ಮೋದಿ-ಒಬಾಮಾ 'ಮನ್‌ ಕೀ ಬಾತ್'ನ ಮುಖ್ಯಾಂಶಗಳು

Posted By: Staff
Subscribe to Oneindia Kannada

ನವದೆಹಲಿ, ಜ.28 : 'ಅಮೆರಿಕದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅಪಾರವಾದ ಗೌರವವಿದೆ. ಬಡತನ ನಿವಾರಣೆಗೆ, ಮಹಿಳಾ ಸ್ವಾವಲಂಬನೆಗೆ ಅವರು ಕೈಗೊಳ್ಳುವ ಕ್ರಮಗಳು ಪ್ರಶಂಸೆಗೆ ಕಾರಣವಾಗಿವೆ. ಭಾರತ-ಅಮೆರಿಕ ಕೈ ಜೋಡಿಸಿದರೆ, ಜಗತ್ತು ಇನ್ನೂ ಸಮೃದ್ಧಿ, ಶಾಂತಿ, ಸುರಕ್ಷತೆಯತ್ತ ಸಾಗಲಿದೆ' ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ರೇಡಿಯೋದಲ್ಲಿ ನಡೆಸಿಕೊಡುವ 'ಮನ್‌ ಕೀ ಬಾತ್' ಕಾರ್ಯಕ್ರಮ ಈ ಬಾರಿ ವಿಶೇಷವಾಗಿತ್ತು. ಭಾರತಕ್ಕೆ ಮೂರು ದಿನಗಳ ಪ್ರವಾಸಕ್ಕಾಗಿ ಆಗಮಿಸಿದ್ದ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಮೋದಿ ಅವರ ಜೊತೆ 'ಮನ್‌ ಕೀ ಬಾತ್' ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಂಗಳವಾರ ರಾತ್ರಿ ಕಾರ್ಯಕ್ರಮ ಪ್ರಸಾರವಾಗಿದೆ.

Modi With Obama

ಇಂದಿನ 'ಮನ್‌ ಕೀ ಬಾತ್‌'ನ ವಿಶೇಷ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಬರಾಕ್‌ ಒಬಾಮಾ ಇದ್ದಾರೆ ಎಂದು ಮೋದಿ ಕಾರ್ಯಕ್ರಮವನ್ನು ಆರಂಭಿಸಿದರು. ಕಳೆದ ಕೆಲವು ತಿಂಗಳಿಂದ ನಿಮ್ಮೊಂದಿಗೆ ಮನ್‌ ಕೀ ಬಾತ್‌ ಮೂಲಕ ಮಾತನಾಡುತ್ತಿದ್ದೇನೆ. ಆದರೆ, ಇಂದು ದೇಶದ ಹಲವು ನಗರಗಳಿಂದ ಬಂದ ಪ್ರಶ್ನೆಗಳಿಗೆ ನಾವು ಉತ್ತರಿಸಲು ಪ್ರಯತ್ನಿಸುತ್ತೇವೆ ಎಂದು ಮೋದಿ ಕಾರ್ಯಕ್ರಮದಲ್ಲಿ ಹೇಳಿ, ಬಬಾಮಾ ಅವರಿಗೆ ಮಾತನಾಡಲು ಅವಕಾಶ ನೀಡಿದರು. [ಚಿತ್ರಗಳಲ್ಲಿ: ಒಬಾಮಾ ಭೇಟಿಯ ಅಪರೂಪದ ಕ್ಷಣಗಳು]

'ನಮಸ್ತೇ... ಪ್ರಧಾನಿ ಮೋದಿ ಅವರೇ, ನಿಮ್ಮ ಆತಿಥ್ಯಕ್ಕಾಗಿ ಧನ್ಯವಾದಗಳು. ಭಾರತದ ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಪಾಲ್ಗೊಂಡ ಮೊದಲ ಅಮೆರಿಕ ಅಧ್ಯಕ್ಷ ಎಂಬ ಗೌರವ ಸಂತಸ ತಂದಿದೆ. ನಮ್ಮ ಈ ಭೇಟಿಯಿಂದ ನಮ್ಮ ನಡುವಿನ ಬಾಂಧವ್ಯ ಮತ್ತಷ್ಟು ವೃದ್ಧಿಯಾಗಿದೆ' ಎಂದು ಬರಾಕ್ ಒಬಾಮಾ ಮಾತು ಆರಂಭಿಸಿದರು. ಮನ್‌ ಕೀ ಬಾತ್ ಕಾರ್ಯಕ್ರಮದ ಮುಖ್ಯಾಂಶಗಳು ಇಲ್ಲಿವೆ. [ಮೋದಿ-ಒಬಾಮಾ ಮನದ ಮಾತು ಕೇಳಿ]

* 'ಬರಾಕ್‌' ಎಂದರೇನು? ಎಂಬುದು ಬಹಳಷ್ಟು ಜನರ ಪ್ರಶ್ನೆ. ಆಫ್ರಿಕಾದ ಸವಾಹಿಲಿ ಭಾಷೆಯಲ್ಲಿ 'ಬರಾಕ್‌' ಅಂದರೆ ಆಶೀರ್ವಾದ ಪಡೆದವರು ಎಂದರ್ಥ. ಹೌದು. ಖಂಡಿತವಾಗಿ ಬರಾಕ್‌ ಅವರು ಅವರ ಕುಟುಂಬಕ್ಕೆ ಆಶೀರ್ವಾದದ ಫ‌ಲ.

* 'ಪ್ರಧಾನಿ ನರೇಂದ್ರ ಮೋದಿ ಅವರೇ ನಿಮ್ಮ ಆತಿಥ್ಯಕ್ಕಾಗಿ ಧನ್ಯವಾದಗಳು. ಭಾರತದ ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಪಾಲ್ಗೊಂಡ ಮೊದಲ ಅಮೆರಿಕ ಅಧ್ಯಕ್ಷ ಎಂಬ ಗೌರವ ಖುಷಿ ತಂದಿದೆ. ಭಾರತ-ಅಮೆರಿಕ ಸಹಜ ಮಿತ್ರರು. ನಮ್ಮ ಈ ಭೇಟಿಯಿಂದಾಗಿ ಬಾಂಧವ್ಯ ಮತ್ತಷ್ಟು ವೃದ್ಧಿಯಾಗಿದೆ'.

* 'ಅಮೆರಿಕದ ಜನರಿಗೆ ನರೇಂದ್ರ ಮೋದಿ ಅವರ ಬಗ್ಗೆ ಗೌರವ, ವ್ಯಾಪಕ ಕುತೂಹಲವಿದೆ. ಬಡತನ ನಿವಾರಣೆಯ ಪ್ರಯತ್ನಗಳು, ಮಹಿಳಾ ಸ್ವಾವಲಂಬನೆ ಕ್ರಮಗಳು, ವ್ಯಾಪಕ ಪ್ರಶಂಸೆಗೆ ಕಾರಣವಾಗಿವೆ. ಭಾರತ-ಅಮೆರಿಕ ಕೈ ಜೋಡಿಸಿದರೆ, ಜಗತ್ತು ಸಮೃದ್ಧಿ, ಶಾಂತಿ, ಸುರಕ್ಷತೆಯತ್ತ ಸಾಗುತ್ತದೆ.' ಎಂದು ಒಬಾಮ ಹೇಳಿದರು.

* ಮುಂಬೈ ನಿವಾಸಿ ರಾಜ್ ಅವರು 'ನೀವು ನಿಮ್ಮ ಮಕ್ಕಳನ್ನು ತುಂಬ ಪ್ರೀತಿಸುತ್ತೀರಿ. ನಿಮ್ಮ ಪ್ರವಾಸದ ಅನುಭವಗಳನ್ನು ಅವರೊಂದಿಗೆ ಹೇಗೆ ಹಂಚಿಕೊಳ್ಳುತ್ತೀರಿ? ಅವರಿಗಾಗಿ ಏನಾದರೂ ಖರೀದಿ ಮಾಡಿದ್ದೀರಾ?' ಎಂದು ಪ್ರಶ್ನಿಸಿದ್ದರು. 'ಮಕ್ಕಳು ಭಾರತಕ್ಕೆ ಬರಬೇಕೆಂಬ ಇಚ್ಚೆ ಹೊಂದಿದ್ದರು. ಪರೀಕ್ಷೆಗಳು ನಡೆಯುತ್ತಿದ್ದರಿಂದ ಬರಲಾಗಿಲ್ಲ. ಮುಂದಿನ ಬಾರಿ ಬಹುಶಃ ನಾನು ಅಧ್ಯಕ್ಷನಾಗಿಲ್ಲದಿದ್ದರೂ, ಭಾರತಕ್ಕೆ ಮತ್ತೆ ಭೇಟಿ ನೀಡುತ್ತೇನೆ, ಮಕ್ಕಳಿಗಾಗಿ ಕೆಲವು ಉಡುಗೊರೆಗಳನ್ನು ಖರೀದಿ ಮಾಡಿದ್ದೇವೆ' ಎಂದು ಬಬಾಮಾ ಉತ್ತರಿಸಿದರು.

* ಅಹಮದಾಬಾದ್‌ನ ಡಾ.ಕಮಲೇಶ್‌ ಉಪಾಧ್ಯಾಯ ಅವರು 'ಮಿಶೆಲ್‌ ಒಬಾಮಾ ಅವರು ಆಧುನಿಕ ಆರೋಗ್ಯ ಸಮಸ್ಯೆ ಆಂದೋಲನಗಳಲ್ಲಿ ವ್ಯಾಪಕವಾಗಿ ಭಾಗಿಯಾಗಿದ್ದಾರೆ. ಈ ಸಮಸ್ಯೆ ಭಾರತದಲ್ಲೂ ಇದೆ. ಮುಂದಿನ ದಿನಗಳಲ್ಲಿ ಭಾರತಕ್ಕೆ ಬಂದು ಇಲ್ಲೂ ಆರೋಗ್ಯ ಜಾಗೃತಿಯಲ್ಲಿ ಭಾಗಿಯಾಗುತ್ತೀರಾ..?' ಎಂದು ಪ್ರಶ್ನಿಸಿದ್ದರು.

'ಸ್ಥೂಲಕಾಯ, ಸಕ್ಕರೆ ಕಾಯಿಲೆ ಇತ್ಯಾದಿಗಳಿಗಾಗಿ ನಾವು ಭಾರತ ಸರ್ಕಾರ, ಎನ್‌ಜಿಓಗಳು, ಸಂಘ ಸಂಸ್ಥೆಗಳೊಂದಿಗೆ ಕೈ ಜೋಡಿಸತ್ತೇವೆ. ಭಾರತದೊಂದಿಗೆ ಸೇರಿ ನಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಸಾಧ್ಯವಿದೆ. ಆರೋಗ್ಯ ಜಾಗೃತಿಗೆ ಯತ್ನಿಸಬೇಕು. ಸೇವೆಗೆ ನಾನು ಎದುರು ನೋಡುತ್ತೇನೆ' ಎಂದು ಬಬಾಮಾ ಉತ್ತರ ನೀಡಿದರು.

* ನರೇಂದ್ರ ಮೋದಿ ಹೇಳಿದ್ದಿಷ್ಟು : 'ಹಿಂದೆ ನಾನು ವೈಟ್‌ ಹೌಸ್‌ ಹೊರಗೆ ಫೋಟೋ ತೆಗೆಸಿಕೊಂಡಿದ್ದೆ. ಆಗ ನಾನು ಒಂದು ದಿನ ಅದರ ಒಳಗೆ ಹೋಗುವ ಅವಕಾಶ ಸಿಗಬಹುದು ಎಂದು ಅಂದುಕೊಂಡಿರಲಿಲ್ಲ. ಸೆಪ್ಟೆಂಬರ್‌ನಲ್ಲಿ ವೈಟ್‌ಹೌಸ್‌ಗೆ ಹೋದಾಗ ಬರಾಕ್‌ 1984ರಲ್ಲಿ ಭಾರೀ ಹೆಸರು ಮಾಡಿದ್ದ ಸ್ವಾಮಿ ವಿವೇಕಾನಂದರ ಕುರಿತ ಪುಸ್ತಕ ಕೊಟ್ಟಿದ್ದರು. ನಾನು ಗೌರವಿಸುವ ವ್ಯಕ್ತಿಯಿಂದ, ನನಗೆ ಸ್ಫೂರ್ತಿ ನೀಡಿದವರ ಪುಸ್ತಕವನ್ನು ನಾನು ಪಡೆದಿದ್ದೆ'.

* ಹಿಮಾನಿ ಅವರ ಪ್ರಶ್ನೆ : ಈ ಸ್ಥಾನಕ್ಕೆ ತಲುಪುತ್ತೀರೆಂದು ನೀವಿಬ್ಬರೂ ಎಂದಾದರೂ ಅಂದುಕೊಂಡಿದ್ದೀರಾ?. 'ನಾನೆಂದು ಅಂದುಕೊಂಡಿರಲಿಲ್ಲ. ಇದಕ್ಕೆಲ್ಲ ಆಶೀರ್ವಾದಗಳು ಬೇಕು. ನಮ್ಮ ದೇಶದ ವೈವಿಧ್ಯತೆ, ಎಲ್ಲರಿಗೂ ಸಿಗುವ ಸಮಾನ ಅವಕಾಶಗಳು ಇದಕ್ಕೆ ಕಾರಣವಾಗಿವೆ. ನಿಮ್ಮಲ್ಲೂ ಪ್ರಧಾನಿ ಬಾಲ್ಯದಲ್ಲಿ ಕಷ್ಟದಲ್ಲಿದ್ದು, ಚಹಾ ಮಾರುತ್ತಿದ್ದರು. ಅವರಿಗೆ ಸಿಕ್ಕ ಅವಕಾಶ, ಸಾಧನೆಯಿಂದ ಪ್ರಧಾನಿಯಾಗಿದ್ದಾರೆ.

* ನರೇಂದ್ರ ಮೋದಿ : 'ಒಂದು ದಿನ ಈ ಸ್ಥಾನ ಅಲಂಕರಿಸುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಆದರೆ ನಮ್ಮ ಕನಸು ನಮ್ಮನ್ನು ಕೊಂಡೊಯ್ಯುತ್ತದೆ. ಜೀವನದಲ್ಲಿ ಸ್ಫೂರ್ತಿ ಮೇಲಕ್ಕೇರಿಸುತ್ತವೆ. ದೇಶ ಸೇವೆ, ಭಾರತೀಯರ ಸೇವೆ ನನ್ನ ಗುರಿಯಾಗಿದೆ'.

* 'ವಿಶ್ವದ ಅಭಿವೃದ್ಧಿಯಲ್ಲಿ ಯುವ ಜನತೆಯ ಪಾತ್ರ ದೊಡ್ಡದು ಎಂದು ಹೇಳಿದ ಮೋದಿ 'ಯಸ್ ವಿ ಕ್ಯಾನ್' ಎಂದು ಹ್ಯಾಶ್ ಟ್ಯಾಗ್ ಬಳಸಿ ನಿಮ್ಮ ಅನುಭವನ್ನು ಹಂಚಿಕೊಳ್ಳಿ. ಅತ್ಯುತ್ತಮವಾದ 100 ಟ್ವೀಟ್‍ಗಳನ್ನು ಇ-ಪುಸ್ತಕದ ರೂಪದಲ್ಲಿ ತರುತ್ತೇನೆ' ಎಂದು ಹೇಳುವ ಮೂಲಕ ಸುಮಾರು 30 ನಿಮಿಷಗಳ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The joint All India Radio address by Prime Minister Narendra Modi and US President Barack Obama on MANN Ki BAAT. Transcripts in Kannada Language.
Please Wait while comments are loading...