Delhi Election: ಉಪಮುಖ್ಯಮಂತ್ರಿ ಹೆಸರು ಘೋಷಿಸಿದ ಅರವಿಂದ್ ಕೇಜ್ರಿವಾಲ್!
ದೆಹಲಿ ವಿಧಾನಸಭಾ ಚುನಾವಣೆ ಕಣ ದಿನೇ ದಿನೇ ರಂಗೇರುತ್ತಿದೆ. ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು ಭರ್ಜರಿ ಪ್ರಚಾರ ನಡೆಸುತ್ತಿವೆ. ಭಾನುವಾರ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಇದೀಗ ಉಪ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎನ್ನುವುದನ್ನು ಬಹಿರಂಗಪಡಿಸಿದ್ದಾರೆ.
ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಬಹುಮತ ಪಡೆದು ಸರ್ಕಾರ ರಚನೆ ಮಾಡಿದರೆ ಮನೀಶ್ ಸಿಸೋಡಿಯಾ ಮತ್ತೊಮ್ಮೆ ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ.

ಅರವಿಂದ್ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಜೈಲಿನಿಂದ ಹೊರ ಬಂದ ಬಳಿಕ ಅವರು ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರಿಂದ ಅತಿಶಿ ಅವರು ದೆಹಲಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಜನ ಮತ್ತೊಮ್ಮೆ ಆಶೀರ್ವಾದ ಮಾಡಿದರೆ ಮಾತ್ರ ಮತ್ತೆ ಸಿಎಂ ಆಗುತ್ತೇನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಎಎಪಿ ಮತ್ತೊಮ್ಮೆ ಅಧಿಕಾರಕ್ಕೆ!
ಜಂಗ್‌ಪುರದಲ್ಲಿ ನಡೆದ ಸಾರ್ವಜನಿಕ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, "ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಮತ್ತೊಮ್ಮೆ ಸರ್ಕಾರ ರಚನೆ ಮಾಡಲಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ನಮ್ಮ ಮುಂದಿನ ಸರ್ಕಾರದಲ್ಲೂ ಮನೀಷ್ ಸಿಸೋಡಿಯಾ ಉಪಮುಖ್ಯಮಂತ್ರಿಯಾಗಲಿದ್ದಾರೆ" ಎಂದು ಘೋಷಿಸಿದರು.
ಬಳಿಕ ಮಾತನಾಡಿದ ಮನೀಷ್ ಸಿಸೋಡಿಯಾ, "ಜನ ಮತ್ತೊಮ್ಮೆ ನನ್ನ ಗೆಲ್ಲಿಸಿದರೆ, ಅರವಿಂದ್ ಕೇಜ್ರಿವಾಲ್ ಅವರ ಜೊತೆ ಕ್ಯಾಬಿನೆಟ್ ಸದಸ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಕುಳಿತುಕೊಳ್ಳುತ್ತೇನೆ. ನಾನು ಅಷ್ಟೇ ಅಲ್ಲ, ಜಂಗ್‌ಪುರದ ಮತದಾರರು ಉಪಮುಖ್ಯಮಂತ್ರಿಯಾಗುತ್ತಾರೆ" ಎಂದು ಹೇಳಿದರು.
ಜಂಗ್‌ಪುರದಿಂದ ಯಾರೊಬ್ಬರಾದರೂ ಸರ್ಕಾರ ಕಚೇರಿಯಲ್ಲಿ ಕೆಲಸ ಆಗಲಿಲ್ಲ ಎಂದು ಕರೆ ಮಾಡಿದರೆ ಯಾವೊಬ್ಬ ಅಧಿಕಾರಿ ಕೂಡ ಕರೆಯನ್ನು ಸ್ವೀಕರಿಸದೇ ನಿರ್ಲಕ್ಷ್ಯ ಮಾಡುವ ಧೈರ್ಯ ಮಾಡುವುದಿಲ್ಲ, ಉಪಮುಖ್ಯಮಂತ್ರಿ ಕ್ಷೇತ್ರದ ಮತದಾರರ ಬಗ್ಗೆ ಅಷ್ಟು ಭಯ ಇರುತ್ತದೆ ಎಂದು ಹೇಳಿದ್ದಾರೆ.
ಡಿಸೆಂಬರ್ 5ರಂದು ದೆಹಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಫೆಬ್ರವರಿ 8ರಂದು ಫಲಿತಾಂಶ ಹೊರಬೀಳಲಿದೆ. ಎರಡು ಬಾರಿ ಸತತವಾಗಿ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದಿರುವ ಆಮ್ ಆದ್ಮಿ ಪಕ್ಷ ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದೆ. ಇನ್ನು 27 ವರ್ಷಗಳ ಬಳಿಕ ಬಿಜೆಪಿ ದೆಹಲಿ ಗದ್ದುಗೆ ಏರುವ ಕನಸು ಕಾಣುತ್ತಿದೆ.












Click it and Unblock the Notifications