ಮೇಕೆದಾಟು ಯೋಜನೆ ವಿವಾದ: ಕರ್ನಾಟಕದ ಬೇಡಿಕೆ ಏನು? ತಮಿಳುನಾಡಿನ ವಿರೋಧದ ಹಿಂದಿರುವ ಕಾರಣವೇನು?

ಕಾವೇರಿ ನದಿಯ ಮೇಲಿನ ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆ ಕರ್ನಾಟಕ ಮತ್ತು ತಮಿಳುನಾಡು ನಡುವಿನ ದೀರ್ಘಕಾಲದ ವಿವಾದಕ್ಕೆ ಕಾರಣವಾಗಿದೆ.

ಬೆಂಗಳೂರಿನ ಭವಿಷ್ಯದ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಹಾಗೂ ಕಾವೇರಿ ಜಲಾನಯನ ಪ್ರದೇಶದ ನೀರಿನ ನಿರ್ವಹಣೆಯನ್ನು ಸುಧಾರಿಸಲು ಈ ಯೋಜನೆ ಅಗತ್ಯ ಎಂದು ಕರ್ನಾಟಕ ವಾದಿಸುತ್ತಿದೆ. ಆದರೆ, ಈ ಯೋಜನೆಯಿಂದ ಕೆಳಹರಿವಿನ ನೀರಿನ ಹರಿವು ಬದಲಾಗಬಹುದು ಹಾಗೂ ಕಾವೇರಿ ನೀರು ಹಂಚಿಕೆ ವ್ಯವಸ್ಥೆಗೆ ಧಕ್ಕೆಯಾಗಬಹುದು ಎಂದು ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೆ, ಯೋಜನೆ ಪರಿಸರದ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶವಾದ ಕಾವೇರಿ ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುವುದರಿಂದ ಪರಿಸರವಾದಿಗಳಿಂದಲೂ ವಿರೋಧ ವ್ಯಕ್ತವಾಗಿದೆ.

Mekedatu Project Why Karnataka wants it why Tamil Nadu opposes it and what lies ahead

ಮೇಕೆದಾಟು ಯೋಜನೆಯ ಪ್ರಮುಖ ಕಾಲಕ್ರಮ

* 1980-1990: ಮೇಕೆದಾಟುವಿನಲ್ಲಿ ಜಲಾಶಯ ನಿರ್ಮಾಣದ ಸಾಧ್ಯತೆಯನ್ನು ಕರ್ನಾಟಕ ಪರಿಶೀಲನೆ ಆರಂಭಿಸಿತು.

* 2003-2012: ಪ್ರಾಥಮಿಕ ಅಧ್ಯಯನಗಳು ಮತ್ತು ಪರಿಕಲ್ಪನಾ ವರದಿಗಳು ಸಿದ್ಧವಾದವು.

* 2013: ಪ್ರಾಥಮಿಕ ಯೋಜನಾ ವರದಿ ತಯಾರಿಸುವ ಕೆಲಸ ಆರಂಭವಾಯಿತು.

* 2014: ಯೋಜನೆಗೆ ಸಲಹೆಗಾರರನ್ನು ಆಯ್ಕೆ ಮಾಡಲು ಕರ್ನಾಟಕ ಟೆಂಡರ್ ಆಹ್ವಾನಿಸಿತು.

* 2015: ಸಲಹೆಗಾರರಿಗೆ ಗುತ್ತಿಗೆ ನೀಡಲಾಯಿತು. ಕೆಳಹರಿವು ರಾಜ್ಯಗಳ ಅನುಮತಿ ಅಗತ್ಯ ಎಂದು ತಮಿಳುನಾಡು ಆಕ್ಷೇಪಿಸಿತು.

* 2016: ₹5,900 ಕೋಟಿ ವೆಚ್ಚದ ವಿವರವಾದ ಯೋಜನಾ ವರದಿ (DPR) ಸಿದ್ಧವಾಯಿತು. ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಮೊರೆಹೋಯಿತು.

