Mann Ki Baat: ಇಂದು ಮನ್ ಕೀ ಬಾತ್ 100ನೇ ಸಂಚಿಕೆ ಪ್ರಸಾರ: ನಮಾಮಿ ಗಂಗೆ ಬಗ್ಗೆ ಮೋದಿ ಮಾತನಾಡಿದ ಸ್ಮರಣೀಯ ಕ್ಷಣ
ಮೋದಿ... ಪ್ರಧಾನಿ ನರೇಂದ್ರ ಮೋದಿ ಅಂದ್ರೆ ಜನ ಸಾಮಾನ್ಯರಲ್ಲಿ ಅದೇನೋ ವಿಶ್ವಾಸ, ಅವರು ಏನಾದರು ಮಾಡೇ ಮಾಡುತ್ತಾರೆನ್ನುವ ನಂಬಿಕೆ. ಅವರಲ್ಲಿರುವ ಛಲ, ಆತ್ಮಸ್ಥೈರ್ಯ, ಕಿಚ್ಚು, ಶಕ್ತಿ ದೇಶದ ಜನತೆಯ ಕನಸು ನನಸಾಗುವಂತೆ ಮಾಡಿದೆ. ಅವರು ದೇಶದ ಅಭಿವೃದ್ಧಿಗೆ ಮಾಡಿದ ಕೆಲಸಗಳು ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿಬಿಟ್ಟಿವೆ. ಹೀಗಾಗಿ ಅವರು ಹೋದಲ್ಲಿ ಬಂದಲೆಲ್ಲ ಜನ ಕಿಕ್ಕಿರಿದು ಸೇರುತ್ತಾರೆ. ಅವನ್ನು ನೋಡಲು ಮಾತನಾಡಲು ಬಯಸುತ್ತಾರೆ. ಹೀಗೆ ಪ್ರತಿಯೊಂದು ಹೆಜ್ಜೆಯಲ್ಲೂ ಹಂತ ಹಂತವಾಗಿ ಸಮಾವೇಶ, ಕಾರ್ಯಕ್ರಮ, ಹಲವಾರು ಯೋಜನೆಗಳ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ ಮೋದಿ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಜನರ ಮನಸ್ಸಿಗೆ ಮುಟ್ಟುವಂತೆ ಮಾಡಿದ್ದ ಚಾಯ್ ಪೇ ಚರ್ಚಾ, ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಗಳಲ್ಲಿ 'ಮನ್ ಕೀ ಬಾತ್' ರೇಡಿಯೋ ಪ್ರಸಾರ ಕಾರ್ಯಕ್ರಮವೂ ಒಂದು. ಈ ಕಾರ್ಯಕ್ರಮ ತುಂಬಾನೇ ವಿಶೇಷವಾದದ್ದು. ಈ ಬಾರಿ 'ಮನ್ ಕಿ ಬಾತ್' 100ನೇ ಸಂಚಿಕೆಯನ್ನು ಪೂರೈಸುತ್ತಿದೆ. ಹೀಗಾಗಿ ಏಪ್ರಿಲ್ 30ರಂದು ಪ್ರಧಾನಿ ನರೇಂದ್ರ ಮೋದಿಯವರ 'ಮನ್ ಕಿ ಬಾತ್' ರೇಡಿಯೋ ಪ್ರಸಾರದ 100 ನೇ ಸಂಚಿಕೆಯನ್ನು ಅಭೂತಪೂರ್ವ ಜನಸಂಪರ್ಕ ಕಾರ್ಯಕ್ರಮವನ್ನಾಗಿ ಮಾಡಲು ಬಿಜೆಪಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಹಾಗಾದರೆ ಈ ಕಾರ್ಯಕ್ರಮ ಯಾವಾಗ ಆರಂಭವಾಯಿತು? ಮೊದಲ ಬಾರಿಗೆ ಪ್ರಧಾನಿ ಮೋದಿ ಅವರು ಯಾವ ವಿಷಯದ ಬಗ್ಗೆ ಮಾತನಾಡಿದ್ದರು? 100 ನೇ ಸಂಚಿಕೆಯನ್ನು ಯಾವ ರೀತಿ ದೇಶಾದ್ಯಂತ ಪ್ರಸಾರ ಮಾಡಲಾಗುತ್ತದೆ? ಇಂತೆಲ್ಲಾ ವಿಚಾರಗಳ ಬಗ್ಗೆ ತಿಳಿಯೋಣ.
ಮನ್ ಕೀ ಬಾತ್ ಕಾರ್ಯಕ್ರಮ ಆರಂಭ:-
ಮನ್ ಕೀ ಬಾತ್ ಕಾರ್ಯಕ್ರಮದ ಮೊದಲ ಸಂಚಿಕೆ 2014 ರ ಅಕ್ಟೋಬರ್ 3 ರಂದು ಪ್ರಸಾರವಾಯಿತು. 9 ವರ್ಷಗಳಲ್ಲಿ, ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಹಲವಾರು ಜನರ, ಎಲೆಮರೆಯ ಕಾಯಿಯಂತಿದ್ದ ಸಾಧಕರ ಬಗ್ಗೆ ಪ್ರಸ್ತಾಪಿಸಿದ್ದಾರೆ. ನಂತರ ಆ ಸಾಧಕರು ಪ್ರಸಿದ್ಧರಾಗಿದ್ದಾರೆ ಮತ್ತು ದೇಶದ ಜನರ ಗಮನ ಸೆಳೆದಿದ್ದಾರೆ.
ಪ್ರಸಾರ ಭಾರತಿಯು 11 ವಿದೇಶಿ ಸೇರಿದಂತೆ 52 ಭಾಷೆಗಳು ಮತ್ತು ಉಪಭಾಷೆಗಳಲ್ಲಿ ಮನ್ ಕೀ ಬಾತ್‌ನ ಅನುವಾದ ಮತ್ತು ಪ್ರಸಾರವನ್ನು ಮಾಡುತ್ತದೆ. ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮವಾಗಿದ್ದು, ಇದನ್ನು ಟಿವಿ ಚಾನೆಲ್‌ಗಳು ಏಕಕಾಲದಲ್ಲಿ ಪ್ರಸಾರ ಮಾಡುತ್ತವೆ. ದೂರದರ್ಶನ ನೆಟ್‌ವರ್ಕ್‌ನ 34 ಚಾನೆಲ್‌ಗಳು ಮತ್ತು 100 ಕ್ಕೂ ಹೆಚ್ಚು ಖಾಸಗಿ ಉಪಗ್ರಹ ಟಿವಿ ಚಾನೆಗಳು ಈ ವಿನೂತನ ಕಾರ್ಯಕ್ರಮವನ್ನು ದೇಶದ ಮೂಲೆ ಮೂಲೆಗೂ ತಲುಪಿಸುತ್ತವೆ.
ಮೋದಿ ಪ್ರಸ್ತಾಪಿಸಿದ ವಿಷಯಗಳು
ಮನ್ ಕೀ ಬಾತ್‌ನ 99ನೇ ಸಂಚಿಕೆಯಲ್ಲಿ ಮೋದಿ ಅವರು, ದೇಶದ ಅತ್ಯಂತ ಕಿರಿಯ ಅಬಾಬತ್ ಕೌರ್ ಬಗ್ಗೆ ಪ್ರಸ್ತಾಪಿಸಿದ್ದರು. ಹರಿಯಾಣದ ಸುನಿಲ್ ಜಗ್ಲಾನ್ ಬಗ್ಗೆ ನಾಲ್ಕು ಬಾರಿ ಮೋದಿ ಪ್ರಸ್ತಾಪ ಮಾಡಿದ್ದಾರೆ. ಇನ್ನು ಜಿಂದ್‌ನ ನಿವಾಸಿಯಾದ ಜಗ್ಲಾನ್ ಅವರು 'ಸೆಲ್ಫಿ ವಿದ್ ಡಾಟರ್' ಅಭಿಯಾನ ಆರಂಭಿಸಿದ್ದರು. ಈ ಅಭಿಯಾನವು ವಿಶ್ವದ ಸುಮಾರು 80 ದೇಶಗಳಲ್ನು ತಲುಪಿದೆ.

ಗಂಗಾ ನದಿಯ ಮಾಲಿನ್ಯವನ್ನು ಕೊನೆಗೊಳಿಸಲು ಮತ್ತು ನದಿಯನ್ನು ಪುನರುಜ್ಜೀವನಗೊಳಿಸಲು 'ನಮಾಮಿ ಗಂಗೆ' ಎಂಬ ಹೆಸರಿನ ಸಮಗ್ರ ಗಂಗಾ ಪುನರುಜ್ಜೀವನ ಮಿಷನ್ ಅನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದೆ. ಈ ಬಗ್ಗೆ ಕೂಡ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮೋದಿ ಮಾತನಾಡಿದ್ದರು.
ಜಮ್ಮುವಿನ ಪಲ್ಲಿಯಲ್ಲಿ ವಾಸಿಸುತ್ತಿರುವ ವಿನೋದ್ ಕುಮಾರ್ ಅವರ ಬಗ್ಗೆ ಕೂಡ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದಾರೆ. ವಿನೋದ್ ಕುಮಾರ್ 27 ವರ್ಷಗಳಿಂದ ಜೇನು ಸಾಕಾಣಿಕೆ ಮಾಡುತ್ತಿದ್ದಾರೆ. ಜೊತೆಗೆ ಇವರು ವರ್ಷಕ್ಕೆ 15- 20 ಲಕ್ಷ ರೂಪಾಯಿ ಆದಾಯ ಪಡೆಯುತ್ತಾರೆ.
ಬೆಂಗಳೂರಿನಲ್ಲಿ 100 ನೇ ಸಂಚಿಕೆಯ ಪ್ರಸಾರ ಕಾರ್ಯಕ್ರಮದಲ್ಲಿ ಮೋದಿ ಭಾಗಿ
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರದ ಪ್ರವಾಸಕ್ಕಾಗಿ ಶನಿವಾರ ಬೆಂಗಳೂರು ರಾಜಭವನದಲ್ಲಿ ವಾಸ್ತವ್ಯ ಹೂಡಿರುವ ಮೋದಿ, ಭಾನುವಾರ 11ಗಂಟೆಗೆ ರಾಜಭವನದಿಂದಲೇ 'ಮನ್ ಕಿ ಬಾತ್' ರೇಡಿಯೋ 100 ನೇ ಸಂಚಿಕೆಯ ಪ್ರಸಾರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಅವರು ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ.
ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ 'ಮನ್ ಕಿ ಬಾತ್' 100ನೇ ಸಂಚಿಕೆಯನ್ನು ಆಚರಿಸಲು ಪ್ರಸಾರ ಭಾರತಿ ಬುಧವಾರ ಮೇ 3 ರಂದು ಸಮಾವೇಶವನ್ನು ಆಯೋಸಿದೆ. ಈ ಸಮಾವೇಶವನ್ನು ಉಪಾಧ್ಯಕ್ಷ ಜಗದೀಪ್ ಧನಖರ್ ಉದ್ಘಾಟಿಸಲಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರು ಸಮ್ಮೇಳನದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದು, ಸಂವಹನ ಸಚಿವ ಅಶ್ವಿನಿ ವೈಷ್ಣವ್, ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಮತ್ತು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರ ಸಮ್ಮುಖದಲ್ಲಿ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಸಹ ಅನಾವರಣಗೊಳಿಸಲಾಗುವುದು. ಮನ್ ಕಿ ಬಾತ್ ಸಮಯದಲ್ಲಿ ಪ್ರಧಾನಿ ಅವರು ಪ್ರಸ್ತಾಪಿಸಿದ ನಾಲ್ಕು ಪ್ರಮುಖ ವಿಷಯಗಳ ಮೂಲಕ ಉದ್ಘಾಟನಾ ಅಧಿವೇಶನವನ್ನು ಆರಂಭಿಸಲಾಗುತ್ತದೆ.
ಅಧಿವೇಶನಲ್ಲಿ ಚರ್ಚೆಯ ನಾಲ್ಕು ವಿಷಯಗಳು:
ನಾರಿ ಶಕ್ತಿ (ಮಹಿಳಾ ಶಕ್ತಿ)
ವಿರಾಸತ್ ಕಾ ಉತ್ಹಾನ್ (ಪರಂಪರೆಯಲ್ಲಿ ಹೆಮ್ಮೆ ಪಡುವುದು)
ಜನ್ ಸಂವಾದ್ ಸೆ ಆತ್ಮನಿರ್ಭರ್ತಾ (ಜನರೊಂದಿಗಿನ ಸಂಭಾಷಣೆಯ ಮೂಲಕ ಸ್ವಾವಲಂಬನೆ)
ಅಹ್ವಾಹನ್ ಸೆ ಆಂದೋಲನ್ (ಕರೆಯಿಂದ ಕ್ರಾಂತಿಯವರೆಗೆ)
ಈ ಸಮಾವೇಶದಲ್ಲಿ ನಟರಾದ ಅಮೀರ್ ಖಾನ್ ಮತ್ತು ರವೀನಾ ಟಂಡನ್, ಪುದುಚೇರಿ ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ, ಸಂಗೀತ ಸಂಯೋಜಕ ರಿಕಿ ಕೇಜ್, ಕ್ರೀಡಾಪಟುಗಳಾದ ನಿಖತ್ ಜರೀನ್ ಮತ್ತು ದೀಪಾ ಮಲಿಕ್, ಕಥೆಗಾರ ನೀಲೇಶ್ ಮಿಶ್ರಾ, ಉದ್ಯಮಿಗಳಾದ ಸಂಜೀವ್ ಭಿಚಂದಾನಿ ಮತ್ತು ಟಿ ವಿ ಮೋಹನ್‌ದಾಸ್ ಪೈ ಮತ್ತು ವಿವಿಧ ಸಂಚಿಕೆಗಳಲ್ಲಿ ಉಲ್ಲೇಖಿಸಿರುವ ವ್ಯಕ್ತಿಗಳು ಮನ್ ಕೀ ಬಾತ್ ಅಧಿವೇಶನಗಳಲ್ಲಿ ಭಾಗವಹಿಸಲಿದ್ದಾರೆ.











Click it and Unblock the Notifications