ಕ್ರೈಸ್ತರ ನಾಡಿನಲ್ಲಿ ಮೂರನೇ ಬಾರಿ ಮೈಕೊಡವಿ ನಿಂತ 'ಮಿಜೋ'
ಐಜ್ವಾಲ್, ಡಿಸೆಂಬರ್ 11: ಹತ್ತು ವರ್ಷದ ಬಳಿಕ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್ಎಫ್) ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದೆ.
40 ಕ್ಷೇತ್ರಗಳಲ್ಲಿ 26ರಲ್ಲಿ ಗೆಲ್ಲುವ ಮೂಲಕ ಎಂಎನ್ಎಫ್, ಆಡಳಿತಾರೂಢ ಕಾಂಗ್ರೆಸ್‌ಗೆ ಆಘಾತ ನೀಡಿದೆ.
ಎರಡು ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ಕಾಂಗ್ರೆಸ್‌ನ ಲಾಲ್ ತಾನ್ ವಹ್ಲಾ ಚಂಪಾಯಿ ಈ ಚುನಾವಣೆಯಲ್ಲಿ ಎರಡು ಸ್ಥಾನಗಳಲ್ಲಿ ಸ್ಪರ್ಧಿಸಿದ್ದರು. ಈ ಎರಡರಲ್ಲಿಯೂ ಅವರು ಸೋಲಿನ ಕಹಿ ಅನುಭವಿಸಿದ್ದಾರೆ.

ಎಂಎನ್ಎಫ್ ಮಿಜೋರಾಂನಲ್ಲಿ ಈ ಹಿಂದೆ ಎರಡು ಬಾರಿ ಸರ್ಕಾರ ರಚಿಸಿತ್ತು. 2008ರಲ್ಲಿ ಅಧಿಕಾರ ಕಳೆದುಕೊಂಡಿದ್ದ ಅದು ಆ ಚುನಾವಣೆಯಲ್ಲಿ ಕೇವಲ ಮೂರು ಸೀಟುಗಳನ್ನು ಗೆದ್ದಿತ್ತು.
ಎಂಎನ್ಎಫ್ ಅಧ್ಯಕ್ಷ ಜೊರಾಂತಂಗಾ ಸರ್ಕಾರ ರಚನೆಗೆ ಸಕಲ ಸಿದ್ಧತೆ ನಡೆಸಿದ್ದಾರೆ. ಮದ್ಯ ನಿಷೇಧ, ರಸ್ತೆ ದುರಸ್ತಿ ಮತ್ತು ಸಾಮಾಜಿಕ ಆರ್ಥಿಕ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ತಮ್ಮ ಸರ್ಕಾರದ ಮೊದಲ ಆದ್ಯತಾ ಕಾರ್ಯಕ್ರಮಗಳಾಗಿವೆ ಎಂದು ಘೋಷಿಸಿದ್ದಾರೆ.
ಕ್ರಿಶ್ಚಿಯನ್ನರೇ ಬಹುಸಂಖ್ಯಾತ ಸಮುದಾಯದವರಾಗಿರುವ ಇಲ್ಲಿ ಶೇ 87ರಷ್ಟು ಕ್ರೈಸ್ತ ಮತದಾರರಿದ್ದಾರೆ.
ಇಲ್ಲಿನ 40 ವಿಧಾನಸಭಾ ಕ್ಷೇತ್ರಗಳಿಗೆ ನ. 28ರಂದು ಚುನಾವಣೆ ನಡೆದಿತ್ತು. ಕಣದಲ್ಲಿ 210 ಅಭ್ಯರ್ಥಿಗಳಿದ್ದರು.
ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಎಂಎನ್ಎಫ್ ಪೈಪೋಟಿ ನೀಡುವ ನಿರೀಕ್ಷೆಯಿತ್ತು. ಆದರೆ, ಎಂಎನ್ಎಫ್ ಭಾರಿ ಮುನ್ನಡೆ ಸಾಧಿಸಿ ಕಾಂಗ್ರೆಸ್‌ಗೆ ಮಣ್ಣುಮುಕ್ಕಿಸಿದೆ. ಈ ನಡುವೆ ಬಿಜೆಪಿ ಇದೇ ಮೊದಲ ಬಾರಿಗೆ ಇಲ್ಲಿ ಖಾತೆ ತೆರೆದಿರುವುದು ಈ ಚುನಾವಣೆಯ ವಿಶೇಷ.
ರಾಜ್ಯದಾದ್ಯಂತ ಚರ್ಚ್ ಬೆಂಬಲ ಎಂಎನ್‌ಎಫ್‌ಗೆ ದೊರೆತಿತ್ತು. ಚರ್ಚ್ ಬೆಂಬಲಿತ ಮಿಜೋರಾಂ ಪೀಪಲ್ಸ್ ಫೋರಂ ಚುನಾವಣಾ ಕಣ್ಗಾವಲು ಪಡೆಯಂತೆ ಕಾರ್ಯನಿರ್ವಹಿಸಿತ್ತು.
2003ರ ವಿಧಾನಸಭೆ ಚುನಾವಣೆ ವೇಳೆ ಮಿಜೋರಾಂನಲ್ಲಿ ತೀವ್ರ ಹಿಂಸಾಚಾರ ನಡೆದಿತ್ತು. ಇಲ್ಲಿ ನಿರಂತರ ನಡೆಯುತ್ತಿದ್ದ ಹಿಂಸಾಚಾರಕ್ಕೆ ಬೆದರಿ 1997ರಲ್ಲಿ ಬ್ರೂಸ್ ಎಂಬ ಬುಡಕಟ್ಟಿನ ಜನರು ತಮ್ಮ ಊರುಗಳನ್ನು ತೊರೆದಿದ್ದರು.












Click it and Unblock the Notifications