Meghalaya Election Result 2023 : 7 ಮತಗಳ ಅಂತರದಿಂ ಸಿಎಂ ಸಹೋದರನಿಗೆ ಸೋಲು
ಮೇಘಾಲಯ ವಿಧಾನಸಭೆ ಚುನಾವಣೆ 2023ರಲ್ಲಿ ರಾಜ್ಯದ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಸಹೋದರ ಜೇಮ್ಸ್ ಪಾಂಗ್ಸಾಂಗ್ ಕೆ ಸಂಗ್ಮಾ 7ಮತಗಳ ಅಂತರದಿಂದ ಸೋಲು ಕಂಡರು.
ಶಿಲ್ಲಾಂಗ್, ಮಾರ್ಚ್ 02; ಮೇಘಾಲಯ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಸಹೋದರ ಸೋಲು ಕಂಡಿದ್ದಾರೆ. ರಾಜ್ಯದಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, 27 ಕ್ಷೇತ್ರದಲ್ಲಿ ಮುನ್ನಡೆ ಪಡೆದಿರುವ ಎನ್‌ಪಿಪಿ ಬಹುದೊಡ್ಡ ಪಕ್ಷವಾಗುವತ್ತ ಹೆಜ್ಜೆ ಹಾಕಿದೆ. ರಾಜ್ಯದ 60 ಕ್ಷೇತ್ರಗಳ ಪೈಕಿ 59 ಸ್ಥಾನಗಳಿಗೆ ಫೆಬ್ರವರಿ 27ರಂದು ಚುನಾವಣೆ ನಡೆದಿತ್ತು.
ಗುರುವಾರ ಬೆಳಗ್ಗೆ ಮೇಘಾಲಯ ರಾಜ್ಯದ ವಿಧಾನಸಭೆ ಚುನಾವಣೆ ಮತ ಎಣಿಕೆ ಆರಂಭವಾಗಿದೆ. ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ನೇತೃತ್ವದ ಎನ್‌ಪಿಪಿ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರ ಪಡೆಯುವತ್ತ ಸಾಗುತ್ತಿದೆ. ಸಂಜೆಯ ವೇಳೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಲಭ್ಯವಾಗುವ ನಿರೀಕ್ಷೆ ಇದೆ.

ಚುನಾವಣೆಯಲ್ಲಿ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಸಹೋದರ ಜೇಮ್ಸ್ ಪಾಂಗ್ಸಾಂಗ್ ಕೆ ಸಂಗ್ಮಾ ದಾಡೆಂಗ್ರೆ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಟಿಎಂಸಿಯ ರೂಪಾ ಎಂ ಮಾರ್ಕ್ ಜೇಮ್ಸ್ ಪಾಂಗ್ಸಾಂಗ್ ಕೆ ಸಂಗ್ಮಾಗೆ ತೀವ್ರ ಪೈಪೋಟಿ ನೀಡಿದರು. ಅಂತಿಮವಾಗಿ ಕೇವಲ 7 ಮತಗಳ ಅಂತರದಲ್ಲಿ ಜೇಮ್ಸ್ ಪಾಂಗ್ಸಾಂಗ್ ಕೆ ಸಂಗ್ಮಾ ಸೋಲಿ ಕಂಡರು.
2018ರ ಚುನಾವಣೆಯಲ್ಲಿ ಜೇಮ್ಸ್ ಪಾಂಗ್ಸಾಂಗ್ ಕೆ ಸಂಗ್ಮಾ ದಾಡೆಂಗ್ರೆ ಕ್ಷೇತ್ರದಲ್ಲಿ 27,746 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು. ಚುನಾವಣೆ ಬಳಿಕ ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್ (ಎಂಡಿಎ) ಮೈತ್ರಿಕೂಟ ಅಧಿಕಾರಕ್ಕೆ ಬಂದಿತು. ಎನ್‌ಪಿಪಿಯ ಕಾನ್ರಾಡ್ ಸಂಗ್ಮಾ ಮುಖ್ಯಮಂತ್ರಿಯಾದರು. ಸಹೋದರನ ಸಂಪುಟ ಸೇರಿದ ಜೇಮ್ಸ್ ಪಾಂಗ್ಸಾಂಗ್ ಕೆ ಸಂಗ್ಮಾ 5 ವರ್ಷದಲ್ಲಿ ಗೃಹ, ಕಾನೂನು, ಇಂಧನ, ಆಹಾರ ಮತ್ತು ನಾಗರಿಕ ಸರಬರಾಜು ಸೇರಿದಂತೆ ವಿವಿಧ ಖಾತೆಗಳನ್ನು ನಿರ್ವಹಣೆ ಮಾಡಿದ್ದರು.
ಈ ಬಾರಿಯ ಚುನಾವಣೆಗೆ ಸಹ ಜೇಮ್ಸ್ ಪಾಂಗ್ಸಾಂಗ್ ಕೆ ಸಂಗ್ಮಾಗೆ ದಾಡೆಂಗ್ರೆ ಕ್ಷೇತ್ರದ ಟಿಕೆಟ್ ಸಿಕ್ಕಿತ್ತು. ಮುಕುಲ್ ಸಂಗ್ಮಾ ನೇತೃತ್ವದಲ್ಲಿ 11 ಶಾಸಕರು ಕಾಂಗ್ರೆಸ್‌ನಿಂದ ಟಿಎಂಸಿಗೆ ವಲಸೆ ಹೋದ ಬಳಿಕ ಪಕ್ಷದ ಬಲ ಹೆಚ್ಚಾಗಿದೆ. ಆದ್ದರಿಂದ ಹಲವು ಕ್ಷೇತ್ರಗಳಲ್ಲಿ ಟಿಎಂಸಿ ಎನ್‌ಪಿಪಿಗೆ ಪ್ರಬಲ ಪೈಪೋಟಿ ನೀಡುತ್ತಿದೆ. ದಾಡೆಂಗ್ರೆ ಕ್ಷೇತ್ರದಲ್ಲೂ ಇದೇ ಆಗಿದ್ದು, ಎನ್‌ಪಿಪಿ ಅಭ್ಯರ್ಥಿ ಜೇಮ್ಸ್ ಪಾಂಗ್ಸಾಂಗ್ ಕೆ ಸಂಗ್ಮಾಗೆ ಸೋಲಾಗಿದೆ.

ಭಾರೀ ಪೈಪೋಟಿ; ರಾಜ್ಯದ ಸಾಂಗ್‌ಸಾಕ್ ಕ್ಷೇತ್ರದಲ್ಲಿಯೂ ಪೈಪೋಟಿ ಜೋರಾಗಿದೆ. ಮಾಜಿ ಮುಖ್ಯಮಂತ್ರಿ, ಟಿಎಂಸಿ ನಾಯಕ ಮುಕುಲ್ ಸಾಂಗ್ಮಾ 4,403 ಮತಗಳನ್ನು ಪಡೆದಿದ್ದಾರೆ. ಎನ್‌ಪಿಪಿಯ ನಿಹೀಮ್ ಡಿ. ಶಿರಾ ಮುಕುಲ್ ಸಂಗ್ಮಾಗೆ ತೀವ್ರ ಪೈಪೋಟಿ ನೀಡುತ್ತಿದ್ದು, 4024 ಮತಗಳನ್ನು ಪಡೆದಿದ್ದಾರೆ. ಕ್ಷೇತ್ರದ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications