UP: ಮೀರತ್ ಸೌರಭ್ ರಜಪೂತ್ ಕೊಲೆ ಪ್ರಕರಣ: ಪತ್ನಿ ಪ್ರಿಯಕರನಿಂದ ಬರ್ಬರ ಹತ್ಯೆ ರಹಸ್ಯ ಬಯಲು
ಮೀರತ್ ಮಾರ್ಚ್ 25: ಉತ್ತರಪ್ರದೇಶದ ಮೀರತ್‌ನ ಸೌರಭ್ ರಾಜ್‌ಪುರ ಕೊಲೆ ಪ್ರಕರಣದಲ್ಲಿ ಮತ್ತೊಂದು ಆಘಾತಕಾರಿ ಸಂಗತಿ ಬಹಿರಂಗಗೊಂಡಿದೆ. ಮುಸ್ಕಾನ್ ಹಾಗೂ ಸಾಹಿಲ್ ಇಬ್ಬರು ಸೌರಭ್ ನನ್ನು ಕೊಂದಿದ್ದು ಹೇಗೆ ಎಂದು ಪೊಲೀಸ್ ವಿಚಾರಣೆಯಲ್ಲಿ ವಿವರಿಸಿದ್ದಾರೆ. ಇದು ನಿಜಕ್ಕೂ ದೇಶವೇ ಬೆಚ್ಚಿ ಬೀಳಿಸುವ ಕೃತ್ಯ.
ಮಾದಕ ವ್ಯಸನಿಯಾಗಿದ್ದ ಸಾಹಿಲ್ ಶುಕ್ಲಾ ಎಂಬಾತ ಸೌರಭ್ ರಜಪೂತ್ ಪತ್ನಿ ಮುಸ್ಕಾನ್‌ಳನ್ನು ತನ್ನ ಪ್ರೇಮದ ಬಲೆಗೆ ಬೀಳಿಸಿಕೊಂಡಿದ್ದ. ಲಂಡನ್‌ನಲ್ಲಿ ಇದ್ದ ಸೌರಭ್ ರಜಪೂತ್ ಆಗಾಗ ಮೀರತ್‌ಗೆ ಬಂದು ಹೋಗುತ್ತಿದ್ದರು. ಸೌರಭ್ ರಜಪೂತ್ ಹಾಗೂ ಮುಸ್ಕಾನ್ ಅವರದ್ದು ಪ್ರೇಮ ವಿವಾಹವಾಗಿದ್ದು ಇವರಿಬ್ಬರಿಗೂ ಐದು ವರ್ಷದ ಪುಟ್ಟ ಮಗಳು ಇದ್ದಾಳೆ. ಲಂಡನ್‌ನಲ್ಲಿ ಕೆಲಸವಿದ್ದ ಕಾರಣ ಸೌರಭ್ ಆಗಾಗ ಮೀರತ್ ಮನೆಗೆ ಬಂದು ಹೋಗುತ್ತಿದ್ದರು.

ಆದರೆ ಸೌರಭ್ ಮೀರತ್‌ಗೆ ಬಂದಾಗ ಮುಸ್ಕಾನ್ ಹಾಗೂ ಸಾಹಿಲ್ ಸಂಚು ರೂಪಿಸಿ ಕೊಂದಿದ್ದಾರೆ. ಈ ಪಾಪಿಗಳು ಸೌರಭ್‌ನನ್ನು ಹೇಗೆ ಕೊಂದರು ಅನ್ನೋದನ್ನು ಕೇಳಿದರೆ ಎಂತವರಿಗೂ ರಕ್ತ ಕುದಿಯುತ್ತೆ. ಪ್ರೀತಿಸಿ ಮದುವೆಯಾಗಿದ್ದ ಮುಸ್ಕಾನ್ ಸಾಹಿಲ್‌ನೊಂದಿಗೆ ದೈಹಿಕ ಸಂಬಂಧಿ ಹೊಂದುವುದು ಮಾತ್ರವಲ್ಲದೆ ಮಾದಕ ವ್ಯಸನಿ ಕೂಡ ಆಗಿದ್ದಳು.
