#ಮಿಟೂಗೆ ಮೊದಲ ಜಯ, ಕೇಂದ್ರ ಮಂತ್ರಿ ಎಂಜೆ ಅಕ್ಬರ್ ರಾಜೀನಾಮೆ
ನವದೆಹಲಿ, ಅಕ್ಟೋಬರ್ 17: #ಮಿಟೂ ಅಭಿಯಾನಕ್ಕೆ ಮೊದಲ ಜಯ ದೊರೆತಿದೆ. ಇದೇ ಅಭಿಯಾನದಡಿ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಗುರಿ ಆಗಿದ್ದ ಕೇಂದ್ರ ಮಂತ್ರಿ ಎಂಜೆ ಅಕ್ಬರ್ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮಾಜಿ ಸಂಪಾದಕ ಹಾಗೂ ಕೇಂದ್ರದ ವಿದೇಶಾಂಗ ರಾಜ್ಯ ಖಾತೆ ಸಚಿವ ಆಗಿರುವ ಎಂಜೆ ಅಕ್ಬರ್ ವಿರುದ್ಧ 20 ಪತ್ರಕರ್ತೆಯರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಅವರ ವಿರುದ್ಧ ಪ್ರಕರಣ ಸಹ ದಾಖಲಾಗಿತ್ತು.
ಎಂಜೆ ಅಕ್ಬರ್ ಅವರೊಂದಿಗೆ ಈ ಹಿಂದೆ ಕೆಲಸ ಮಾಡಿದ್ದ ಪ್ರಿಯಾ ರಮಣಿ ಎಂಬುವರು ಮೊದಲಿಗೆ ಟ್ವಿಟ್ಟರ್‌ನಲ್ಲಿ #ಮಿಟೂ ಅಭಿಯಾನದ ಅಡಿ ಎಂಜೆ ಅಕ್ಬರ್ ಅವರ ಕಾಮಚೇಷ್ಟೆಗಳ ಬಗ್ಗೆ ವಿವರವಾಗಿ ಬರೆದುಕೊಂಡಿದ್ದರು.
ಇದರ ನಂತರ ಹಲವು ಪತ್ರಕರ್ತೆಯರು ಇದಕ್ಕೆ ಧನಿ ಗೂಡಿಸಿದ್ದರು. ಸುಮಾರು 20 ಪತ್ರಕರ್ತೆಯರು ಅಕ್ಬರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡುವ ಮೂಲಕ ಅಕ್ಬರ್ ಹೆಣ್ಣುಬಾಕತನವನ್ನು ಜಾಹೀರು ಮಾಡಿದ್ದರು.

ಕಾಂಗ್ರೆಸ್‌ನಿಂದ ಪ್ರತಿಭಟನೆ
ಕಾಂಗ್ರೆಸ್ ಸಹ ಅಕ್ಬರ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ಮಾಡಿತ್ತು. ಸರ್ಕಾರ ಸಹ ಈ ಪ್ರಕರಣದಿಂದ ಭಾರಿ ಮುಜುಗರಕ್ಕೆ ಒಳಗಾಗಿತ್ತು. ಅಂತಿಮವಾಗಿ ಇಂದು ಎಂಜೆ ಅಕ್ಬರ್ ಇಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

'ಸುಳ್ಳು ಆರೋಪದ ವಿರುದ್ಧ ಹೋರಾಡಲು ರಾಜೀನಾಮೆ'
ರಾಜೀನಾಮೆ ನೀಡಿರುವ ಬಗ್ಗೆ ಹೇಳಿಕೆ ನೀಡಿರುವ ಅವರು, ನನ್ನ ಮೇಲೆ ಸುಳ್ಳು ಆರೋಪಗಳು ಬಂದಿರುವ ಕಾರಣ, ರಾಜೀನಾಮೆ ನೀಡಿ ನ್ಯಾಯಾಲಯದಲ್ಲಿ ನ್ಯಾಯಕ್ಕಾಗಿ ಸ್ವಂತ ಬಲದ ಮೇಲೆ ಹೋರಾಡುತ್ತೇನೆ ಎಂದಿದ್ದಾರೆ.

ಮೋದಿ, ಸುಷ್ಮಾ ಸ್ವರಾಜ್‌ಗೆ ಧನ್ಯವಾದಗಳು
ಇಷ್ಟು ದಿನ ದೇಶ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ನರೇಂದ್ರ ಮೋದಿ ಹಾಗೂ ಸುಷ್ಮಾ ಸ್ವರಾಜ್ ಅವರಿಗೆ ಧನ್ಯವಾದಗಳು ಎಂದು ಅವರು ಬರೆದುಕೊಂಡಿದ್ದಾರೆ.

ಅಕ್ಬರ್ ಪರ ವಾದಿಸಲು 97 ವಕೀಲರು
ಲೈಂಗಿಕ ಕಿರುಕುಳ ಆರೋಪಕ್ಕೆ ಸಿಲುಕಿರುವ ಎಂಜೆ ಅಕ್ಬರ್ ಪರ ವಾದಿಸಲು 97 ವಕೀಲರ ದೊಡ್ಡ ತಂಡ ತಯಾರಾಗಿದೆ. ಈಗಾಗಲೇ ಅಕ್ಬರ್ ಅವರು ತಮ್ಮ ವಿರುದ್ಧ ಆರೋಪ ಮಾಡಿರುವ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.












Click it and Unblock the Notifications