* 2017: ಕರ್ನಾಟಕ ಡಿಪಿಆರ್‌ಗೆ ತಾತ್ವಿಕ ಅನುಮೋದನೆ ನೀಡಿ ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಿತು. ತಿದ್ದುಪಡಿಗಳನ್ನು ಸೂಚಿಸಲಾಯಿತು.

* 2018: ತಿದ್ದುಪಡಿಗಳ ನಂತರ ಡಿಪಿಆರ್ ಪರಿಷ್ಕೃತವಾಯಿತು. ಇದೇ ವರ್ಷ ಸುಪ್ರೀಂ ಕೋರ್ಟ್ ಕಾವೇರಿ ನೀರು ಹಂಚಿಕೆ ಕುರಿತು ತೀರ್ಪು ನೀಡಿ, ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ರಚಿಸಲು ಕೇಂದ್ರಕ್ಕೆ ಸೂಚಿಸಿತು.

* 2019: ಪರಿಷ್ಕೃತ ಡಿಪಿಆರ್‌ನ್ನು ₹9,000 ಕೋಟಿ ವೆಚ್ಚದ ಅಂದಾಜಿನೊಂದಿಗೆ ದೆಹಲಿಯ ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಯಿತು. ತಮಿಳುನಾಡು ಮತ್ತೆ ವಿರೋಧ ವ್ಯಕ್ತಪಡಿಸಿತು.

* 2021: ಕರ್ನಾಟಕ ಬಜೆಟ್‌ನಲ್ಲಿ ಯೋಜನೆಗೆ ಅನುದಾನ ಮೀಸಲಿಡಲಾಯಿತು.

* 2022: "ಮೇಕೆದಾಟು ಪಾದಯಾತ್ರೆ" ಸೇರಿದಂತೆ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಯಿತು. ತಮಿಳುನಾಡು ಮತ್ತೆ CWMA ಹಾಗೂ ಕೇಂದ್ರ ಸರ್ಕಾರದ ಮುಂದೆ ವಿರೋಧ ದಾಖಲಿಸಿತು.

* 2023: ಪರಿಸರ ಮತ್ತು ಅರಣ್ಯ ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಸಲಾಯಿತು. ಇನ್ನೂ ಅನುಮತಿ ಸಿಕ್ಕಿಲ್ಲ.

* 2024: CWMA ಡಿಪಿಆರ್ ಪರಿಶೀಲಿಸಿ ಮತ್ತೆ ಕೇಂದ್ರ ಜಲ ಆಯೋಗಕ್ಕೆ ಹಿಂದಿರುಗಿಸಿತು. ನಿರ್ಮಾಣ ಆರಂಭವಾಗಿಲ್ಲ.

* 2025-2026: ಡಿಪಿಆರ್ ಸಿದ್ಧತೆಯನ್ನು ಪ್ರಶ್ನಿಸಿದ್ದ ತಮಿಳುನಾಡಿನ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ಆದರೆ CWC ಸೇರಿದಂತೆ ಅಗತ್ಯ ಅನುಮತಿಗಳು ಇನ್ನೂ ಬಾಕಿಯೇ ಉಳಿದಿವೆ.
* 2026: CWC ಮತ್ತು CWMA ಸೂಚನೆಗಳಂತೆ ಕರ್ನಾಟಕ ಡಿಪಿಆರ್ ಅನ್ನು ಮತ್ತೊಮ್ಮೆ ಪರಿಷ್ಕರಿಸಿತು.

ಮೇಕೆದಾಟು ಯೋಜನೆ ಎಂದರೇನು?

ಮೇಕೆದಾಟು ಯೋಜನೆಯು ಕಾವೇರಿ ನದಿಯ ಮೇಲೆ, ಬೆಂಗಳೂರಿನಿಂದ ಸುಮಾರು 110 ಕಿ.ಮೀ. ದೂರದಲ್ಲಿರುವ ಮೇಕೆದಾಟು ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಹುಉದ್ದೇಶದ ಜಲಾಶಯ ಯೋಜನೆಯಾಗಿದೆ.

ಯೋಜನೆಯ ಪ್ರಮುಖ ಉದ್ದೇಶಗಳು

* ಬೆಂಗಳೂರು ಮಹಾನಗರ ಹಾಗೂ ಸುತ್ತಮುತ್ತಲಿನ ನಗರಗಳಿಗೆ ಕುಡಿಯುವ ನೀರು ಒದಗಿಸುವುದು.
* ಮಳೆಗಾಲದಲ್ಲಿ ಹರಿದು ಹೋಗುವ ಹೆಚ್ಚುವರಿ ನೀರನ್ನು ಸಂಗ್ರಹಿಸುವುದು.
* ಸುಮಾರು 400 ಮೆಗಾವಾಟ್ ಜಲವಿದ್ಯುತ್ ಉತ್ಪಾದನೆ
* ಒಟ್ಟು 59.46 ಟಿಎಂಸಿ ಜೀವಂತ ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯ ನಿರ್ಮಾಣ.

ಕರ್ನಾಟಕ ಯೋಜನೆಯಲ್ಲಿ ಮಾಡಿದ ಪ್ರಮುಖ ಬದಲಾವಣೆಗಳು

2019ರಲ್ಲಿ ಸಲ್ಲಿಸಿದ್ದ ಡಿಪಿಆರ್‌ನಲ್ಲಿ ಕುಡಿಯುವ ನೀರಿಗಾಗಿ 4.75 ಟಿಎಂಸಿ ನೀರನ್ನು ಬಳಸುವ ಪ್ರಸ್ತಾವನೆ ಇತ್ತು. ಆದರೆ 2026ರ ಏಪ್ರಿಲ್‌ನಲ್ಲಿ ಕರ್ನಾಟಕ ಹೊಸ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಿತು.

ಹೊಸ ಪ್ರಸ್ತಾವನೆಯಲ್ಲಿ

* ಕುಡಿಯುವ ನೀರಿನ ಬಳಕೆಯನ್ನು 6.95 ಟಿಎಂಸಿ ಗೆ ಹೆಚ್ಚಿಸಲಾಗಿದೆ.
* ಹೆಚ್ಚುವರಿಯಾಗಿ 5% ಡೆಡ್ ಸ್ಟೋರೇಜ್ ಸೇರಿಸಲಾಗಿದೆ.
* ಬೆಂಗಳೂರಿನ ವೇಗವಾಗಿ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ನೀರಿನ ಬೇಡಿಕೆಯನ್ನು ಇದಕ್ಕೆ ಕಾರಣ ಎಂದು ಸರ್ಕಾರ ತಿಳಿಸಿದೆ.
* ಶಿವನಸಮುದ್ರ ರನ್-ಆಫ್-ದಿ-ರಿವರ್ ವಿದ್ಯುತ್ ಯೋಜನೆ ಹಾಗೂ ಕಾವೇರಿ ನದಿಗೆ ಡೈವರ್ಷನ್ ವಿಯರ್ ನಿರ್ಮಾಣವನ್ನೂ ಸೇರಿಸಲಾಗಿದೆ.

ಕರ್ನಾಟಕದ ಲೆಕ್ಕಾಚಾರಗಳ ಬಗ್ಗೆ CWC ಹೇಳಿದ್ದೇನು?

ಕೇಂದ್ರ ಜಲ ಆಯೋಗವು ಕರ್ನಾಟಕದ ಕೆಲವು ಲೆಕ್ಕಾಚಾರಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ. ಅದರ ಪ್ರಕಾರ, ಜಲಾಶಯದ ಜೀವಂತ ಸಂಗ್ರಹ ಸಾಮರ್ಥ್ಯದ ಲೆಕ್ಕಾಚಾರ ಹಳೆಯ ಅಂದಾಜುಗಳ ಮೇಲೆ ಆಧಾರಿತವಾಗಿದೆ. ಬೆಂಗಳೂರಿನ ಕುಡಿಯುವ ನೀರಿನ ಬೇಡಿಕೆಯ ಲೆಕ್ಕಾಚಾರವನ್ನು ನವೀಕರಿಸಿಲ್ಲ. ನೀರಿನ ಬಳಕೆಯ ಅಂಕಿಅಂಶಗಳು ಇನ್ನೂ 1990ರ ಮಾಹಿತಿಯನ್ನೇ ಆಧರಿಸಿವೆ.6.95 ಟಿಎಂಸಿ ನೀರಿನ ಬಳಕೆ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಹಂಚಿಕೆ ಮಿತಿಗಿಂತ ಹೆಚ್ಚಾಗಿರಬಹುದು ಎಂಬ ಅನುಮಾನವನ್ನು ವ್ಯಕ್ತಪಡಿಸಿದೆ.

ಯೋಜನೆ ಎಲ್ಲಿದೆ?

ಪ್ರಸ್ತಾವಿತ ಮೇಕೆದಾಟು ಜಲಾಶಯವು ಕಾವೇರಿ ವನ್ಯಜೀವಿ ಅಭಯಾರಣ್ಯದೊಳಗೆ ನಿರ್ಮಾಣವಾಗಲಿದೆ. ಕಾವೇರಿ ನದಿ ಕಿರಿದಾದ ಕಲ್ಲಿನ ಕಣಿವೆಯ ಮೂಲಕ ಹರಿಯುವ ಪ್ರದೇಶದಲ್ಲಿ ಯೋಜನೆ ನಿರ್ಮಾಣವಾಗಲಿದೆ.
ಇದು ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕು ಹಾಗೂ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ವ್ಯಾಪ್ತಿಯಲ್ಲಿ ಇದೆ. ಬೆಂಗಳೂರಿನಿಂದ ಸುಮಾರು 110 ಕಿಲೋಮೀಟರ್ ದೂರದಲ್ಲಿದೆ.

ಯೋಜನೆಗೆ ಎಷ್ಟು ಭೂಮಿ ಬೇಕಾಗುತ್ತದೆ?

ಈ ಯೋಜನೆಗೆ ಸುಮಾರು 12,000 ಎಕರೆ ಭೂಮಿ ಅಗತ್ಯವಿದೆ. ಸುಮಾರು 98% ಅರಣ್ಯ ಭೂಮಿ, ಉಳಿದ 2% ಖಾಸಗಿ ಭೂಮಿ. ಅಭಯಾರಣ್ಯದ ಸಮೀಪದ ನಾಲ್ಕು ಗ್ರಾಮಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ಸುಮಾರು 500 ಕುಟುಂಬಗಳು ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ. ಪರಿಣಾಮಕ್ಕೆ ಒಳಗಾಗುವ ಕುಟುಂಬಗಳಿಗೆ ಪುನರ್ವಸತಿ ಪ್ಯಾಕೇಜ್ ಸಿದ್ಧಪಡಿಸಲಾಗುತ್ತಿದೆ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ. ಜೊತೆಗೆ ಅರಣ್ಯ ಭೂಮಿಯ ನಷ್ಟವನ್ನು ಸರಿದೂಗಿಸಲು ಪರ್ಯಾಯ ಅರಣ್ಯ ಭೂಮಿಯನ್ನು ಗುರುತಿಸುವ ಕಾರ್ಯವೂ ನಡೆಯುತ್ತಿದೆ.

ಕರ್ನಾಟಕ ಈ ಯೋಜನೆ ಏಕೆ ಅಗತ್ಯ?