ಮಾರ್ಚ್ 3ರ ರಾತ್ರಿ ಸೌರಭ್‌ನನ್ನು ಕೊಲ್ಲಲು ಮುಸ್ಕಾನ್ ರಸ್ತೋಗಿ 800 ರೂ.ಗೆ ಎರಡು ಚಾಕುಗಳನ್ನು ಖರೀದಿಸಿದ್ದಾಳೆ. ಅಲ್ಲದೆ ಹೇಗೆ ಹಲ್ಲೆ ಮಾಡಬೇಕು ಎಂದು ಹಲವು ಬಾರಿ ಪೂರ್ವಾಭ್ಯಾಸ ಮಾಡಿದ್ದಾಳೆಂದು ಪೊಲೀಸರ ಮುಂದೆ ವಿಚಾರಣೆ ವೇಳೆ ಹೇಳಿಕೊಂಡಿದ್ದಾಳೆ. ಚಾಕುವಿನಿಂದ ಹಲ್ಲೆ ಮಾಡುವುದು ಸುಲಭವಲ್ಲ ಎಂದು ಅನಿಸಿದಾಗ ಮುಸ್ಕಾನ್ ಕಟ್-ಥ್ರೋಟ್ ರೇಜರ್ ಅನ್ನು ಖರೀದಿಸಿದ್ದಾಳೆ. ಅದರಿಂದ ಸೌರಭ್‌ನ ಕುತ್ತಿಗೆಯನ್ನು ಮುಸ್ಕಾನ್ ಸೀಳಿದ್ದಾಳೆ. ಚಾಕುವಿನಿಂದ ಸಾಹಿಲ್ ಸೌರಭ್ ತಲೆಯನ್ನು ದೇಹದಿಂದ ಬೇರ್ಪಡಿಸಿದ್ದಾನೆ ಎಂದು ಪೊಲೀಸರ ಮುಂದೆ ಮುಸ್ಕಾನ್ ಹೇಳಿಕೊಂಡಿದ್ದಾಳೆ.

ಲಂಡನ್‌ನಲ್ಲಿ ಕೆಲಸ ಮಾಡುತ್ತಿದ್ದ ಸೌರಭ್ ತನ್ನ ಮಗಳ ಹುಟ್ಟುಹಬ್ಬಕ್ಕೆ ಮೀರತ್‌ಗೆ ಭೇಟಿ ನೀಡುತ್ತಿದ್ದರು. ಮಗಳ ಹುಟ್ಟುಹಬ್ಬಕ್ಕೆ ಮುಸ್ಕಾನ್ ಹಾಗೂ ಸೌರಭ್ ನೃತ್ಯ ಮಾಡಿದ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಸೌರಭ ಪಾಲಿಗೆ ಅದೇ ಕೊನೆಯ ಖುಷಿಯ ಕ್ಷಣಗಳಾಗಿ ಹೋಗಿದೆ.
ಮಗಳನ್ನು ಲಂಡನ್‌ಗೆ ಕರೆದುಕೊಂಡು ಹೋಗಲು ಬಯಸಿದ್ದ ಸೌರಭ್
ಅಷ್ಟಕ್ಕೂ ಸೌರಭ್‌ಗೆ ಸಾಹಿಲ್ ಹಾಗೂ ಮುಸ್ಕಾನ್ ರಾಸ ಲೀಲೆ ಬಗ್ಗೆ ಗೊತ್ತೇ ಇರಲಿಲ್ಲ. ಆತ ತನ್ನ ಪತ್ನಿ ಮಗಳನ್ನು ಲಂಡನ್‌ಗೆ ಕರೆದೊಯ್ಯಲು ಬಯಸಿದ್ದ. ಸೌರಭ್‌ನ ಲಂಡನ್ ವೀಸಾ ಅವಧಿ ಮುಗಿಯಲು ಬಂದಿತ್ತು. ಮೀರತ್ ಭೇಟಿಯ ಸಮಯದಲ್ಲಿ ಅದನ್ನು ನವೀಕರಿಸಿ ನಂತರ ಮಗಳು ಹಾಗೂ ಪತ್ನಿಯನ್ನು ಲಂಡನ್‌ಗೆ ಕರೆದೊಯ್ಯಲು ಸೌರಭ್ ಬಯಸಿದ್ದರು.
ಆದರೆ ಮುಸ್ಕಾನ್ ಈ ಲಂಡನ್‌ಗೆ ಹೋಗಲು ತಿರಸ್ಕರಿಸಿದ್ದಳು. ಆಕೆ ಮೀರತ್‌ನಲ್ಲಿಯೇ ಇರಲು ಬಯಸಿದ್ದಳು. ಕೊನೆಗೆ ಸೌರಭ್ ನಂತರ ತನ್ನ ಮಗಳನ್ನು ಕರೆದುಕೊಂಡು ಹೋಗುವುದಾಗಿ ನಿರ್ಧರಿಸಿದ್ದನಂತೆ. ಅದಕ್ಕಾಗಿ ಸೌರಭ್ ಪಾಸ್‌ಪೋರ್ಟ್ ಅರ್ಜಿ ಕೂಡ ಸಲ್ಲಿಸಿದ್ದರು.
