Maternity Leave: ಮಾತೃತ್ವ ರಜೆ ಬಳಿಕ ಮಹಿಳೆಯ ಹುದ್ದೆ, ಜವಾಬ್ದಾರಿ ಕಡಿಮೆ ಮಾಡುವಂತಿಲ್ಲ: ದೆಹಲಿ ಹೈಕೋರ್ಟ್

ತಾಯ್ತನ ಅನ್ನೋದು ಫುಲ್‌ಟೈಮ್‌ ಕೆಲಸ. ಅದರಲ್ಲೂ ಮಗು ಹೆತ್ತು, ಮತ್ತೆ ಕಚೇರಿ ಕೆಲಸಕ್ಕೆ ಮರಳ್ತಾರಲ್ಲ, ಅವರಿಗೆ ಇರೋ ಒತ್ತಡ ಅಂತಿಂಥದ್ದಲ್ಲ, ಅದರ ನಡುವೆಯೂ ಆಫೀಸಿನಲ್ಲಿ ವಹಿಸಿದ ಕೆಲಸವನ್ನು ತಪ್ಪಿಲ್ಲದೆ ನಿಭಾಯಿಸ್ತಾರಲ್ಲ ,ಅಂಥ ತಾಯಂದಿರಿಗೆ ಸಲಾಂ ಹೇಳಬೇಕು. ಅಂಥ ತಾಯಿ ಉದ್ಯೋಗಿಗಳ ಹಕ್ಕುಗಳನ್ನು ಎತ್ತಿ ಹಿಡಿಯೋ ಕೆಲಸವನ್ನು ದೆಹಲಿ ಹೈಕೋರ್ಟ್‌ ಮಾಡಿದೆ.

ಸಾಮಾನ್ಯವಾಗಿ ಮಾತೃತ್ವ ರಜೆ ಮುಗಿಸಿ ಕೆಲಸಕ್ಕೆ ಮರಳುವ ಮಹಿಳೆಯ ಸಂಬಳ ಹಾಗೂ ಹುದ್ದೆ ಹಾಗೇ ಇರುತ್ತೆ. ಬಡ್ತಿ, ಇನ್‌ಕ್ರಿಮೆಂಟ್‌ ಮಾತ್ರ ಕೊಡೋದಿಲ್ಲ. ಆದ್ರೆ ಹೈಕೋರ್ಟ್‌ ಈಗ ಅದನ್ನೂ ಕೊಡಬೇಕು ಎಂದಿದೆ. ಆಕೆಯ ಜವಾಬ್ದಾರಿ, ಅಧಿಕಾರ, ಸಂಸ್ಥೆಯಲ್ಲಿನ ಸ್ಥಾನಮಾನ ಹಾಗೂ ಬಡ್ತಿ ಮತ್ತು ವೃತ್ತಿ ಪ್ರಗತಿಯ ಅವಕಾಶಗಳನ್ನೂ ರಕ್ಷಿಸಬೇಕು ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

Maternity Leave Delhi High Court Issues Landmark Ruling Says Women Must Return to Same Responsibilities

ಮಾತೃತ್ವ ರಜೆಯಿಂದ ಹಿಂದಿರುಗಿದ ಬಳಿಕ ಮಹಿಳಾ ಉದ್ಯೋಗಿಯ ವೇತನ ಮತ್ತು ಹುದ್ದೆ ಅದೇ ರೀತಿಯಲ್ಲಿ ಮುಂದುವರಿದರೂ, ಆಕೆಯ ನಿರ್ವಹಣಾ ಜವಾಬ್ದಾರಿಗಳನ್ನು ಕಡಿಮೆ ಮಾಡುವುದು ಅಥವಾ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಕಸಿದುಕೊಳ್ಳುವುದು ಕಾನೂನಿನ ಆಶಯಕ್ಕೆ ವಿರುದ್ಧವಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿ ಸಚಿನ್ ದತ್ತಾ ಅವರು ಆಗಸ್ಟ್ 31, 2026ರಂದು ನೀಡಿದ ತೀರ್ಪಿನಲ್ಲಿ, ಸಾಮಾನ್ಯವಾಗಿ ಮಾತೃತ್ವ ರಜೆಗೂ ಮುನ್ನ ಮಹಿಳೆ ನಿರ್ವಹಿಸುತ್ತಿದ್ದ ಹುದ್ದೆಯನ್ನೇ ಆಕೆ ಕೆಲಸಕ್ಕೆ ಮರಳಿದ ಬಳಿಕ ನೀಡಬೇಕು ಎಂದು ಹೇಳಿದ್ದಾರೆ.

ಒಂದು ವೇಳೆ ಆ ಹುದ್ದೆಯೇ ಸಂಸ್ಥೆಯ ನಿಜವಾದ ಮತ್ತು ಸ್ಪಷ್ಟವಾಗಿ ಸಾಬೀತುಪಡಿಸಬಹುದಾದ ಕಾರಣಗಳಿಂದ ಅಸ್ತಿತ್ವದಲ್ಲಿಲ್ಲದಿದ್ದರೆ, ಅದಕ್ಕೆ ಸಾಧ್ಯವಾದಷ್ಟು ಸಮಾನವಾದ ಪರ್ಯಾಯ ಹುದ್ದೆಯನ್ನು ನೀಡಬೇಕು. ವೇತನ ಮಾತ್ರವಲ್ಲದೆ ಗ್ರೇಡ್, ಸ್ಥಾನಮಾನ, ಜವಾಬ್ದಾರಿ, ನಿರ್ವಹಣಾ ಅಧಿಕಾರ ಹಾಗೂ ಭವಿಷ್ಯದ ಬಡ್ತಿ ಮತ್ತು ವೃತ್ತಿ ಪ್ರಗತಿಯ ಅವಕಾಶಗಳನ್ನೂ ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಏನಿದು Maternity Leave ಪ್ರಕರಣ?

ಈ ತೀರ್ಪು ಚಾರ್ಟರ್ಡ್ ಅಕೌಂಟೆಂಟ್ ರಾಖಿ ಬಿಷ್ಟ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ಬಂದಿದೆ. ಗರ್ಭಧಾರಣೆಯ ವಿಚಾರವನ್ನು ಸಂಸ್ಥೆಗೆ ತಿಳಿಸಿದ ಬಳಿಕ ಹಾಗೂ ಮಾತೃತ್ವ ರಜೆ ಮುಗಿಸಿ ಕೆಲಸಕ್ಕೆ ಮರಳಿದ ನಂತರ ತಮ್ಮ ವೃತ್ತಿಪರ ಸ್ಥಾನಮಾನಕ್ಕೆ ಧಕ್ಕೆಯಾಗಿದೆ ಎಂದು ಅವರು ಆರೋಪಿಸಿದ್ದರು. ಸುಮಾರು 14 ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದ ಬಿಷ್ಟ್ ಅವರು 2022ರಲ್ಲಿ ಸಂಸ್ಥೆಗೆ 'ಮ್ಯಾನೇಜರ್, ಅಕೌಂಟಿಂಗ್' ಹುದ್ದೆಗೆ ಸೇರ್ಪಡೆಯಾಗಿದ್ದರು. ಆಗ ಅವರ ಮಾಸಿಕ ವೇತನ 2.60 ಲಕ್ಷ ರೂಪಾಯಿಯಾಗಿತ್ತು.

2023ರ ಮೇ ತಿಂಗಳಲ್ಲಿ ತಾವು ಗರ್ಭಿಣಿಯಾಗಿರುವ ವಿಚಾರವನ್ನು ಆಡಳಿತಕ್ಕೆ ತಿಳಿಸಿದ್ದರು. ನಂತರ ಅವರನ್ನು ಮತ್ತೊಂದು ತಂಡಕ್ಕೆ ವರ್ಗಾಯಿಸಲಾಯಿತು. 2023ರ ಡಿಸೆಂಬರ್‌ನಲ್ಲಿ ಮಾತೃತ್ವ ರಜೆಗೆ ತೆರಳಿದ ಅವರು 2024ರ ಜುಲೈನಲ್ಲಿ ಕೆಲಸಕ್ಕೆ ಮರಳಿದರು.

ಆದರೆ ಕೆಲಸಕ್ಕೆ ಮರಳಿದಾಗ ತಾವು ಈ ಹಿಂದೆ ನಿರ್ವಹಿಸುತ್ತಿದ್ದ ಹುದ್ದೆ ಈಗ ಲಭ್ಯವಿಲ್ಲ ಎಂದು ತಿಳಿಸಲಾಯಿತು. ಬದಲಿಗೆ ಅವರನ್ನು ಟ್ರೆಷರಿ ವಿಭಾಗಕ್ಕೆ ನಿಯೋಜಿಸಲಾಗಿತ್ತು. ಈ ಹೊಸ ಹುದ್ದೆ ತಾವು ಹಿಂದೆ ನಿರ್ವಹಿಸುತ್ತಿದ್ದ ನಿರ್ವಹಣಾ ಜವಾಬ್ದಾರಿಗಳಿಗೆ ಹೋಲಿಸಿದರೆ ಬಹಳಷ್ಟು ಕೆಳಮಟ್ಟದ್ದಾಗಿತ್ತು ಎಂದು ಬಿಷ್ಟ್ ಆರೋಪಿಸಿದ್ದರು.

ಅಲ್ಲದೆ, ತಮ್ಮ ಅಡಿಯಲ್ಲಿ ಯಾವುದೇ ಸಿಬ್ಬಂದಿಯನ್ನು ನೀಡಲಾಗಿರಲಿಲ್ಲ ಮತ್ತು ನಿರ್ವಹಣಾ ಸಭೆಗಳಿಂದಲೂ ತಮ್ಮನ್ನು ದೂರ ಇಡಲಾಗಿತ್ತು ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ಸಂಸ್ಥೆಯ ವಾದವೇನು?

ಬಿಷ್ಟ್ ಅವರ ಆರೋಪಗಳನ್ನು ಸಂಸ್ಥೆ ನಿರಾಕರಿಸಿತು. ಅವರ ಹುದ್ದೆ, ವೇತನ, ಹಂತ ಅಥವಾ ಸೇವಾ ಹಿರಿಯತ್ವದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಸಂಸ್ಥೆ ಹೇಳಿತು. ಸಂಸ್ಥೆಯ ಪುನರ್‌ರಚನೆಯ ಹಿನ್ನೆಲೆಯಲ್ಲಿ ಅವರಿಗೆ ಹೂಡಿಕೆ ಲೆಕ್ಕಪತ್ರ ಮತ್ತು ಕರೆನ್ಸಿ ಮರುಮೌಲ್ಯಮಾಪನದ ಜವಾಬ್ದಾರಿಗಳನ್ನು ನೀಡಲಾಗಿತ್ತು. ಅವರು ಅದೇ ಮ್ಯಾನೇಜರ್ ಹಂತದಲ್ಲೇ ಮುಂದುವರಿದಿದ್ದರು ಎಂದು ಸಂಸ್ಥೆ ವಾದಿಸಿತು.

ಈ ವಾದವನ್ನು ಒಪ್ಪದ ದೆಹಲಿ ಹೈಕೋರ್ಟ್, ಉದ್ಯೋಗಿಯ ವೇತನ ಮತ್ತು ಹುದ್ದೆಯನ್ನು ಕಾಗದದ ಮೇಲೆ ಮಾತ್ರ ಉಳಿಸಿಕೊಂಡು ಆಕೆಯ ನಿಜವಾದ ಜವಾಬ್ದಾರಿ, ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಅಥವಾ ವೃತ್ತಿ ಪ್ರಗತಿಯ ಅವಕಾಶಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿತು.