* ಬೆಂಗಳೂರಿನ ಜನಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ.
* ಕುಡಿಯುವ ನೀರಿನ ಬೇಡಿಕೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ.
* ಮಳೆಗಾಲದಲ್ಲಿ ಹರಿದು ಹೋಗುವ ಹೆಚ್ಚುವರಿ ನೀರನ್ನು ಸಂಗ್ರಹಿಸಿ ಕುಡಿಯುವ ನೀರಾಗಿ ಬಳಸಬಹುದು.
* ಮಳೆನೀರು ವ್ಯರ್ಥವಾಗಿ ತಮಿಳುನಾಡಿಗೆ ಹರಿದು ಹೋಗುವುದನ್ನು ತಡೆಯಬಹುದು.

ಕಾವೇರಿ ನೀರಿನ ನಿರ್ವಹಣೆಗೆ ಯೋಜನೆ ಹೇಗೆ ಸಹಕಾರಿ?

ಕರ್ನಾಟಕ ಸರ್ಕಾರದ ಪ್ರಕಾರ, ಕೆಆರ್‌ಎಸ್ (ಕೃಷ್ಣರಾಜ ಸಾಗರ), ಕಬಿನಿ, ಹೇಮಾವತಿ ಜಲಾಶಯಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಇದರಿಂದ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚುತ್ತದೆ. ಸುಪ್ರೀಂ ಕೋರ್ಟ್ ಸೂಚಿಸಿರುವಂತೆ ಪ್ರತಿ ವರ್ಷ 177.25 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಲು ಅನುಕೂಲವಾಗುತ್ತದೆ. ಬರಗಾಲದ ವರ್ಷಗಳಲ್ಲಿ ನೀರು ನಿರ್ವಹಣೆಗೆ ಹೆಚ್ಚಿನ ಅವಕಾಶ ದೊರೆಯುತ್ತದೆ. ಈ ಯೋಜನೆ ನೀರಾವರಿ ಯೋಜನೆಯಲ್ಲ, ಕೇವಲ ಕುಡಿಯುವ ನೀರು ಹಾಗೂ ಜಲವಿದ್ಯುತ್ ಯೋಜನೆ ಎಂದು ಕರ್ನಾಟಕ ಸ್ಪಷ್ಟಪಡಿಸಿದೆ.

ತಮಿಳುನಾಡು ಯೋಜನೆಯನ್ನು ಏಕೆ ವಿರೋಧಿಸುತ್ತಿದೆ?

ತಮಿಳುನಾಡು ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇದು ಕಾವೇರಿ ಜಲ ವಿವಾದ ನ್ಯಾಯಮಂಡಳಿಯ (CWDT) ತೀರ್ಪು ಹಾಗೂ 2018ರ ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ. ಆದ್ದರಿಂದ ಯೋಜನೆಯನ್ನು ಮುಂದುವರಿಸಬಾರದು ಎಂದು ಕೇಂದ್ರ ಜಲ ಆಯೋಗಕ್ಕೆ ಮನವಿ ಮಾಡಿದೆ.

ತಮಿಳುನಾಡಿನ ಪ್ರಮುಖ ಆತಂಕಗಳೇನು?

