ಹಿಂಸಾಚಾರ-ಪೀಡಿತ ನುಹ್, ಗುರುಗ್ರಾಮ್‌ನಲ್ಲಿ ಆಗಸ್ಟ್ 5 ರವರೆಗೆ ಇಂಟರ್ನೆಟ್, ಎಸ್‌ಎಂಎಸ್ ಸೇವೆ ಬ್ಯಾನ್
ನವದೆಹಲಿ, ಆಗಸ್ಟ್. 03: ಹರಿಯಾಣದ ನುಹ್ ಮತ್ತು ರಾಜ್ಯದ ಇತರ ಕೆಲವು ಸ್ಥಳಗಳಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಎಸ್‌ಎಂಎಸ್ ಸೇವೆಗಳನ್ನು ಆಗಸ್ಟ್ 5 ರವರೆಗೆ ಸ್ಥಗಿತಗೊಳಿಸಲಾಗುವುದು ಎಂದು ರಾಜ್ಯ ಸರ್ಕಾರ ಬುಧವಾರ ತಿಳಿಸಿದೆ. ಕೋಮು ಘರ್ಷಣೆ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ.
ನುಹ್ ಜೊತೆಗೆ, ಫರಿದಾಬಾದ್, ಪಲ್ವಾಲ್ ಮತ್ತು ಗುರುಗ್ರಾಮ್ ಜಿಲ್ಲೆಯ ಸೋಹ್ನಾ, ಪಟೌಡಿ ಮತ್ತು ಮಾನೇಸರ್ ಉಪ-ವಿಭಾಗದ ಪ್ರಾದೇಶಿಕ ನ್ಯಾಯವ್ಯಾಪ್ತಿಯಲ್ಲಿಯೂ ಇಂಟರ್ನೆಟ್ ಮತ್ತು ಎಸ್‌ಎಂಎಸ್ ಸೇವೆಗಳು ಸ್ಥಗಿತಗೊಳ್ಳಲಿವೆ. ಇನ್ನು, ಬುಧವಾರ ರಾತ್ರಿ ನುಹ್ ಜಿಲ್ಲೆಯ ಎರಡು ಮಸೀದಿಗಳ ಮೇಲೆ ಮೊಲೊಟೊವ್ ಕಾಕ್ಟೈಲ್ (ಪೆಟ್ರೋಲ್ ಬಾಂಬ್) ಗಳನ್ನು ಎಸೆಯಲಾಗಿದೆ ಎಂದು ಹರಿಯಾಣ ಪೊಲೀಸರು ತಿಳಿಸಿದ್ದಾರೆ.

ಸೋಮವಾರ ಸಂಜೆ 4 ಗಂಟೆಯಿಂದ ನುಹ್ ಜಿಲ್ಲೆಯಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಎಸ್‌ಎಂಎಸ್ ಸೇವೆಗಳನ್ನು ಸ್ಥಗಿತಗೊಳಿಸಲು ಸರ್ಕಾರ ಆದೇಶಿಸಿತ್ತು. ನಂತರ ತೀವ್ರ ಕೋಮು ಉದ್ವಿಗ್ನತೆ ಮತ್ತು ಸಾರ್ವಜನಿಕ ಶಾಂತಿ ಭಂಗದ ದೃಷ್ಟಿಯಿಂದ ಆಗಸ್ಟ್ 2 ರವರೆಗೆ ಇತರ ಕೆಲವು ಭಾಗಗಳಲ್ಲಿ ನಿರ್ಬಂಧಗಳನ್ನು ವಿಧಿಸಿತ್ತು. ಹಿಂಸಾಚಾರ ಕಡಿಮೆಯಾಗದ ಕಾರಣ ನುಷೇಧವನ್ನು ಮುಂದುವರೆಸಲಾಗಿದೆ.
ಮೊಬೈಲ್ ಇಂಟರ್ನೆಟ್ ಮತ್ತು ಎಸ್‌ಎಂಎಸ್ ಸೇವೆಗಳ ಅಮಾನತುವನ್ನು ಆಗಸ್ಟ್ 5 ರವರೆಗೆ ವಿಸ್ತರಿಸುವ ಆದೇಶದಲ್ಲಿ ಹೀಗಿದೆ. " ಹರಿಯಾಣ ರಾಜ್ಯದ ಗುರುಗ್ರಾಮ್ ಜಿಲ್ಲೆಯ ಮನೇಸರ್ ಮತ್ತು ನುಹ್, ಫರಿದಾಬಾದ್, ಪಲ್ವಾಲ್ ಮತ್ತು ಉಪ ವಿಭಾಗದ ಸೊಹ್ನಾ, ಪಟೌಡಿಯ ಪ್ರಾದೇಶಿಕ ನ್ಯಾಯವ್ಯಾಪ್ತಿಯಲ್ಲಿ ಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಯಾವುದೇ ಭಂಗವನ್ನು ತಡೆಯಲು ಈ ಆದೇಶವನ್ನು ವಿಸ್ತರಿಸಲಾಗಿದೆ. ಇದು 05.08.2023 (23:59 ಗಂಟೆಗಳು) ವರೆಗೆ ಜಾರಿಯಲ್ಲಿರುತ್ತದೆ" ಎಂದಿದೆ.
ಹಿಂಸಾಚಾರ, ಕೋಮು ಘರ್ಷಣೆ ಕುರಿತ ಮತ್ತಷ್ಟು ಮಾಹಿತಿ
ಬುಧವಾರ ಗುರುಗ್ರಾಮ್‌ನಲ್ಲಿ ಬೆಂಕಿ ಹಚ್ಚುವಿಕೆ ಮತ್ತು ವಿಧ್ವಂಸಕ ಕೃತ್ಯಗಳು ಮುಂದುವರೆದಿದ್ದು, ಬಜರಂಗದಳದ ಕಾರ್ಯಕರ್ತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಕಾರಣ ಕೇಂದ್ರ ಪಡೆಗಳ ನಾಲ್ಕು ತಂಡಗಳನ್ನು ಕಳಿಸುವಂತೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಕೋರಿದ್ದಾರೆ. ಪಕ್ಕದ ನುಹ್‌ನಿಂದ ಪ್ರಾರಂಭವಾದ ಕೋಮು ಹಿಂಸಾಚಾರದಲ್ಲಿ ಮೃತರ ಸಂಖ್ಯೆ ಆರಕ್ಕೆ ತಲುಪಿದೆ. ಹರಿಯಾಣದಲ್ಲಿ ಈಗಾಗಲೇ ಇಪ್ಪತ್ತು ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿದೆ. ನುಹ್‌ನಲ್ಲಿ 14, ಪಲ್ವಾಲ್‌ನಲ್ಲಿ ಮೂರು, ಗುರುಗ್ರಾಮ್‌ನಲ್ಲಿ ಎರಡು ಮತ್ತು ಫರಿದಾಬಾದ್‌ನಲ್ಲಿ ಒಂದು ಪಡೆಯಿದೆ.

ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ, ಹರಿಯಾಣದ ನುಹ್ ಮತ್ತು ಇತರ ಸ್ಥಳಗಳಲ್ಲಿ ನಡೆದ ಹಿಂಸಾಚಾರವು ಬಿಜೆಪಿ-ಜೆಜೆಪಿ ಸರ್ಕಾರದ ವೈಫಲ್ಯದ ಪರಿಣಾಮವಾಗಿದೆ ಎಂದು ಆರೋಪಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಗೆ ಭಂಗವನ್ನು ತಡೆಯಲು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ ಎಂದು ಹೇಳಿದ್ದು, ಜನರು ವದಂತಿಗಳಿಗೆ ಕಿವಿಗೊಡದೆ ಶಾಂತಿ, ಸೌಹಾರ್ದತೆ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.
ನುಹ್‌ನಲ್ಲಿನ ಹಿಂಸಾಚಾರವನ್ನು ಉತ್ತೇಜಿಸುವಲ್ಲಿ ಸಾಮಾಜಿಕ ಮಾಧ್ಯಮವು ಮಹತ್ವದ ಪಾತ್ರ ವಹಿಸಿದೆ. ಹೀಗಾಗಿ ಜುಲೈ 21 ರಿಂದ ಸಾಮಾಜಿಕ ಮಾಧ್ಯಮ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ರಾಜ್ಯ ಸರ್ಕಾರವು ಮೂರು ಸದಸ್ಯರ ಸಮಿತಿಯನ್ನು ರಚಿಸಿದೆ ಎಂದು ಹರಿಯಾಣದ ಗೃಹ ಸಚಿವ ಅನಿಲ್ ವಿಜ್ ಹೇಳಿದ್ದಾರೆ. ದ್ವೇಷ ಅಥವಾ ತಪ್ಪು ಮಾಹಿತಿ ಹರಡುವ ವ್ಯಕ್ತಿಗಳ ವಿರುದ್ಧ ಸಮಿತಿಯು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಭರವದೆ ನೀಡಿದ್ದಾರೆ.
ಇನ್ನು, ನುಹ್‌ನಲ್ಲಿ ಹಿಂಸಾಚಾರ ದಾಳಿಯನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಅದರ ಯುವ ಘಟಕ ಬಜರಂಗದಳ ಬುಧವಾರ ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿದೆ. ವಿಎಚ್‌ಪಿ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಮಾತನಾಡಿ, ಪ್ರತಿಭಟನೆಯಲ್ಲಿ ಲಕ್ಷಗಟ್ಟಲೆ ಜನರು ಭಾಗವಹಿಸುವ ಮೂಲಕ ದೇಶದ ಎಲ್ಲ ಜಿಲ್ಲೆಗಳಲ್ಲಿ ಯಶಸ್ವಿಯಾಗಿದೆ ಎಂದಿದ್ದಾರೆ.
ಗುರುಗ್ರಾಮ್‌ನಲ್ಲಿ ನಡೆದ ಕೋಮು ಹಿಂಸಾಚಾರದ ನಂತರ, ಕೆಲವು ಮುಸ್ಲಿಂ ವಲಸಿಗರು ಸ್ವಲ್ಪ ದಿನಗಳವರೆಗೆ ನಗರವನ್ನು ತೊರೆಯಲು ಯೋಚಿಸುತ್ತಿದ್ದಾರೆ. ನುಹ್‌ನಲ್ಲಿ, ಕೆಲವು ಹಿಂದೂ ವಲಸಿಗರು ನಗರವನ್ನು ತೊರೆಯಲು ನಿರ್ಧರಿಸಿದ್ದಾರೆ. ಜಿಲ್ಲೆಯಲ್ಲಿ ಕರ್ಫ್ಯೂ ಜಾರಿಯಾಗಿರುವುದರಿಂದ ಮಕ್ಕಳು ಸೇರಿದಂತೆ ವಲಸೆ ಕುಟುಂಬಗಳು ಕಾಲ್ನಡಿಗೆಯಲ್ಲಿ ತೆರಳಲು ಸಿದ್ಧತೆ ನಡೆಸಿವೆ.












Click it and Unblock the Notifications