ಅಂತಹ ಕ್ರಮದ ಮೂಲಕ ಕಾನೂನಿನಿಂದ ನೇರವಾಗಿ ಮಾಡಲು ಸಾಧ್ಯವಿಲ್ಲದ ಕೆಲಸವನ್ನು ಪರೋಕ್ಷವಾಗಿ ಮಾಡಲು ಅವಕಾಶ ನೀಡಿದಂತಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಮಾತೃತ್ವ ಪ್ರಯೋಜನ ಕಾಯ್ದೆಯ ಸೆಕ್ಷನ್ 12(1) ಅಡಿಯಲ್ಲಿ 'ಸೇವೆಯ ಷರತ್ತುಗಳು' ಎಂಬ ಪದಕ್ಕೆ ಉದ್ಯೋಗದ ನಿಜವಾದ ಸ್ವರೂಪವೂ ಸೇರಿದೆ. ಅಂದರೆ ಉದ್ಯೋಗಿಯ ಕರ್ತವ್ಯಗಳ ಸ್ವರೂಪ, ಗ್ರೇಡ್, ಕಾರ್ಯನಿರ್ವಹಣಾ ಸ್ಥಾನ, ವರದಿ ವ್ಯವಸ್ಥೆ, ಮೇಲ್ವಿಚಾರಣಾ ಜವಾಬ್ದಾರಿ ಹಾಗೂ ಬಡ್ತಿ ಮತ್ತು ಮೌಲ್ಯಮಾಪನದ ಅವಕಾಶಗಳನ್ನೂ ಇದು ಒಳಗೊಂಡಿದೆ.

ಹೀಗಾಗಿ ಅದೇ ಹುದ್ದೆ ಮತ್ತು ಅದೇ ವೇತನ ನೀಡಿರುವುದು ಅಗತ್ಯವಾದರೂ, ಅದೊಂದೇ ಸಾಕಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಕ್ರೀಚ್ ಇದ್ದರೆ ಮಾತ್ರ ಸಾಲದು

ಕೆಲಸದ ಸ್ಥಳದಲ್ಲಿ ಕ್ರೀಚ್ ಸೌಲಭ್ಯವಿರುವ ವಿಚಾರವನ್ನೂ ನ್ಯಾಯಾಲಯ ಪರಿಗಣಿಸಿದೆ.

2024ರ ಸೆಪ್ಟೆಂಬರ್‌ನಲ್ಲಿ ಬಿಷ್ಟ್ ಅವರು ಸಂಸ್ಥೆಯಲ್ಲಿ ಕ್ರೀಚ್ ಸೌಲಭ್ಯವಿದೆಯೇ ಎಂದು ವಿಚಾರಿಸಿದ್ದರು. ಆರಂಭದಲ್ಲಿ ಆ ಸಮಯದಲ್ಲಿ ಯಾವುದೇ ಸೌಲಭ್ಯವಿಲ್ಲ ಎಂದು ಅವರಿಗೆ ತಿಳಿಸಲಾಗಿತ್ತು. ಬಳಿಕ ಸಂಸ್ಥೆ ಕ್ರೀಚ್ ಇದ್ದರೂ, ಅವರು ಕೇಳಿದ ದಿನಗಳಲ್ಲಿ ಅದು ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ವಾದಿಸಿತು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಕೇವಲ ಕ್ರೀಚ್ ಸೌಲಭ್ಯ ಇದೆ ಎಂದು ಹೇಳುವುದರಿಂದ ಕಾನೂನುಬದ್ಧ ಕರ್ತವ್ಯ ಪೂರ್ಣಗೊಂಡಂತಾಗುವುದಿಲ್ಲ ಎಂದು ಹೇಳಿತು. ಉದ್ಯೋಗಿಗೆ ಅಗತ್ಯವಿರುವ ಸಂದರ್ಭದಲ್ಲಿ ಅದನ್ನು ನಿಜವಾಗಿ ಬಳಸಲು ಸಾಧ್ಯವಾಗಬೇಕು. ಕಾರ್ಯನಿರ್ವಹಿಸದ ಕ್ರೀಚ್ ಅನ್ನು ಸೌಲಭ್ಯವೆಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಮಹಿಳೆಗೆ 10 ಲಕ್ಷ ರೂ. ಪರಿಹಾರ

ಪ್ರಕರಣದಲ್ಲಿ ಬಿಷ್ಟ್ ಅವರ ಹಿಂದಿನ ಹುದ್ದೆಯನ್ನು ಮತ್ತೊಬ್ಬ ಉದ್ಯೋಗಿಗೆ ನೀಡಲಾಗಿತ್ತು ಮತ್ತು ಅವರು ಮಾತೃತ್ವ ರಜೆಯಲ್ಲಿದ್ದ ಅವಧಿಯಲ್ಲಿ ಆ ಉದ್ಯೋಗಿಗೆ ಬಡ್ತಿ ನೀಡಲಾಗಿತ್ತು ಎಂಬ ಅಂಶವನ್ನೂ ನ್ಯಾಯಾಲಯ ಗಮನಿಸಿದೆ.

ಇದಲ್ಲದೆ, ಕೆಲಸಕ್ಕೆ ಮರಳಿದ ಬಳಿಕ ಬಿಷ್ಟ್ ಅವರನ್ನು 'ತೊಡಗಿಸಿಕೊಂಡಂತೆ ಇರಿಸಲು' ಕೆಲವು ಚಟುವಟಿಕೆಗಳನ್ನು ನೀಡುವ ಕುರಿತು ಸಂಸ್ಥೆಯ ಆಂತರಿಕ ಸಂವಹನದಲ್ಲಿ ಉಲ್ಲೇಖವಿದ್ದುದನ್ನೂ ನ್ಯಾಯಾಲಯ ಪರಿಗಣಿಸಿತು.

ನ್ಯಾಯಾಲಯವು ಬಿಷ್ಟ್ ಅವರಿಗೆ 10 ಲಕ್ಷ ರೂಪಾಯಿ ಪರಿಹಾರ ಹಾಗೂ 1.5 ಲಕ್ಷ ರೂಪಾಯಿ ನ್ಯಾಯಾಲಯದ ವೆಚ್ಚ ಪಾವತಿಸುವಂತೆ ಆದೇಶಿಸಿದೆ. ಪರಿಹಾರದ ಮೊತ್ತ ನಿಗದಿಪಡಿಸುವಾಗ ಅವರ ಚಾರ್ಟರ್ಡ್ ಅಕೌಂಟೆಂಟ್ ವೃತ್ತಿಪರ ಸ್ಥಾನಮಾನ, ಸುಮಾರು 14 ವರ್ಷಗಳ ಅನುಭವ ಮತ್ತು 2.60 ಲಕ್ಷ ರೂಪಾಯಿ ಮಾಸಿಕ ವೇತನವನ್ನು ಪರಿಗಣಿಸಲಾಗಿದೆ.

ಈ ಮೊತ್ತವನ್ನು ಎಂಟು ವಾರಗಳೊಳಗೆ ಪಾವತಿಸಬೇಕು. ವಿಳಂಬವಾದರೆ ತೀರ್ಪಿನ ದಿನಾಂಕದಿಂದ ಪಾವತಿ ಮಾಡುವವರೆಗೆ ಶೇ.9ರಷ್ಟು ವಾರ್ಷಿಕ ಬಡ್ಡಿ ವಿಧಿಸಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಉದ್ಯೋಗದಾತರು ಏನು ಮಾಡಬೇಕು?

ಮಾತೃತ್ವ ರಜೆ ಮುಗಿಸಿ ಮಹಿಳೆ ಕೆಲಸಕ್ಕೆ ಮರಳುವ ಸಂದರ್ಭದಲ್ಲಿ ಆಕೆ ಹಿಂದೆ ನಿರ್ವಹಿಸುತ್ತಿದ್ದ ಹುದ್ದೆಯನ್ನು ಸಾಮಾನ್ಯವಾಗಿ ಮರಳಿ ನೀಡಬೇಕು. ಒಂದು ವೇಳೆ ಸಂಸ್ಥೆಯ ನಿಜವಾದ ಪುನರ್‌ರಚನೆಯ ಕಾರಣದಿಂದ ಆ ಹುದ್ದೆ ಅಸ್ತಿತ್ವದಲ್ಲಿಲ್ಲದಿದ್ದರೆ, ಅದಕ್ಕೆ ಸಮಾನವಾದ ಹುದ್ದೆಯನ್ನು ನೀಡಬೇಕು. ಹೊಸ ಹುದ್ದೆಯ ವೇತನ, ಗ್ರೇಡ್, ಸ್ಥಾನಮಾನ, ಜವಾಬ್ದಾರಿ, ವರದಿ ವ್ಯವಸ್ಥೆ, ನಿರ್ವಹಣಾ ಅಧಿಕಾರ ಹಾಗೂ ವೃತ್ತಿ ಪ್ರಗತಿಯ ಅವಕಾಶಗಳನ್ನು ಹಳೆಯ ಹುದ್ದೆಯೊಂದಿಗೆ ಹೋಲಿಸಬೇಕು.

ಅಷ್ಟೇ ಅಲ್ಲದೆ, ಮಹಿಳೆ ಕೆಲಸಕ್ಕೆ ಮರಳುವ ಮುನ್ನವೇ ಹಿಂದಿನ ಹುದ್ದೆ ಏಕೆ ಲಭ್ಯವಿಲ್ಲ ಎಂಬುದನ್ನು ಸಂಸ್ಥೆ ವಿವರಿಸಬೇಕು. ಪರ್ಯಾಯವಾಗಿ ನೀಡುತ್ತಿರುವ ಹುದ್ದೆಯ ಜವಾಬ್ದಾರಿ, ವೇತನ, ಗ್ರೇಡ್ ಮತ್ತು ವರದಿ ವ್ಯವಸ್ಥೆಯ ವಿವರಗಳನ್ನೂ ತಿಳಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಉದ್ಯೋಗಿ ಆ ವ್ಯವಸ್ಥೆಗೆ ಆಕ್ಷೇಪ ವ್ಯಕ್ತಪಡಿಸಿದರೆ, ಸಂಸ್ಥೆ ಅದನ್ನು ಪರಿಗಣಿಸಿ ತನ್ನ ನಿರ್ಧಾರವನ್ನು ಕಾರಣಗಳೊಂದಿಗೆ ಲಿಖಿತವಾಗಿ ತಿಳಿಸಬೇಕು.

ಹಕ್ಕು ಕಳೆದುಕೊಳ್ಳುವುದಿಲ್ಲ

ಮಾತೃತ್ವ ರಜೆಯ ಬಳಿಕ ಮಹಿಳೆಯೇ ತನ್ನ ಕೆಲಸದ ಜವಾಬ್ದಾರಿ, ಕೆಲಸದ ಸಮಯ, ಕೆಲಸದ ಸ್ಥಳ (jobs), ಕೆಲಸದ ಮಾದರಿ ಅಥವಾ ಹುದ್ದೆಯಲ್ಲಿ ಬದಲಾವಣೆ ಕೇಳಬಹುದು ಎಂದು ನ್ಯಾಯಾಲಯ ಹೇಳಿದೆ. ಆದರೆ ಅಂತಹ ಮನವಿಯನ್ನು ಆಕೆ ಕಡಿಮೆ ಮಟ್ಟದ ಸೇವಾ ಷರತ್ತುಗಳನ್ನು ಒಪ್ಪಿಕೊಂಡಿದ್ದಾಳೆ ಎಂಬುದಕ್ಕೆ ಸಾಕ್ಷಿಯಾಗಿ ಬಳಸಲು ಸಾಧ್ಯವಿಲ್ಲ. ಅದೇ ರೀತಿ, ಮುಂದಿನ ಮೌಲ್ಯಮಾಪನ, ವೇತನ ಹೆಚ್ಚಳ ಅಥವಾ ಬಡ್ತಿಯ ಸಂದರ್ಭದಲ್ಲಿ ಆಕೆಯ ವಿರುದ್ಧ ಇದನ್ನು ಬಳಸಬಾರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಈ ಪ್ರಕರಣ ಖಾಸಗಿ ಸಂಸ್ಥೆಯ ಉದ್ಯೋಗಕ್ಕೆ ಸಂಬಂಧಿಸಿದ್ದರಿಂದ, ಮಾತೃತ್ವ ಪ್ರಯೋಜನ ಕಾಯ್ದೆಯ ಅಡಿಯಲ್ಲಿ ಇಂತಹ ಅರ್ಜಿಯನ್ನು ಹೈಕೋರ್ಟ್ ವಿಚಾರಿಸಬಹುದೇ ಎಂಬ ಪ್ರಶ್ನೆಯೂ ಎದುರಾಗಿತ್ತು. ಆದರೆ ಮಹಿಳೆ ಕೇವಲ ತನ್ನ ಉದ್ಯೋಗ ಒಪ್ಪಂದವನ್ನು ಜಾರಿಗೊಳಿಸುವಂತೆ ಕೇಳುತ್ತಿಲ್ಲ. ಮಾತೃತ್ವ ಪ್ರಯೋಜನ ಕಾಯ್ದೆಯ ಸೆಕ್ಷನ್ 12 ನೀಡಿರುವ ಕಾನೂನುಬದ್ಧ ರಕ್ಷಣೆಯನ್ನು ಪಡೆಯಲು ಮನವಿ ಮಾಡುತ್ತಿದ್ದಾರೆ ಎಂದು ನ್ಯಾಯಾಲಯ ಹೇಳಿತು.

