ಮೋದಿ 2 ಫೋನ್ ಕರೆ; ಸುಮಿಯಲ್ಲಿ 700 ಜನರ ರಕ್ಷಣೆಗೆ ಸಹಕರಿಸಿತು
ನವದೆಹಲಿ, ಮಾರ್ಚ್ 09; ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮುಂದುವರೆದಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಣೆ ಮಾಡುವ ಕಾರ್ಯ ಮುಂದುವರೆದಿದೆ. ಪ್ರಧಾನಿ ನರೇಂದ್ರ ಮೋದಿ ಸೋಮವಾರ ಮಾಡಿದ ಎರಡು ಕರೆಗಳು 'ಆಪರೇಷನ್ ಗಂಗಾ' ಕಾರ್ಯಾಚರಣೆ ವೇಗ ಹೆಚ್ಚಲು ಅನುಕೂಲವಾಗಿದೆ.
ಸೋಮವಾರ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಜೊತೆ ಮಾತುಕತೆ ನಡೆಸಿದ್ದರು. ಇದು ಉಕ್ರೇನ್‌ನ ಸುಮಿ ನಗರದಲ್ಲಿ ಸಿಲುಕಿದ್ದ 700 ಭಾರತೀಯರ ರಕ್ಷಣೆಗೆ ಸಹಾಯಕವಾಗಿದೆ.
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ ಕಾರ್ಯದ ಹೊಣೆ ಹೊತ್ತಿರುವ ಅಧಿಕಾರಿ ಈ ಕುರಿತು ಮಾತನಾಡಿದ್ದಾರೆ. ನರೇಂದ್ರ ಮೋದಿ ಕರೆಗೆ ಇಬ್ಬರು ನಾಯಕರು ಹಸಿರು ನಿಶಾನೆ ತೋರಿಸಿದರು. ಭಾರತೀಯರ ರಕ್ಷಣೆಗೆ ಸಹಕಾರ ನೀಡುವುದಾಗಿ ಭರವಸೆ ಕೊಟ್ಟರು ಎಂದು ಹೇಳಿದರು.

ಸುಮಿ ನಗರದಲ್ಲಿ ಸಿಲುಕಿದ್ದ 700 ಭಾರತೀಯರ ರಕ್ಷಣೆಗೆ ಅಡ್ಡಿಯಾಗಿದ್ದ ಅಂಶಗಳು ತಕ್ಷಣ ಬಗೆಹರಿದವು. ಪ್ರಧಾನಿ ಕರೆಯ ಬಳಿಕ ಮಾಸ್ಕೋ ಮತ್ತು ಕೀವ್ ನಗರದಿಂದ ಹೋದ ಸಂದೇಶಗಳು ಮಾನವೀಯ ಕಾರಿಡಾರ್ ಆಧಾರದ ಮೇಲೆ ಹಾಸ್ಟೆಲ್‌ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳ ರಕ್ಷಣೆಗೆ ಸಹಕರಿಸಿತು.
ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಉಭಯ ನಾಯಕರ ಜೊತೆ ಮೋದಿ ದೂರವಾಣಿ ಮೂಲಕ ಮಾತುಕತೆ ನಡೆಸಲು ಮಾಡಿದ ಪ್ರಯತ್ನ ಫಲ ನೀಡಿತು. ಮಾಸ್ಕೋದಲ್ಲಿರುವ ಭಾರತದ ರಾಯಭಾರಿ ಪವನ್ ಕಪೂರ್ ಮತ್ತು ಕೀವ್‌ನಲ್ಲಿರುವ ಪಾರ್ಥ ಸತ್ಪತಿ ಅಲ್ಲಿನ ಅಧಿಕಾರಿಗಳ ಜೊತೆ ಸಂಪರ್ಕ ಸಾಧಿಸಿದರು.
ಜಿನೀವಾದಲ್ಲಿರುವ ರೆಡ್ ಕ್ರಾಸ್ ಸಂಸ್ಥೆ ಸಹ ಉಕ್ರೇನ್‌ನಲ್ಲಿರುವ ತನ್ನ ಘಟಕಕ್ಕೆ ಸಂದೇಶ ರವಾನೆ ಮಾಡಿತು. ರಷ್ಯಾ ಘೋಷಣೆ ಮಾಡಿದ ಕದನ ವಿರಾಮು ಮುಂದುವರೆಯುವುದೋ ಇಲ್ಲವೋ ಎಂಬ ಆತಂಕ ಮುಂದುವರೆದಿತ್ತು. ಆದರೆ ಮಾನವೀಯ ಕಾರ್ಯಾಚರಣೆ ಕೈಗೊಳ್ಳಲು ಸುರಕ್ಷಿತ ಕಾರಿಡಾರ್ ಘೋಷಣೆ ಮಾಡಿದ್ದು, ಸಹ ಭಾರತೀಯರ ರಕ್ಷಣೆಗೆ ಸಹಾಯಕವಾಯಿತು.
ಕೈ ಜೋಡಿಸಿದ ಉಕ್ರೇನ್; ಸೋಮವಾರ ರಾತ್ರಿ ಸುಮಿ ನಗರದಲ್ಲಿ ಸಿಲುಕಿದ್ದ ಭಾರತೀಯರ ಸ್ಥಳಾಂತರಕ್ಕೆ ಹಸಿರು ನಿಶಾನೆ ಸಿಗುವ ಮೊದಲು ಹಲವಾರು ಫೋನ್, ಕರೆ ಸಂದೇಶಗಳು ವಿನಿಯಮವಾದವು. ಅಲ್ಲಿ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳಿಗೆ ಸಾಮಾಜಿಕ ತಾಲತಾಣಗಳಿಂದ ದೂರವಿರುವಂತೆ ಸಲಹೆ ನೀಡಲಾಗಿತ್ತು. ಯಾವುದೇ ಟ್ವೀಟ್, ಇನ್‌ಸ್ಟಾಗ್ರಾಮ್ ಪೋಸ್ಟ್ ಹಾಕದಂತೆ ಸೂಚಿಸಲಾಗಿತ್ತು.
ಸುಮಿ ನಗರದ ಮೂರು ಕಡೆ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳನ್ನು ಸ್ಥಳಾಂತರ ಕಾರ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಸ್ಥಳೀಯ ಉಕ್ರೇನ್ ಅಧಿಕಾರಿಗಳು, ರಾಯಭಾರ ಕಚೇರಿ ಅಧಿಕಾರಿಗಳು ಸಹ ಈ ಕಾರ್ಯಕ್ಕೆ ಕೈ ಜೋಡಿಸಿದರು.
ಭಾರತೀಯರ ಸ್ಥಳಾಂತರಕ್ಕೆ ವಾಹನಗಳ ವ್ಯವಸ್ಥೆ ಮಾಡುವುದು, ಚಾಲಕರನ್ನು ಹುಡುಕುವುದು ದೊಡ್ಡ ಸವಾಲು ಆಗಿತ್ತು. ಉಕ್ರೇನ್ ಸೇನಾಪಡೆ ಈ ವಿಚಾರದಲ್ಲಿ ಅಗತ್ಯ ಸಹಕಾರ ನೀಡಿತು. ದೂರ ಪ್ರಯಾಣದ ವಾಹನಗಳಿಗೆ ಇಂಧನ ಕೊರತೆ ಸಹ ಇತ್ತು. ಕೆಲವು ಖಾಸಗಿ ಕಾರುಗಳನ್ನು ಬಳಕೆ ಮಾಡಿಕೊಳ್ಳಲಾಯಿತು.
ರಸ್ತೆಗಳಿಗೆ ಹಾನಿ; ಸುಮಿಯಿಂದ ಹೊರಟ ಭಾರತೀಯರಿಗೆ 12 ವಾಹನಗಳ ವ್ಯವಸ್ಥೆ ಮಾಡಲಾಯಿತು. ಕೆಲವು ಕಡೆ ರಸ್ತೆಗಳಿಗೆ ಹಾನಿಯಾಗಿದೆ, ಸೇತುವೆಗಳು ಧ್ವಂಸಗೊಂಡಿವೆ ಎಂಬ ಮಾಹಿತಿ ಸ್ಥಳೀಯ ಅಧಿಕಾರಿಗಳಿಗೆ ಇತ್ತು. ಆದ್ದರಿಂದ ಭಾರತೀಯರು ಇದ್ದ ವಾಹನಗಳು ಸಾಗುವ ಮಾರ್ಗವನ್ನು ಅವರೇ ನಿರ್ಧರಿಸಿದರು.
ವಿದ್ಯಾರ್ಥಿಗಳು ಇದ್ದ ವಾಹನಗಳು ಸುಮಿಯಿಂದ ಸೋಮವಾರ ರಾತ್ರಿ ಹೊರಡು ಪೋಲ್ಟವಾ ತಲುಪಿದವು. ಮಂಗಳವಾರ ಅಲ್ಲಿಂದ ರೈಲಿನ ಮೂಲಕ ಬೇರೆ ದೇಶಗಳನ್ನು ವಿದ್ಯಾರ್ಥಿಗಳು ತಲುಪಿದರು. ಕಾಗದ ವ್ಯವಹಾರಗಳು ಪೂರ್ಣಗೊಂಡ ಬಳಿಕ ಬುಧವಾರ ಮೂರು ವಿಮಾನಗಳ ಮೂಲಕ ವಿದ್ಯಾರ್ಥಿಗಳು ಭಾರತಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ಇದೊಂದು ಸವಾಲಿನ ಕಾರ್ಯಾಚರಣೆಯಾಗಿತ್ತು. ಎಲ್ಲರ ಸಹಕಾರ ಮತ್ತು ಪ್ರಯತ್ನದಿಂದಾಗಿ ಕಾರ್ಯಾಚರಣೆಗೆ ವೇಗ ಸಿಕ್ಕಿತು. ಭಾರತೀಯ ವಿದ್ಯಾರ್ಥಿಗಳ ರಕ್ಷಣೆ ಸಾಧ್ಯವಾಯಿತು ಎಂದು ವಿದೇಶಾಂಗ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications