ಮೇಘಾಲಯ: ಕಾಂಗ್ರೆಸ್ಸಿಗೆ ಮುನ್ನಡೆ, ಸರ್ಕಾರ ರಚನೆ ಕಗ್ಗಂಟು
ಬೆಂಗಳೂರು, ಮಾರ್ಚ್ 03: ಈಶಾನ್ಯ ರಾಜ್ಯಗಳಲ್ಲಿ ಕೇಸರಿ ಬಾವುಟ ಹಾರಿಸುವಲ್ಲಿ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಜೋಡಿ ಯಶಸ್ವಿಯಾಗಿದೆ. ಆದರೆ, ಮೇಘಾಲಯದಲ್ಲಿ ಅತಂತ್ರ ಸ್ಥಿತಿ ಮುಂದುವರೆದಿದ್ದು, ಮುನ್ನಡೆ ಗಳಿಸಿದರೂ ಸರ್ಕಾರ ರಚನೆ ಸಾಧ್ಯವಾಗುತ್ತಿಲ್ಲ.
ನಾಗಾಲ್ಯಾಂಡ್ ನಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಅಲ್ಪ ಮುನ್ನಡೆ ಸಿಕ್ಕಿದ್ದು, ಅಧಿಕಾರ ಸ್ಥಾಪನೆಗೆ ಯತ್ನ ನಡೆದಿದೆ. ತ್ರಿಪುರಾದಲ್ಲಿ ಕೇಸರಿ ಪಡೆ ಭರ್ಜರಿ ಮುನ್ನಡೆ ಸಾಧಿಸಿ, ಜಯಭೇರಿ ಬಾರಿಸಿದೆ.

ಮೇಘಾಲಯ ವಿಧಾನಸಭಾ ಚುನಾವಣಾ ಫಲಿತಾಂಶ ಅತಂತ್ರದಲ್ಲಿದೆ. ಇತ್ತೀಚಿನ ವರದಿಗಳಂತೆ, 59 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 23 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಎನ್‌ಪಿಪಿ 14 ಕ್ಷೇತ್ರಗಳಲ್ಲಿ, ಬಿಜೆಪಿ 4 ಹಾಗೂ ಇತರರು 18 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಸರ್ಕಾರ ರಚನೆಗೆ 31 ಸ್ಥಾನಗಳ ಅಗತ್ಯವಿದೆ. 2013ರಲ್ಲಿ ಕಾಂಗ್ರೆಸ್ 28, ಎನ್ ಪಿಪಿ 2 ಸ್ಥಾನಗಳಿಸಿತ್ತು.
ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಸರ್ಕಾರ ರಚನೆಗೆ ಸಾಧ್ಯತೆಯಿರುವ ಎಲ್ಲಾ ಮಾರ್ಗಗಳನ್ನು ಹುಡುಕುತ್ತಿದೆ. ಗೋವಾದಲ್ಲಿ ಆದಂತೆ ಮೇಘಾಲಯದಲ್ಲಿ ಆಗಬಾರದು ಎಂಬ ಎಚ್ಚರಿಕೆ ವಹಿಸಲಾಗುತ್ತಿದೆ.
ಶಿಲ್ಲಾಂಗ್ ಗೆ ಪಕ್ಷದ ಮುಖಂಡರಾದ ಅಹ್ಮದ್ ಪಟೇಲ್ ಹಾಗೂ ಕಮಲ್‍ನಾಥ್ ಅವರು ಆಗಮಿಸಿದ್ದಾರೆ. ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಪಕ್ಷೇತರ ಶಾಸಕರ ಬೆಂಬಲ ಪಡೆದು ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಮುಂದಾಗಿದ್ದಾರೆ.
ಮೇಘಾಲಯದ ಪೂರ್ವದ ಗರೋ ಹಿಲ್ಸ್ ಕ್ಷೇತ್ರದ ಎನ್ ಸಿಪಿ ಅಭ್ಯರ್ಥಿ ಜೊನಾಥೊನ್ ನೆಂಗ್ಮಿನ್ಜಾ ಸಂಗ್ಮಾ ಅವರು ವಿಲಿಯಮ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಇತ್ತೀಚೆಗೆ ಎಲ್ ಐಡಿ ಸ್ಫೋಟದಲ್ಲಿ ಮೃತಪಟ್ಟಿದ್ದರಿಂದ 59 ಕ್ಷೇತ್ರದ ಫಲಿತಾಂಶ ಮಾತ್ರ ಇಂದು ಸಿಗಲಿದೆ.












Click it and Unblock the Notifications