ಎರಡು ದಿನ ದೆಹಲಿ ಪ್ರವಾಸ: ಮಹತ್ವದ ಮಾಹಿತಿ ನೀಡಿದ ಸಚಿವ ಎಂ ಬಿ ಪಾಟೀಲ್
ನವದೆಹಲಿ, ಸೆಪ್ಟೆಂಬರ್ 11: ಮುಂಬರುವ ಫೆಬ್ರವರಿ 12ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ, ಜರ್ಮನಿ ಮತ್ತು ದಕ್ಷಿಣ ಕೊರಿಯಾ ದೇಶಗಳ ಹೈಕಮಿಷನರುಗಳನ್ನು ಭೇಟಿ ಮಾಡಿ, ಆಹ್ವಾನಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.
ಉದ್ದೇಶಿತ ಸಮಾವೇಶಕ್ಕೆ ಪೂರ್ವಭಾವಿಯಾಗಿ ಎರಡು ದಿನಗಳ ದೆಹಲಿ ಪ್ರವಾಸ ಕೈಗೊಂಡಿದ್ದ ಅವರು, ಬುಧವಾರ ಕರ್ನಾಟಕ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಕಾರ್ಯಕ್ರಮದ ಮೊದಲ ದಿನ ಅವರು ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ರಾಜ್ಯದ ಕೈಗಾರಿಕಾ ವಲಯದ ಬೆಳವಣಿಗೆಗೆ ಕೇಂದ್ರದ ನೆರವನ್ನು ಕೋರಿದ್ದರು. ಜತೆಗೆ ಸಿಂಗಪುರ್ ಹೈಕಮಿಷನರ್ ಅವರನ್ನು ಭೇಟಿ ಮಾಡಿ, ಹೂಡಿಕೆದಾರರ ಸಮಾವೇಶಕ್ಕೆ ಆಹ್ವಾನಿಸಿದ್ದರು.

ತಮ್ಮ ಎರಡು ದಿನಗಳ ಕಾರ್ಯಕ್ರಮದಲ್ಲಿ ಅವರು ಟಾಯ್ ಝೋನ್, ಎಎಂಡಿ, ವಾಟ್ಲೋ, ಭಾರತ್ ಸೆಮಿ ಸಿಸ್ಟಮ್ಸ್, ಥರ್ಡ್-ಐಟೆಕ್, ಆ್ಯಂಬರ್ ಎಂಟರ್ಪ್ರೈಸಸ್, ಎಚ್ಎಂಇಎಲ್ ಸೇರಿದಂತೆ ಹಲವು ಉದ್ಯಮ ಕಂಪನಿಗಳ ಪ್ರಮುಖರನ್ನು ಕಂಡು, ಅವರನ್ನೂ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಆಮಂತ್ರಿಸಿದ್ದಾರೆ.
ಎರಡನೇ ದಿನದಂದು ಅವರು ಆಸ್ಟ್ರೇಲಿಯಾ ಹೈಕಮಿಷನರ್ ಫಿಲಿಫ್ ಗ್ರೀನ್ ಅವರೊಂದಿಗೆ ಶಿಕ್ಷಣ, ವೈಮಾಂತರಿಕ್ಷ, ಜೈವಿಕ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳ ಪರಸ್ಪರ ಸಹಕಾರ ಕುರಿತು ಮಾತುಕತೆ ನಡೆಸಿ, ಬಂಡವಾಳ ಹೂಡಿಕೆಗೆ ಸಂಪೂರ್ಣ ಬೆಂಬಲ ಕೊಡುವುದಾಗಿ ತಿಳಿಸಿದರು.
ಜರ್ಮನಿ ಮಿಷನ್ ಉಪಮುಖ್ಯಸ್ಥ ಜಾರ್ಜ್ ಎಂಜ್ವೀಲರ್ ಅವರೊಂದಿಗಿನ ಭೇಟಿಯಲ್ಲಿ ಅವರು ಮರುಬಳಕೆ ಮಾಡಬಹುದಾದ ಇಂಧನ, ಹವಾಮಾನ ಬದಲಾವಣೆ ಮತ್ತು ಸುಸ್ಥಿರ ಅಭಿವೃದ್ಧಿ, ಎಂಜಿನಿಯರಿಂಗ್ ಮತ್ತು ರಾಸಾಯನಿಕಗಳ ಉತ್ಪಾದನೆ ಇತ್ಯಾದಿ ಕ್ಷೇತ್ರಗಳಲ್ಲಿ ಸಹಕಾರ ಸಾಧ್ಯತೆ ಕುರಿತು ವಿಚಾರ ವಿನಿಮಯ ನಡೆಸಿದರು.
ದಕ್ಷಿಣ ಕೊರಿಯಾದ ರಾಯಭಾರಿ ಚಾಂಗ್ ಜೇಬಾಕ್ ಅವರನ್ನು ಕಂಡ ಸಚಿವರು, ತಂತ್ರಜ್ಞಾನ, ನಾವೀನ್ಯತೆ, ಎಲೆಕ್ಟ್ರಾನಿಕ್ಸ್, ವಾಹನ ತಯಾರಿಕೆ ಮತ್ತು ಮಶೀನ್ ಟೂಲ್ ಕ್ಷೇತ್ರಗಳಲ್ಲಿ ರಾಜ್ಯದಲ್ಲಿ ಹೂಡಿಕೆಗೆ ಇರುವ ಯಥೇಚ್ಛ ಅವಕಾಶಗಳ ಬಗ್ಗೆ ಚರ್ಚಿಸಿದರು. ಕಾರ್ಯಕ್ರಮದಲ್ಲಿ ಸಚಿವರ ಜೊತೆಗೆ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಆಯುಕ್ತೆ ಗುಂಜನ್ ಕೃಷ್ಣ ಇದ್ದರು.












Click it and Unblock the Notifications