ಲೋಕಸಭೆಯಲ್ಲಿ ಮೇಕೆದಾಟು ಕ್ಯಾತೆ, ಎಐಎಡಿಎಂಕೆ ಸಂಸದರು ಅಮಾನತು
ನವದೆಹಲಿ, ಜನವರಿ 02 : ಮೇಕೆದಾಟು ಯೋಜನೆಗೆ ತಮಿಳುನಾಡು ಮತ್ತೆ ವಿರೋಧ ವ್ಯಕ್ತಪಡಿಸಿದೆ. ಯೋಜನೆ ವಿಚಾರ ಮುಂದಿಟ್ಟುಕೊಂಡು ಲೋಕಸಭೆ ಕಲಾಪಕ್ಕೆ ಅಡ್ಡಿ ಪಡಿಸಿದ 26 ಎಐಎಡಿಎಂಕೆ ಪಕ್ಷದ ಸಂಸದರನ್ನು ಅಮಾನತು ಮಾಡಲಾಗಿದೆ.
ಕರ್ನಾಟಕದ ಮೇಕೆದಾಟು ಯೋಜನೆಯ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ಸಲ್ಲಿಸಲು ಕೇಂದ್ರ ಜಲ ಆಯೋಗ ಒಪ್ಪಿಗೆ ನೀಡಿದೆ. ಈ ವಿಚಾರ ಮುಂದಿಟ್ಟುಕೊಂಡು ಎಐಎಡಿಎಂಕೆ ಸಂಸದರು ಲೋಕಸಭೆಯಲ್ಲಿ ಬುಧವಾರ ಗದ್ದಲ ಎಬ್ಬಿಸಿದರು.
ನಿರಂತರವಾಗಿ ಕಲಾಪಕ್ಕೆ ಸಂಸದರು ಅಡ್ಡಿ ಪಡಿಸಿದ ಕಾರಣದಿಂದಾಗಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು 26 ಸಂಸದರನ್ನು ಅಮಾನತು ಮಾಡಿದರು. ಐದು ಕಲಾಪಗಳಲ್ಲಿ ಅವರು ಭಾಗವಹಿಸಿದಂತೆ ಅಮಾನತುಗೊಳಿಸಲಾಗಿದೆ.

ಲೋಕಸಭೆಯಲ್ಲಿ ಮಾತನಾಡಿದ ಎಂ.ತಂಬಿದುರೈ ಅವರು, 'ಈಗ ಚುನಾವಣೆ ಸಮೀಪಿಸುತ್ತಿದೆ. ಬಿಜೆಪಿ ಕರ್ನಾಟದಲ್ಲಿ ಹಲವು ಕ್ಷೇತ್ರಗಳನ್ನು ಗೆಲ್ಲುವ ಯೋಜನೆ ಹಾಕಿಕೊಂಡಿದೆ. ಆದ್ದರಿಂದ, ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಿದೆ' ಎಂದು ಆರೋಪಿಸಿದರು.
ಮೇಕೆದಾಟು ಯೋಜನೆ ವಿಚಾರದಲ್ಲಿ ರಾಜ್ಯಸಭೆಯಲ್ಲಿಯೂ ಗದ್ದಲ ನಡೆಯಿತು. ಪ್ರತಿಭಟನೆ ನಡೆಸುತ್ತಿದ್ದಂತೆ ಎಐಎಡಿಎಂಕೆ ಮತ್ತು ಡಿಎಂಕೆ ಪಕ್ಷದ ಸಂಸದರನ್ನು ಸದನದಿಂದ ಹೊರಹೋಗುವಂತೆ ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಅವರು ಸೂಚಿಸಿದರು.
ಕೇಂದ್ರ ಜಲ ಆಯೋಗ ಮೇಕೆದಾಟು ಕುಡಿಯುವ ನೀರಿನ ಯೋಜನೆಯ ಡಿಪಿಆರ್ ಸಲ್ಲಿಸಲು ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದೆ. ತಮಿಳುನಾಡು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಸುಪ್ರೀಂಕೋರ್ಟ್‌ಗೂ ಅರ್ಜಿ ಸಲ್ಲಿಸಿದೆ.












Click it and Unblock the Notifications