* ಜಲಾಶಯವು ರಾಜ್ಯ ಗಡಿಯ ಮೇಲ್ಭಾಗದಲ್ಲೇ ನಿರ್ಮಾಣವಾಗುತ್ತಿದೆ.
* ಇದರಿಂದ ಕರ್ನಾಟಕ ಹೆಚ್ಚುವರಿ ನೀರನ್ನು ತಡೆಹಿಡಿಯಲು ಸಾಧ್ಯವಾಗುತ್ತದೆ.
* ಮಳೆಯ ನೀರಿನ ಸ್ವಾಭಾವಿಕ ಹರಿವು ಈಗಾಗಲೇ ನೀರು ಹಂಚಿಕೆ ಲೆಕ್ಕಾಚಾರದಲ್ಲಿ ಸೇರಿಸಲಾಗಿದೆ.
* ಇಷ್ಟೊಂದು ದೊಡ್ಡ ಹೊಸ ಜಲಾಶಯ ನಿರ್ಮಾಣಕ್ಕೆ ನ್ಯಾಯಮಂಡಳಿ ಅನುಮತಿ ನೀಡಿಲ್ಲ.
* ಇದರಿಂದ ಕೆಳಹರಿವಿನ ನೀರಿನ ಬಿಡುಗಡೆ ಮೇಲೆ ಪರಿಣಾಮ ಬೀಳಬಹುದು.
* ಬೆಂಗಳೂರಿಗೆ ಈಗಾಗಲೇ ಸಾಕಷ್ಟು ನೀರು ಸಂಗ್ರಹ ವ್ಯವಸ್ಥೆಗಳಿವೆ ಎಂದು ತಮಿಳುನಾಡು ವಾದಿಸುತ್ತದೆ.

ಪರಿಸರದ ಆತಂಕಗಳೇನು?

ಪರಿಸರ ತಜ್ಞರ ಪ್ರಕಾರ ಈ ಯೋಜನೆಯಿಂದ ದಕ್ಷಿಣ ಭಾರತದ ಅತಿ ದೊಡ್ಡ ಪರಿಸರ ನಷ್ಟಗಳಲ್ಲಿ ಒಂದಾಗುವ ಸಾಧ್ಯತೆ ಇದೆ. ಸುಮಾರು 5,100 ಹೆಕ್ಟೇರ್ ಅರಣ್ಯ ಪ್ರದೇಶ ಜಲಾವೃತವಾಗಲಿದೆ. ಈ ಪ್ರದೇಶ ಮೈಸೂರು ಆನೆ ಕಾರಿಡಾರ್ ಭಾಗವಾಗಿದೆ. ವನ್ಯಜೀವಿಗಳ ಪ್ರಮುಖ ಸಂಚಾರ ಮಾರ್ಗವಾಗಿದೆ.

ಮುಂದೇನು?

ಪ್ರಸ್ತುತ ಮೇಕೆದಾಟು ಯೋಜನೆಗೆ ಇನ್ನೂ ಕೇಂದ್ರ ಜಲ ಆಯೋಗ, ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ, ಪರಿಸರ ಹಾಗೂ ಅರಣ್ಯ ಸಚಿವಾಲಯ ಸೇರಿದಂತೆ ಹಲವು ಕಾನೂನುಬದ್ಧ ಅನುಮತಿಗಳ ಅಗತ್ಯವಿದೆ. ಹೊಸ ಡಿಪಿಆರ್ ಸಿದ್ಧವಾದ ನಂತರ ಮಾತ್ರ ಯೋಜನೆಯ ಭವಿಷ್ಯ ಸ್ಪಷ್ಟವಾಗಲಿದೆ. ಈ ನಡುವೆ ಕರ್ನಾಟಕವು ಬೆಂಗಳೂರಿನ ಕುಡಿಯುವ ನೀರಿನ ಭದ್ರತೆಗೆ ಯೋಜನೆ ಅನಿವಾರ್ಯ ಎಂದು ವಾದಿಸುತ್ತಿದ್ದರೆ, ತಮಿಳುನಾಡು ತನ್ನ ಪಾಲಿನ ಕಾವೇರಿ ನೀರಿಗೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ವಿರೋಧ ಮುಂದುವರಿಸಿದೆ. ಹೀಗಾಗಿ, ಮೇಕೆದಾಟು ಯೋಜನೆ ಮುಂದಿನ ದಿನಗಳಲ್ಲೂ ಕರ್ನಾಟಕ-ತಮಿಳುನಾಡು ನಡುವಿನ ಪ್ರಮುಖ ಜಲ ವಿವಾದವಾಗಿ ಮುಂದುವರಿಯುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+