ಕೊಲೆಯ ರಾತ್ರಿ
ಆದರೆ ಇದಕ್ಕೆ ಒಪ್ಪದ ಮುಸ್ಕಾನ್ ಸಾಹಿಲ್ ಜೊತೆಗೆ ಸೇರಿ ಕೊಲೆಯ ಸಂಚು ರೂಪಿಸಿದ್ದಾಳೆ. ಇದುವರೆಗಿನ ತನಿಖೆಯ ಪ್ರಕಾರ, ಮುಸ್ಕಾನ್ ಮಾರ್ಚ್ 3ರ ರಾತ್ರಿ ಸೌರಭ್‌ಗೆ ನಿದ್ರೆ ಮಾತ್ರೆಗಳನ್ನು ನೀಡಿದ್ದಾಳೆ. ನಿದ್ರಿಸಿದ ತಕ್ಷಣ ಮುಸ್ಕಾನ್ ಕಟ್-ಥ್ರೋಟ್ ರೇಜರ್ ಬಳಸಿ ಸೌರಭ್‌ನ ಕತ್ತು ಸೀಳಿದ್ದಾಳೆ. ಸಾಹಿಲ್ ಕರೆ ಮಾಡಿ ಬರಲು ತಿಳಿಸಿದ್ದಾಳೆ. ಸಾಹಿಲ್ ಬಂದ ಬಳಿಕ ಸೌರಭ್ ದೇಹದಿಂದ ತಲೆಯನ್ನು ಬೇರ್ಪಡಿಸಿ, ಇಬ್ಬರು ಸೇರಿ ದೇಹವನ್ನು 15 ತುಂಡಾಗಿಸಿ ಪ್ಲಾಸ್ಟಿಕ್ ಚೀಲದಲ್ಲಿ ದೇಹದ ಬಾಗಗಳನ್ನು ತುಂಬಿ, ಡ್ರಮ್‌ಗೆ ಎಸೆದು ಸಿಮೆಂಟ್‌ನಿಂದ ಅದನ್ನು ಮುಚ್ಚಿದ್ದಾರೆ. ಸೌರಭ್ ದೇಹ ತುಂಡಾಗಿಸಲು ಸಾಹಿಲ್ ಚಾಕುವನ್ನು ಬಳಸಿದ್ದಾನೆಂದು ತಿಳಿದು ಬಂದಿದೆ.
ಪ್ರಕರಣ ಗೊತ್ತಾಗಿದ್ದು ಹೇಗೆ?
ಸೌರಭ್‌ನ ದೇಹದ ಭಾಗಗಳ ಮೇಲೆ ಮಣ್ಣನ್ನು ಸುರಿದು ಡ್ರಮ್‌ನಲ್ಲಿ ಸಸಿ ನೆಡುವುದು ಆರಂಭಿಕ ಯೋಜನೆಯಾಗಿತ್ತು. ಆದರೆ ನಂತರ ಮುಸ್ಕಾನ್ ಮತ್ತು ಸಾಹಿಲ್ ದುರ್ವಾಸನೆಯ ಅಂಶವನ್ನು ಪರಿಗಣಿಸಿ ದೇಹವನ್ನು ಮರೆಮಾಡಲು ಸಿಮೆಂಟ್ ನಿಂದ ಡ್ರಮ್ ಅನ್ನು ಮುಚ್ಚುವುದು ಉತ್ತಮ ಎಂದು ನಿರ್ಧರಿಸಿದರು. ಬಳಿಕ ಅದನ್ನು ವಿಲೇವಾರಿ ಮಾಡಲು ಕೆಲವು ಕಾರ್ಮಿಕರನ್ನು ಕರೆದಿದ್ದಾರೆ. ಆದರೆ ಕಾರ್ಮಿಕರರು ಅದನ್ನು ಎತ್ತಲು ಸಾಧ್ಯವಾಗಲಿಲ್ಲ. ಮುಸ್ಕಾನ್ ಭಯಭೀತರಾಗಿ ತನ್ನ ಹೆತ್ತವರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ.
ಆಗ ಮುಸ್ಕಾನ್ ಪೋಷಕರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ಸೌರಭ್ ಕುಟುಂಬಸ್ಥರು ಮುಸ್ಕಾನ್ ಪೋಷಕರು ಕೂಡ ಈ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಒಟ್ಟಿನಲ್ಲಿ ಎಲ್ಲಾ ಕೋನದಿಂದಲೂ ಪೊಲೀಸರು ತನಿಖೆ ನಡೆಸುತ್ತಿದ್ದು, ಸದ್ಯ ಮುಸ್ಕಾನ್ ಹಾಗೂ ಸಾಹಿಲ್ ಜೈಲಿನಲ್ಲಿದ್ದಾರೆ. ಮದ್ಯವ್ಯಸನಿಗಳಾಗಿರುವ ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ.












Click it and Unblock the Notifications