Visakhapatnam: ಬಂದರಿನಲ್ಲಿ ದಿಢೀರ್ ಬೆಂಕಿ ಜ್ವಾಲೆ: 30ಕ್ಕೂ ಹೆಚ್ಚು ದೋಣಿಗಳು ಭಸ್ಮ, ನಷ್ಟದ ವಿವರ
ವಿಶಾಖಪಟ್ಟಣಂ, ನವೆಂಬರ್ 20: ಭಾನುವಾರ ತಡರಾತ್ರಿ ವಿಶಾಖಪಟ್ಟಣಂನ ಬಂದರಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ ಸುಮಾರು 30ಕ್ಕೂ ಮೀನುಗಾರರ ದೋಣಿಗಳು (Boats) ಬೆಂಕಿಗೆ ಸುಟ್ಟು ಕರಕಲಾಗಿವೆ. ಕೋಟ್ಯಂತರ ರೂಪಾಯಿ ನಷ್ಟವಾಗಿದೆ.
ಬಂದರಿನಲ್ಲಿದ್ದ ಮೀನುಗಾರಿಕಾ ದೋಣಿಗಳಲ್ಲಿ ದಿಢೀರನೇ ಬೆಂಕಿ ಕಾಣಿಸಿಕೊಂಡಿದ್ದು, ನೋಡು ನೋಡುತ್ತಿದ್ದಂತೆ ಇನ್ನಿತರ ದೋಣಿಗಳಿಗೆ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿ ಅನೇಕ ಬೋಟುಗಳು ಆಹುತಿಯಾದವು. ಒಂದು ಬೋಟಿಗೆ 15 ಲಕ್ಷ ರೂಪಾಯಿ ಎಂದುಕೊಂಡರೂ ಈ ದುರಂತದಲ್ಲಿ ಸುಮಾರು ₹ 4-5 ಕೋಟಿಯಷ್ಟು ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.

ರಾತ್ರಿಯಿಂದಲೇ ಸ್ಥಳದಲ್ಲಿ ಬೀಡು ಬಿಟ್ಟಿರುವ ಭಾರತೀಯ ನೌಕಾಪಡೆಯ ಹಡಗು ಮತ್ತು ಅನೇಕ ಅಗ್ನಿಶಾಮಕ ಇಂಜಿನ್‌ಗಳು ಅಗ್ನಿಯನ್ನು ನಂದಿಸುವಲ್ಲಿ ಹರಸಾಹಸ ಪಟ್ಟವು. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಪ್ರಾಣಹಾನಿಯಾದ ಬಗ್ಗೆ ವರದಿ ಆಗಿಲ್ಲ.
ಸುಟ್ಟು ಬೂದಿಯಾದ ದೋಣಿಗಳು
ವಿಶಾಖಪಟ್ಟಣಂ ಪೊಲೀಸ್ ಕಮಿಷನರ್ ರವಿಶಂಕರ್ ಅವರು, ಮೀನುಗಾರಿಕಾ ದೋಣಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಇತರ ದೋಣಿಗಳಿಗೆ ಹರಡದಂತೆ ಮಾಡಲು ಆ ದೋಣಿಯನ್ನು ಕತ್ತರಿಸಲಾಯಿತು. ಬೆಂಕಿ ಹೊತ್ತಿಕೊಂಡಿದ್ದ ದೋಣಿ ಅರ್ಧ ಭಾಗ ಬೇರೆಡೆಗೆ ದೂಡಿದರೂ ಸಹ ಮತ್ತೆ ಅದು ನೀರು- ಗಾಳಿಯ ಸೆಳೆತಕ್ಕೆ ಮರಳಿ ತಾನಿದ್ದ ಜಾಗಕ್ಕೆ ಬಂದ ಪರಿಣಾಮ 30ಕ್ಕೂ ಹೆಚ್ಚು ದೋಣಿಗಳು ಬೆಂಕಿಗೆ ಸುಟ್ಟು ಬೂದಿಯಾದವು.
#WATCH | Andhra Pradesh: A massive fire broke out in Visakhapatnam fishing harbour. The fire that started with the first boat eventually spread to 40 boats. Several fire tenders reached the spot to control the fire. Police have registered a case and are investigating the matter.… pic.twitter.com/1ZYgiWInOz
— ANI (@ANI) November 20, 2023
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ದೋಣಿಗಳಲ್ಲಿದ್ದ ಡೀಸೆಲ್ ಕಂಟೈನರ್‌ಗಳು ಮತ್ತು ಗ್ಯಾಸ್ ಸಿಲಿಂಡರ್‌ಗಳು ಬೆಂಕಿ ತಾಗಿದ್ದರಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಂಕಿಯ ಜ್ವಾಲೆ ಬೇರೆಡೆ ವಿಸ್ತರಣೆ ಆಗಿದೆ ಎಂದು ಅವರು ತಿಳಿಸಿದ್ದಾರೆ.
ಕೆಲವು ದುಷ್ಕರ್ಮಿಗಳು ದುರುದ್ದೇಶದಿಂದಲೇ ದೋಣಿಗಳಿಗೆ ಬೆಂಕಿ ಹಚ್ಚಿದ್ದಾರೆ ಅಂತಲೂ ಶಂಕಿಸಲಾಗಿದೆ. ಇದು ಮೀನುಗಾರರ ಅನುಮಾನವು ಅದೇ ಆಗಿದೆ. ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿರಬಹುದು ಅಂತಲೂ ಊಹಿಸಲಾಗಿದ್ದು, ಪೊಲೀಸರು ಈ ಎಲ್ಲ ಆಯಾಮದಲ್ಲೂ ತನಿಖೆ ನಡೆಸಲಿದ್ದಾರೆ ಎಂದರು.

ಸಿಲಿಂಡರ್ ಸ್ಫೋಟದಿಂದ ಬೆಂಕಿ?: ಸಂಶಯ
ಎಲ್ಲ ದೋಣಿಗಳ ಪೈಕಿ ಇಂಧನ ಹೆಚ್ಚು ಇರುವ ದೋಣಿಗಳು ಬೆಂಕಿ ತಾಗುತ್ತಿದ್ದಂತೆ ಸ್ಪೋಟಿಸಿದವು. ಹೀಗಾಗಿ ಬೆಂಕಿ ಬಾನೆತ್ತರಕ್ಕೆ ಚಿಮ್ಮಿದ್ದು ಕಂಡು ಬಂತು. ಇದು ಕೆಲ ಹೊತ್ತು ಬಂದರಿನ ಪ್ರದೇಶದಲ್ಲಿ ಆತಂಕ ಸೃಷ್ಟಿಗೆ ಕಾರಣವಾಯಿತು.
ಪೊಲೀಸ್ ಮೂಲಗಳ ಪ್ರಕಾರ, ಭಾನುವಾರ 11:30ರ ಹೊತ್ತಿಗೆ ಈ ಬೆಂಕಿ ಕಾಣಿಸಿಕೊಂಡಿದ್ದು, ದೋಣಿಗಳಲ್ಲಿನ ಸಿಲಿಂಡರ್‌ಗಳು ಸ್ಫೋಟದಿಂದ ಅವಘಡ ನಡೆದಿದೆ. ಈಗಾಗಲೇ ಸ್ಥಳದಲ್ಲಿದ್ದ ನಾಗರಿಕರಿಗೆ ಸುರಕ್ಷಿತ ಸ್ಥಳದಲ್ಲಿರಲು ಸೂಚಿಸಲಾಗಿದೆ. ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ಇಂಜಿನ್‌ಗಳು ಕಾರ್ಯ ನಿರ್ವಹಿಸುತ್ತಿವೆ.
ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣವೇನು ಎಂಬುದು ದೃಢವಾಗಬೇಕಿದೆ. ಯಾವುದೇ ಸಾವು ನೋವುಗಳು ವರದಿಯಾಗಿಲ್ಲ, ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ತನಿಖೆ ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications