Manish Sisodia: ಮನೀಶ್ ಸಿಸೋಡಿಯಾ ಬಂಧನ ಖಂಡಿಸಿ ಎಎಪಿಯಿಂದ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ
ರಾಷ್ಟ್ರ ರಾಜಧಾನಿಯ ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿರುವ ಭಾರತೀಯ ಜನತಾ ಪಕ್ಷದ ಪ್ರಧಾನ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಲು ಎಎಪಿ ಯೋಜಿಸಿದೆ.
ನವದೆಹಲಿ, ಫೆಬ್ರವರಿ. 27: ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನ ಖಂಡಿಸಿ ಆಮ್ ಆದ್ಮಿ ಪಕ್ಷ (ಎಎಪಿ) ಸೋಮವಾರ ರಾಷ್ಟ್ರವ್ಯಾಪಿ ಪ್ರತಿಭಟನೆ ಘೋಷಿಸಿದೆ. ದೆಹಲಿಯ ಕೇಂದ್ರೀಯ ತನಿಖಾ ದಳ ಕಚೇರಿ ಮತ್ತು ಬಿಜೆಪಿ ಪ್ರಧಾನ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುವ ನಿರೀಕ್ಷೆಯಿದೆ.
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಬಂಧನದಲ್ಲಿರುವ ಸಿಬಿಐ ಪ್ರಧಾನ ಕಚೇರಿಯ ಹೊರಗೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆಯಿದೆ. ಸೋಮವಾರ (ಫೆಬ್ರವರಿ. 27) ಮಧ್ಯಾಹ್ನ 12 ಗಂಟೆಗೆ ದೆಹಲಿಯಲ್ಲಿರುವ ಭಾರತೀಯ ಜನತಾ ಪಕ್ಷದ ಪ್ರಧಾನ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಲು ಪಕ್ಷವು ಯೋಜಿಸಿದೆ.

ದೆಹಲಿ ಮಾತ್ರವಲ್ಲದೆ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಾಠಕ್ ಹೇಳಿದ್ದಾರೆ. ಈ ಹಿನ್ನೆಲೆ ಮನೀಶ್ ಸಿಸೋಡಿಯಾ ಅವರು ಬಂಧನದಲ್ಲಿರುವ ಸಿಬಿಐ ಪ್ರಧಾನ ಕಚೇರಿ ಸೇರಿದಂತೆ ರಾಷ್ಟ್ರ ರಾಜಧಾನಿಯ ಹಲವು ಭಾಗಗಳಲ್ಲಿ ದೆಹಲಿ ಪೊಲೀಸರು ಭಾರೀ ಭದ್ರತೆ ಮಾಡಿದ್ದು, ಪಡೆಗಳನ್ನು ನಿಯೋಜಿಸಿದ್ದಾರೆ.
"ದೇಶದ ಲಕ್ಷಾಂತರ ಮಕ್ಕಳ ಭವಿಷ್ಯವನ್ನು ರೂಪಿಸಿದ ಮಹಾನ್ ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಅವರನ್ನು ನಕಲಿ ಪ್ರಕರಣದಲ್ಲಿ ಬಂಧಿಸಲಾಗಿದೆ. ಇದರ ವಿರುದ್ಧ ಆಮ್ ಆದ್ಮಿ ಪಕ್ಷ ನಾಳೆ ದೇಶಾದ್ಯಂತ ಪ್ರತಿಭಟನೆ ನಡೆಸಲಿದೆ" ಎಂದು ಸಂದೀಪ್ ಪಾಠಕ್ ಟ್ವೀಟ್ ಮಾಡಿದ್ದಾರೆ. ಇನ್ನು, ಸಿಸೋಡಿಯಾ ಅವರ ಬಂಧನ ಖಂಡಿಸಿ ಆಪ್ ಇಂದು ಕರಾಳ ದಿನ ಆಚರಿಸಲಿದೆ ಎಂದು ದೆಹಲಿ ಸಚಿವ ಗೋಪಾಲ್ ರೈ ಹೇಳಿದ್ದಾರೆ.

ಎಎಪಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ರಾಷ್ಟ್ರ ರಾಜಧಾನಿಯ ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿರುವ ಭಾರತೀಯ ಜನತಾ ಪಕ್ಷದ ಪ್ರಧಾನ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಲು ಯೋಜಿಸಿದೆ.












Click it and Unblock the Notifications