

ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಗೋವಾ, ತೆಲಂಗಾಣ ಮತ್ತು ಕೇರಳದಲ್ಲಿ ವ್ಯಾಪಕ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಅಂಡಮಾನ್-ನಿಕೋಬಾರ್ ದ್ವೀಪಗಳು ಮತ್ತು ಲಕ್ಷದ್ವೀಪಗಳಲ್ಲಿ ಚದುರಿದ ಮಳೆ ಮತ್ತು ಗುಡುಗು ಸಹಿತ ಮಳೆಯಾಗಬಹುದು.












Click it and Unblock the Notifications