ಕಾಯ್ದೆಯ ಸೆಕ್ಷನ್ 27ರ ಪ್ರಕಾರ, ಉದ್ಯೋಗ ಒಪ್ಪಂದದಲ್ಲಿರುವ ಯಾವುದೇ ಅಸಂಗತ ಷರತ್ತುಗಳಿಗಿಂತ ಕಾಯ್ದೆಯ ನಿಯಮಗಳಿಗೆ ಮೇಲುಗೈ ಇದೆ. ಹೀಗಾಗಿ ಸಂಸ್ಥೆ ಖಾಸಗಿಯದ್ದಾಗಿದೆ ಎಂಬ ಕಾರಣಕ್ಕೆ ಕಾನೂನುಬದ್ಧ ಮಾತೃತ್ವ ರಕ್ಷಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ವೃತ್ತಿಜೀವನಕ್ಕೆ ಹಿನ್ನಡೆಯಾಗಬಾರದು

ಈ ತೀರ್ಪಿನ ಮೂಲಕ ದೆಹಲಿ ಹೈಕೋರ್ಟ್ (delhi high court) ಮಾತೃತ್ವ ರಕ್ಷಣೆಯ ವ್ಯಾಪ್ತಿಯನ್ನು ಮತ್ತಷ್ಟು ಸ್ಪಷ್ಟಪಡಿಸಿದೆ. ಮಹಿಳೆ ಮಗುವಿಗೆ ಜನ್ಮ ನೀಡಿದ ಕಾರಣಕ್ಕೆ ಆಕೆಯ ವೃತ್ತಿಜೀವನ, ಸ್ಥಾನಮಾನ ಅಥವಾ ಆರ್ಥಿಕ ಭದ್ರತೆಗೆ ಧಕ್ಕೆಯಾಗಬಾರದು ಎಂಬುದು ತೀರ್ಪಿನ ಪ್ರಮುಖ ಸಂದೇಶವಾಗಿದೆ.

ಕೇಂದ್ರ ಸರ್ಕಾರವು ಗರ್ಭಾವಸ್ಥೆಯಲ್ಲಿನ ಕೆಲಸದ ಸೌಲಭ್ಯಗಳು, ಮಾತೃತ್ವ ರಜೆ ಬಳಿಕ ಹುದ್ದೆ ಮತ್ತು ಸ್ಥಾನಮಾನದ ರಕ್ಷಣೆ, ಹಾಲುಣಿಸುವ ತಾಯಂದಿರಿಗೆ ಅಗತ್ಯ ಬೆಂಬಲ, ಕ್ರೆಶ್ ಸೌಲಭ್ಯ, ದೂರುಗಳ ತ್ವರಿತ ಪರಿಹಾರ, ರಕ್ಷಣೆ ಸೇರಿದಂತೆ ಹಲವು ವಿಷಯಗಳ ಕುರಿತು ನಿಯಮಗಳನ್ನು ರೂಪಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ. ಈ ಪ್ರಕ್ರಿಯೆಯನ್ನು ತೀರ್ಪಿನ ದಿನಾಂಕದಿಂದ ಆರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+