
ಮದ್ಯಪ್ರಿಯರಿಗೆ ಶಾಕ್: ರಾಜಧಾನಿ ದೆಹಲಿಯಲ್ಲಿ ಏನಿದು ಒಣ ದಿನಗಳ ಆಚರಣೆ?
ನವದೆಹಲಿ, ಡಿಸೆಂಬರ್ 01: ರಾಷ್ಟ್ರ ರಾಜಧಾನಿಯಲ್ಲಿ ಮುಂಬರುವ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ದೆಹಲಿಯಲ್ಲಿ ಶುಕ್ರವಾರದಿಂದ ಭಾನುವಾರದವರೆಗೆ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗುತ್ತಿದೆ. ಈ ಸಮಯದಲ್ಲಿ ನಾಗರಿಕ ಚುನಾವಣೆಗಳ ಕಾರಣ ಮದ್ಯ ಮಾರಾಟವನ್ನು ನಿಷೇಧಿಸಲಾಗುವುದು ಎಂದು ನಗರ ಅಬಕಾರಿ ಇಲಾಖೆ ಪ್ರಕಟಿಸಿದೆ.
ಅಬಕಾರಿ ಇಲಾಖೆ ಡಿಸೆಂಬರ್ 7ರಂದು ಕೂಡ ಒಣ ದಿನ(ಡ್ರೈ ಡೇ)ವನ್ನಾಗಿ ಆಚರಿಸಲಾಗುವುದು ಎಂದು ಘೋಷಿಸಿದೆ. ದೆಹಲಿ ಕಮಿಷನರ್ (ಅಬಕಾರಿ) ಕೃಷ್ಣ ಮೋಹನ್ ಉಪ್ಪು ಬುಧವಾರ ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದು, ದೆಹಲಿ ಅಬಕಾರಿ ನಿಯಮಗಳು, 2010ರ ನಿಯಮ 52ರ ನಿಬಂಧನೆಗಳ ಅನುಸಾರವಾಗಿ ಡಿಸೆಂಬರ್ 2ರಿಂದ ಡಿಸೆಂಬರ್ 4 ಮತ್ತು ಡಿಸೆಂಬರ್ 7 ರವರೆಗೆ "ಶುಷ್ಕ ದಿನವಾಗಿ" ಆಚರಿಸಲು ಈ ಮೂಲಕ ಆದೇಶಿಸಲಾಗಿದೆ.
ದೆಹಲಿ ಪಾಲಿಕೆ ಚುನಾವಣೆ: ಮತದಾರರಿಗೆ ಕೇಜ್ರಿವಾಲ್ ಕೊಟ್ಟ 10 ಆಫರ್
ರಾಷ್ಟ್ರ ರಾಜಧಾನಿ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್‌ನ 250 ವಾರ್ಡ್‌ಗಳ ಚುನಾವಣೆ ಭಾನುವಾರ ನಡೆಯಲಿದ್ದು, ಇದೇ ಡಿಸೆಂಬರ್ 7ರಂದು ಮತ ಎಣಿಕೆ ಪ್ರಕ್ರಿಯೆಯು ನಡೆಯಲಿದೆ.

ಏನಿದು ಒಣ ದಿನಗಳ ಅರ್ಥ?
ಒಣ ದಿನಗಳು ಎಂದರೆ ಸರ್ಕಾರವು ಅಂಗಡಿಗಳು, ಕ್ಲಬ್‌ಗಳು, ಬಾರ್‌ಗಳು ಇತ್ಯಾದಿಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸುವ ದಿನಗಳು ಎಂದು ಹೇಳಲಾಗುತ್ತದೆ. ಈ ಒಂದು ನಿರ್ದಿಷ್ಟ ದಿನದಂದು "ಡಿಸೆಂಬರ್ 2, 2022ರ ಶುಕ್ರವಾರ ಸಂಜೆ 5:30 ಗಂಟೆಗಳಿಂದ ಡಿಸೆಂಬರ್ 4, 2022ರ ಭಾನುವಾರ ಸಂಜೆ 5:30 ಗಂಟೆಗಳವರೆಗೆ ಈ ದಿನಗಳನ್ನು ಒಣ ದಿನಗಳ ಜೊತೆಗೆ 'ಶುಷ್ಕ ದಿನಗಳು' ಎಂದು ಆಚರಿಸಲಾಗುತ್ತದೆ," ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಮತಎಣಿಕೆ ದಿನವೂ ದೆಹಲಿಯಲ್ಲಿ ಒಣ ದಿನ
ಅಲ್ಲದೆ, "ಡಿಸೆಂಬರ್ 7, 2022ರ ಬುಧವಾರ ಮಧ್ಯರಾತ್ರಿ 12:00 ಗಂಟೆಗಳಿಂದ ಮರುದಿನ ರಾತ್ರಿ 12:00 ಗಂಟೆಗಳವರೆಗೆ ಒಣ ದಿನವಾಗಿಯೂ ಸಹ ಆಚರಿಸಲಾಗುತ್ತದೆ" ಎಂದು ಅಧಿಸೂಚನೆ ಸೇರಿಸಲಾಗಿದೆ. 250 ವಾರ್ಡ್‌ಗಳ ವ್ಯಾಪ್ತಿಯಲ್ಲಿರುವ ನಾಗರಿಕ ಚುನಾವಣೆಯು ಡಿಸೆಂಬರ್ 4ರಂದು ನಡೆಯಲಿದೆ.

ರಾಜಧಾನಿ ಮಹಾನಗರ ಪಾಲಿಕೆಗಾಗಿ ತ್ರಿಕೋನ ಸ್ಪರ್ಧೆ
ನವದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕೆ ರಾಜಕೀಯ ಪಕ್ಷಗಳು ಪೈಪೋಟಿಗೆ ಇಳಿದಿವೆ. ರಾಷ್ಟ್ರೀಯ ಪಕ್ಷಗಳ ಎದುರು ಆಮ್ ಆದ್ಮಿ ಪಕ್ಷ ಕೂಡ ತೊಡೆ ತಟ್ಟಿ ನಿಂತಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ನವದೆಹಲಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಆಪ್ ಪಕ್ಷಕ್ಕೆ ಚುನಾವಣೆಯು ಪ್ರತಿಷ್ಠೆಯಾಗಿದ್ದರೆ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಮರ್ಯಾದೆ ಪ್ರಶ್ನೆಯಾಗಿದೆ. ಅದೇ ರೀತಿ ಆಪ್ ಮತ್ತು ಬಿಜೆಪಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಕೂಡ ಕಚ್ಚೆ ಕಟ್ಟಿಕೊಂಡು ನಿಂತಿದೆ.

ದೆಹಲಿ ಮಹಾನಗರ ಪಾಲಿಕೆಗೆ ಯಾವಾಗ ಚುನಾವಣೆ
ನವದೆಹಲಿ ಮಹಾನಗರ ಪಾಲಿಕೆಯ 250 ಕ್ಷೇತ್ರಗಳಿಗೆ ಡಿಸೆಂಬರ್ ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 4ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 7ರಂದು ಮತ ಎಣಿಕೆ ಕಾರ್ಯ ನಡೆಯುತ್ತದೆ. ದೆಹಲಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಳೆದ 2012ರಲ್ಲಿ ದೆಹಲಿ ಪಾಲಿಕೆಯನ್ನು ಉತ್ತರ, ದಕ್ಷಿಣ ಹಾಗೂ ಪೂರ್ವ ನಿಗಮಗಳಾಗಿ ವಿಭಜನೆ ಮಾಡಲಾಯಿತು.