ಮೋದಿ 2.0 ಕ್ಯಾಬಿನೆಟ್ ವಿಸ್ತರಣೆ ಆಹ್ವಾನ ಪತ್ರಿಕೆ, ಸಂಭಾವ್ಯರ ಪಟ್ಟಿ
ನವದೆಹಲಿ, ಜುಲೈ 7: ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಎನ್ ಡಿಎ 2.0 ಸರ್ಕಾರದ ಸಚಿವ ಸಂಪುಟ ಪುನರ್ ರಚನೆ/ವಿಸ್ತರಣೆ ಇಂದು ಸಂಜೆ 6 ಗಂಟೆಗೆ ನಡೆಯಲಿದೆ. ಈ ಕುರಿತಂತೆ ವಿಶೇಷ ಆಹ್ವಾನ ಪತ್ರಿಕೆ ಪ್ರಕಟಿಸಲಾಗಿದೆ. ಜೊತೆಗೆ ಸಂಭಾವ್ಯರ ಪಟ್ಟಿ ಕುತೂಹಲ ಕೆರಳಿಸಿದೆ.
ನಂ.7, ಲೋಕ್ ಕಲ್ಯಾಣ್ ಮಾರ್ಗ್ ನಿವಾಸದಲ್ಲಿ ಉನ್ನತಮಟ್ಟದ ಸಭೆಯಲ್ಲಿ ಹಾಲಿ ಸಚಿವರ ಮೌಲ್ಯಮಾಪನ ನಡೆಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹಾಗೂ ಪ್ರಧಾನಿ ಮೋದಿ ಅಂತಿಮ ಪಟ್ಟಿ ಸಿದ್ಧಪಡಿಸಿದ್ದಾರೆ. ಆದರೆ ಇಂದು ಬೆಳಗ್ಗೆ ನಿಗದಿಯಾಗಿದ್ದ ಸಚಿವರ ಸಮೂಹ(CCEA) ಹಾಗೂ ಸಚಿವ ಸಂಪುಟ ಸಭೆ ರದ್ದಾಗಿದ್ದು ಏಕೆ ಎಂಬುದು ಮಾತ್ರ ಇನ್ನೂ ಬಹಿರಂಗವಾಗಿಲ್ಲ. ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ್ ಸೇರಿದಂತೆ ಐದು ರಾಜ್ಯಗಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೊಸಬರ ಆಯ್ಕೆ ಮಾಡಲಾಗಿದೆ.
ಸಂಭಾವ್ಯ ಪಟ್ಟಿಯಲ್ಲಿರುವವರ ಪೈಕಿ 13 ಮಂದಿ ಈಗಾಗಲೇ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಸ್ಥಾನ ಖಚಿತಪಡಿಸಿಕೊಂಡಿರುವವರ ಹೆಸರು ಹೀಗಿದೆ:
ಜ್ಯೋತಿರಾದಿಯಾ ಸಿಂಧಿಯಾ, ಸರ್ಬಾನಂದ್ ಸೋನೊವಾಲ್, ಪಶುಪತಿ ಪರಾಸ್, ಅನುಪ್ರಿಯ ಪಟೇಲ್, ಪಂಕಜ್ ಚೌಧುರಿ, ರೀತಾ ಬಹುಗುಣ ಜೋಶಿ, ವರುಣ್ ಗಾಂಧಿ, ಆರ್ ಸಿ ಪಿ ಸಿಂಗ್, ರಾಹುಲ್ ಕಸ್ವಾನ್ ಹಾಗೂ ಸಿಪಿ ಜೋಶಿ ದೆಹಲಿಯಲ್ಲಿದ್ದಾರೆ. ನಾರಾಯಣ ರಾಣೆ, ರಾಮಶಂಕರ್ ಕತಾರಿಯಾ ಅಲ್ಲದೆ ಸಕಲ್ ದೀಪ್ ರಾಜ್ ಭರ್, ರಂಜನ್ ಸಿಂಗ್ ರಾಜ್ ಕುಮಾರ್, ಪಂಕಜ್ ಚೌಧುರಿ ಹೆಸರು ಕೇಳಿ ಬಂದಿವೆ.

ಕರ್ನಾಟಕದಿಂದ ಯಾರು?: ಚಿತ್ರದುರ್ಗದ ಸಂಸದ ಎ. ನಾರಾಯಣಸ್ವಾಮಿ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಸಂಪುಟ ಸೇರುವುದು ಬಹುತೇಕ ಅಂತಿಮ ಎನ್ನಲಾಗಿದೆ. ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಕೂಡ ಸಂಪುಟ ಸೇರುವ ಸಾಧ್ಯತೆಯಿದೆ.
ಸಂಪುಟ ವಿಸ್ತರಣೆ ಬಳಿಕ ಹಾಲಿ ಸಂಪುಟದ ಗಾತ್ರ 60 ರಿಂದ 79ಕ್ಕೇರಲಿದೆ. ಈಗ 21 ಕ್ಯಾಬಿನೆಟ್ ದರ್ಜೆ ಸಚಿವರು, 9 ರಾಜ್ಯ ಸಚಿವರು(ಸ್ವತಂತ್ರ ಖಾತೆ) ಹಾಗೂ 29 ರಾಜ್ಯ ಸಚಿವರಿದ್ದಾರೆ. 81 ಸ್ಥಾನಗಳನ್ನು ಹೊಂದಬಹುದಾಗಿದೆ. ಇಬ್ಬರು ಸಚಿವರ ನಿಧನ, ಮಿತ್ರಪಕ್ಷಗಳಾಗಿದ್ದ ಅಕಾಲಿದಳ, ಶಿವಸೇನೆ ಮೈತ್ರಿ ಕಳೆದುಕೊಂಡಿದ್ದರಿಂದ ಉಂಟಾಗಿರುವ ಖಾಲಿ ಸ್ಥಾನ ಸೇರಿಸಿ 28 ಸ್ಥಾನಗಳನ್ನು ತುಂಬಬಹುದಾಗಿದೆ. ಜೊತೆಗೆ ಪ್ರಕಾಶ್ ಜಾವಡೇಕರ್, ನರೇಂದ್ರ ಸಿಂಗ್ ತೋಮರ್, ಪಿಯೂಶ್ ಗೋಯೆಲ್, ಹರ್ದೀಪ್ ಸಿಂಗ್ ಪುರಿ ನಿಭಾಯಿಸುತ್ತಿರುವ ಹೆಚ್ಚುವರಿ ಖಾತೆಗಳನ್ನು ಮೋದಿ ಅವರು ಹೊಸಬರಿಗೆ ಹಂಚಬೇಕಾಗಿದೆ
ಆಹ್ವಾನ ಪತ್ರಿಕೆ: ಕೇಂದ್ರ ಮಂತ್ರಿ ಪರಿಷತ್ ಸೇರಲಿರುವ ಮಂತ್ರಿಗಳ ಶಪಥ ಗ್ರಹಣ ಸಮಾರೋಹ ಸಮಾರಂಭವು ರಾಷ್ಟ್ರಪತಿ ಭವನದಲ್ಲಿ ಬುಧವಾರ ಆಷಾಢ 16, 1943ನೇ ಶಖೆ(ಜುಲೈ 7, 2021) ಸಂಜೆ 6 ಗಂಟೆಗೆ ನಡೆಯಲಿದೆ. ಯಾವ ರೀತಿ ಪೋಷಾಕು ಧರಿಸಬೇಕು ಎಂಬುದನ್ನು ಕೆಳಗೆ ಉಲ್ಲೇಖಿಸಲಾಗಿದೆ.












Click it and Unblock the Notifications