Mettur Dam: ಮೆಟ್ಟೂರು ಜಲಾಶಯದ ನೀರಿನ ಮಟ್ಟ 83 ಅಡಿಗೆ ಏರಿಕೆ; ಒಳಹರಿವು ಎಷ್ಟಿದೆ?
ಕರ್ನಾಟಕ ಮತ್ತು ಕೇರಳದಲ್ಲಿ ಉತ್ತಮ ಮಳೆಯಾಗಿದ್ದು ನದಿಗಳು ತುಂಬಿ ಹರಿಯುತ್ತಿವೆ. ಕಾವೇರಿ, ಕಪಿಲಾ ನದಿ ತುಂಬಿ ಹರಿದ ಕಾರಣ, ರಾಜ್ಯದಲ್ಲಿರುವ ಕಾವೇರಿ ಜಲಾಯನ ವ್ಯಾಪ್ತಿಯ ಜಲಾಶಯಗಳು ತುಂಬಿದ್ದು, ತಮಿಳುನಾಡಿಗೆ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದೆ.
ಕಾವೇರಿ ನೀರಿಗಾಗಿ ಕರ್ನಾಟಕ ತಮಿಳುನಾಡುವ ನಡುವಿನ ಜಗಳಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿದ್ದು, ತಮಿಳುನಾಡು ಸರ್ಕಾರ ಕೇಳಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದೆ.

ಮೆಟ್ಟೂರು ಜಲಾಶಯದಲ್ಲಿ 10 ದಿನಗಳ ಹಿಂದೆ 12-13 ಟಿಎಂಸಿ ಇದ್ದ ನೀರಿನ ಸಂಗ್ರಹ ಈಗ ಸುಮಾರು 40 ಟಿಎಂಸಿಗೆ ಹೆಚ್ಚಾಗಿದೆ. ಜುಲೈ 16ರಂದು 45 ಅಡಿಗಳಷ್ಟಿದ್ದ ನೀರಿನ ಸಂಗ್ರಹ ಕಳೆದ 6 ದಿನಗಳಲ್ಲಿ 35 ಅಡಿಗಳಷ್ಟು ಹೆಚ್ಚಾಗಿದೆ. ಸದ್ಯ ಮಳೆ ಕಡಿಮೆಯಾಗಿದ್ದರೂ, ಇನ್ನೂ ಹಲವು ದಿನ ಒಳಹರಿವು ಉತ್ತಮವಾಗಿರಲಿದ್ದು, ಜಲಾಶಯದಲ್ಲಿ ಮತ್ತಷ್ಟು ನೀರು ಸಂಗ್ರಹವಾಗಲಿದೆ.
ಜುಲೈ 23ರಂದು ಮಧ್ಯಾಹ್ನ 12 ಗಂಟೆ ವೇಳೆಗೆ ಮೆಟ್ಟೂರು ಜಲಾಶಯದ ನೀರಿನ ಮಟ್ಟ 83 ಅಡಿಗಳಷ್ಟಾಗಿದೆ. ಜಲಾಶಯದ ಗರಿಷ್ಠ ಮಟ್ಟ 120 ಅಡಿಗಳಿಷ್ಟಿದೆ. ಸದ್ಯ 73654 ಕ್ಯೂಸೆಕ್ಸ್ ಒಳಹರಿವು ಇದ್ದು, ಜಲಾಶಯದಿಂದ ನದಿಗೆ 1000 ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದೆ.
ಕಾವೇರಿ ವಿವಾದಕ್ಕೆ ತಾತ್ಕಾಲಿಕ ಬ್ರೇಕ್
ಮಳೆಯ ಆಶೀರ್ವಾದ ಸಿಕ್ಕ ಕಾರಣ ಸದ್ಯ ಎರಡು ರಾಜ್ಯಗಳ ನಡುವಿನ ಜಲವಿವಾದ ತಣ್ಣಗಾಗಿದೆ. ತಮಿಳುನಾಡಿಗೆ 19 ಟಿಎಂಸಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶದ ಬೆನ್ನಲ್ಲೇ ಕೇರಳ, ಕೊಡಗು, ಮೈಸೂರು ಭಾಗದಲ್ಲಿ ಭಾರಿ ಮಳೆಯಾದ ಕಾರಣ ಕಬಿನಿ ಜಲಾಶಯ ಭರ್ತಿಯಾಗಿದ್ದು, ಹೆಚ್ಚಿನ ನೀರನ್ನು ತಮಿಳುನಾಡಿಗೆ ಹರಿಸಲಾಗಿತ್ತು.
ಹೇಮಾವತಿ ಜಲಾಶಯ ಭರ್ತಿಯಾದ ಬಳಿಕ ಹೆಚ್ಚಿನ ನೀರನ್ನು ಕೆಆರ್ ಎಸ್ ಜಲಾಶಯಕ್ಕೆ ಹರಿಸಿದ್ದು, ಕೃಷ್ಣರಾಜಸಾಗರ ಜಲಾಶಯ ಕೂಡ ಭರ್ತಿಯಾಗಿದೆ. ಕೆಆರ್ ಎಸ್ ಜಲಾಶಯ ತುಂಬಿದ ಬೆನ್ನಲ್ಲೇ ಹೆಚ್ಚಿನ ಪ್ರಮಾಣದ ನೀರನ್ನು ಕಾವೇರಿ ನದಿಗೆ ಬಿಡುಗಡೆ ಮಾಡಿದ್ದು, ಮೆಟ್ಟೂರು ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದಿದೆ.
ಸದ್ಯ ಮಳೆಯ ಅಬ್ಬರ ಕಡಿಮೆಯಾಗಿದ್ದರೂ, ಈಗಾಗಲೇ ಹರಿಸಿರುವ ನೀರು ಮೆಟ್ಟೂರು ಜಲಾಶಯದ ಒಡಲು ಸೇರಲಿದ್ದು, ಜಲಾಶಯದ ನೀರಿನ ಮಟ್ಟ ಮತ್ತಷ್ಟು ಹೆಚ್ಚಲಿದೆ.
ಮತ್ತೆ ಮುಂಗಾರು ಚುರುಕುಗೊಂಡರೆ ಇನ್ನು ಕೆಲವೇ ದಿನಗಳಲ್ಲಿ ಮೆಟ್ಟೂರು ಜಲಾಶಯ ತುಂಬಲಿದ್ದು, ರಾಜ್ಯದ ಕಾವೇರಿ ಜಲಾನಯನದ ವ್ಯಾಪ್ತಿಯ ರೈತರು ನಿಟ್ಟುಸಿರು ಬಿಡಬಹುದು.












Click it and Unblock the Notifications