ಮಣಿಪುರದ ಜನಾಂಗೀಯ ಸಂಘರ್ಷದ ಮೂಲದಲ್ಲಿ ಸಂಕೀರ್ಣ ಬೇರುಗಳು: ಇದರಲ್ಲೂ ರಾಜಕೀಯ ಲಾಭ ಹುಡುಕುತ್ತಿರುವ ಸರ್ಕಾರಗಳು- ಏನಿದು ತಿಳಿಯಿರಿ
ಇಂಫಾಲ್, ಮೇ 23: ಮಣಿಪುರದಲ್ಲಿ ಹಿಂಸಾಚಾರ ಮುಂದುವರಿದಿದೆ. ಈಗಾಗಲೇ ಎಪ್ಪತ್ತಕ್ಕೂ ಹೆಚ್ಚು ಜನರು ಹಿಂಸಾಚಾರದಲ್ಲಿ ಸಾವಿಗೀಡಾಗಿದ್ದಾರೆ. ಇಂಫಾಲ ಸುತ್ತಮುತ್ತ ನೆಲೆಗೊಂಡಿರುವ ಮೈಟೈಸ್ ಸಮುದಾಯ ಹಾಗೂ ಮಣಿಪುರ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿರುವ ಕುಕಿ ಹಾಗೂ ನಾಗಾ ಸಮುದಾಯಗಳ ನಡುವೆ ನಡೆಯುತ್ತಿರುವ ಸಂಘರ್ಷದಿಂದ ಈಶಾನ್ಯ ರಾಜ್ಯ ನಲುಗುತ್ತಿದೆ. ಈ ಸಂಘರ್ಷಕ್ಕೆ ಮೂಲ ಕಾರಣವೇನು ಎಂಬುದನ್ನು ತಿಳಿಯಲು ಈ ವರದಿ ಓದಿ.
ನಾಗಾಗಳು, ಕುಕಿಗಳು ಮತ್ತು ಮೈಟೈಸ್ ಸೇರಿದಂತೆ ರಾಜ್ಯದ ವಿವಿಧ ಜನಾಂಗೀಯ ಗುಂಪುಗಳು ಈ ಸಂಘರ್ಷದಲ್ಲಿ ತೊಡಗಿಕೊಂಡಿವೆ. ಇದು ಕೇವಲ ಮೀಸಲಾತಿ ಸಮಸ್ಯೆಯಿಂದ ನಡೆದಿರುವ ಸಂಘರ್ಷವಲ್ಲ. ಇದರ ಆಳದಲ್ಲಿ ಅಸ್ಮಿತೆಗಾಗಿ ನಡೆಸುತ್ತಿರುವ ಸುದೀರ್ಘ ಹೋರಾಟವೂ ಇದೆ.

ಮಣಿಪುರ ಸೇರಿದಂತೆ ಸುತ್ತಮುತ್ತಲಿನ ನಾಗಾ ಜನಾಂಗದವರು ಪ್ರತ್ಯೇಕ ರಾಜ್ಯಕ್ಕಾಗಿ ಸುದೀರ್ಘ ಹೋರಾಟವನ್ನೇ ನಡೆಸುತ್ತಿದ್ದಾರೆ. ಇದು ಹಲವು ಬಾರಿ ಹಿಂಸಾತ್ಮಕ ಸ್ವರೂಪ ಪಡೆದುಕೊಂಡು ಹಲವಾರು ಸಮಸ್ಯೆಗಳನ್ನು ಹುಟ್ಟಿಹಾಕಿದೆ. ಮಣಿಪುರದ ಅತಿ ದೊಡ್ಡ ಜನಾಂಗವಾದ ಮೈಟೈಸ್ ಸಮುದಾಯವು ಪ್ರತ್ಯೇಕ ನಾಗಾಲ್ಯಾಂಡ್ ರಾಜ್ಯದ ಬೇಡಿಕೆಯನ್ನು ವಿರೋಧಿಸುತ್ತಿದೆ.
ರಾಜ್ಯದ ಮತ್ತೊಂದು ಪ್ರಮುಖ ಜನಾಂಗವಾದ ಕುಕಿ ಸಮುದಾಯ ಸಹ ಸಂಘರ್ಷದಲ್ಲಿ ತೊಡಗಿಸಿಕೊಂಡಿದೆ. ಕೆಲವು ಕುಕಿ ಗುಂಪುಗಳು ಪ್ರತ್ಯೇಕ ನಾಗಾಲ್ಯಾಂಡ್ ರಾಜ್ಯದ ಬೇಡಿಕೆಯನ್ನು ಬೆಂಬಲಿಸುತ್ತಿವೆ. ಇದು ಮೈಟೈಸ್ ಸಮುದಾಯದ ಕೋಪಕ್ಕೆ ಕಾರಣವಾಗಿದೆ.
ಇಲ್ಲಿ ಕೇವಲ ಜನಾಂಗೀಯ ಸಂಘರ್ಷಗಳಷ್ಟೇ ಅಲ್ಲ. ಭಾಷಾ ವ್ಯತ್ಯಾಸಗಳು, ಸಂಪನ್ಮೂಲ ಸ್ಪರ್ಧೆ ಮತ್ತು ಐತಿಹಾಸಿಕ ಕುಂದುಕೊರತೆಗಳು ಸೇರಿದಂತೆ ವಿವಿಧ ಅಂಶಗಳು ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತಿವೆ. ಕುಕಿ ಹಾಗೂ ನಾಗಾಗಳನ್ನು ಅಲ್ಲಿನ ಬಿಜೆಪಿ ಸರ್ಕಾರ ನಿರ್ಲಕ್ಷಿಸುತ್ತಿದೆ ಎಂಬ ಆರೋಪವು ಕೇಳಿಬಂದಿದೆ. ಇದು ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಕುಕಿ ನಾಯಕರು ಆರೋಪಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ, ಮಣಿಪುರದಲ್ಲಿ ಹಿಂಸಾಚಾರಗಳು ವ್ಯಾಪಕವಾಗುತ್ತಿವೆ. ವಿವಿಧ ಜನಾಂಗೀಯ ಸಶಸ್ತ್ರ ಗುಂಪುಗಳು ಪರಸ್ಪರ ಸಂಘರ್ಷಕ್ಕಿಳಿದಿವೆ. ಇಲ್ಲಿನ ಭದ್ರತಾ ಪಡೆಗಳೊಂದಿಗೆ ಘರ್ಷಣೆಗೆ ಮುಂದಾಗುತ್ತಿವೆ. 2021 ರ ಆರಂಭದಲ್ಲಿ ಪ್ರಾರಂಭವಾದ ಹಿಂಸಾಚಾರವು ರಾಜ್ಯದಲ್ಲಿ ಏಳು ಹೊಸ ಜಿಲ್ಲೆಗಳನ್ನು ರಚಿಸುವ ಸರ್ಕಾರದ ನಿರ್ಧಾರದಿಂದ ಹುಟ್ಟಿಕೊಂಡಿತು. ಇದು ಕೆಲವು ಜನಾಂಗೀಯ ಗುಂಪುಗಳ ಶಕ್ತಿಯನ್ನು ವಿಭಜಿಸುವ ಮತ್ತು ದುರ್ಬಲಗೊಳಿಸುವ ಪ್ರಯತ್ನವಾಗಿದೆ ಎಂದೂ ಆರೋಪಿಸಲಾಗಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಈ ಕ್ರಮವು ವ್ಯಾಪಕ ಪ್ರತಿಭಟನೆಗಳು ಮತ್ತು ಮುಷ್ಕರಗಳನ್ನು ಎದುರಿಸಿತು. ಇದು ಅಂತಿಮವಾಗಿ ಹಿಂಸಾತ್ಮಕ ರೂಪಕ್ಕೆ ತಿರುಗಿತು. ವಿವಿಧ ಸಮುದಾಯಗಳ ಸಶಸ್ತ್ರ ಗುಂಪುಗಳು ಪರಸ್ಪರ ಮತ್ತು ಭದ್ರತಾ ಪಡೆಗಳೊಂದಿಗೆ ಘರ್ಷಣೆಗೆ ಕಾರಣವಾಯಿತು. ಹಿಂಸಾಚಾರದಲ್ಲಿ 55 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ.
ಮಣಿಪುರದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ, ಸಂಘರ್ಷಕ್ಕೆ ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳಲು ಸರ್ಕಾರ ಮತ್ತು ವಿವಿಧ ಜನಾಂಗೀಯ ಗುಂಪುಗಳು ಮಾತುಕತೆಯಲ್ಲಿ ತೊಡಗಿವೆ. ಆದಾಗ್ಯೂ, ಜನಾಂಗೀಯ ಮತ್ತು ರಾಜಕೀಯ ಉದ್ವಿಗ್ನತೆ ಮುಂದುವರಿಯುತ್ತಲೇ ಇದೆ. ಇದರಿಂದಾಗಿ ಈ ಪ್ರದೇಶದಲ್ಲಿ ಶಾಶ್ವತ ಶಾಂತಿಯನ್ನು ಸಾಧಿಸುವುದು ಕಷ್ಟಕರವಾಗಿದೆ.

ಇದು ಅಸ್ಮಿತೆಯ ಯುದ್ಧ
ಮಣಿಪುರವು ವೈವಿಧ್ಯಮಯ ಜನಾಂಗೀಯ ಗುಂಪುಗಳಿಗೆ ನೆಲೆಯಾಗಿದೆ. ಇದರಲ್ಲಿ ನಾಗಾಗಳು, ಕುಕಿಗಳು, ಮೈಟೈಸ್ ಮತ್ತು ಪಂಗಲ್‌ಗಳು (ಮಣಿಪುರಿ ಮುಸ್ಲಿಮರು ಎಂದೂ ಕರೆಯುತ್ತಾರೆ) ನಂತಹ ಪ್ರಬಲ ಬುಡಕಟ್ಟುಗಳು ಸೇರಿವೆ. ಈ ಬುಡಕಟ್ಟು ಜನಾಂಗದವರು ತಮ್ಮದೇ ಆದ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಹೊಂದಿದ್ದಾರೆ.
ಮಣಿಪುರದಲ್ಲಿ ವಿವಿಧ ಬುಡಕಟ್ಟುಗಳ ನಡುವೆ ಐತಿಹಾಸಿಕ ಪೈಪೋಟಿಗಳು ಮತ್ತು ಘರ್ಷಣೆಗಳು ನಡೆದಿವೆ. ಇದು ಸಂಪನ್ಮೂಲಗಳು, ಭೂಮಿ ಮತ್ತು ರಾಜಕೀಯ ಅಧಿಕಾರಕ್ಕಾಗಿ ಸಂಘರ್ಷವಾಗಿದೆ. ಆದಾಗ್ಯೂ, ಈ ಘರ್ಷಣೆಗಳ ಸ್ವರೂಪ ಮತ್ತು ತೀವ್ರತೆಯು ಕಾಲಾನಂತರದಲ್ಲಿ ಬದಲಾಗಿದೆ. ವಿಭಿನ್ನ ಬುಡಕಟ್ಟುಗಳು ವಿಭಿನ್ನ ಸಂಘರ್ಷಗಳಲ್ಲಿ ತೊಡಗಿಸಿಕೊಂಡಿವೆ.
ನಾಗಾಗಳು ಮತ್ತು ಕುಕಿ ನಡುವೆ ಇತ್ತೀಚೆಗೆ ನಡೆದ ಅತ್ಯಂತ ಮಹತ್ವದ ಘರ್ಷಣೆಗಳಲ್ಲಿ ಒಂದಾಗಿದೆ. ನಾಗಾಗಳು ಮಣಿಪುರದ ಕೆಲವು ಭಾಗಗಳನ್ನು ಒಳಗೊಂಡಿರುವ ನಾಗಾಲ್ಯಾಂಡ್ ಪ್ರತ್ಯೇಕ ರಾಜ್ಯವನ್ನು ಬಯಸುತ್ತಿದ್ದಾರೆ ಮತ್ತು ಕೆಲವು ಕುಕಿ ಗುಂಪುಗಳು ಈ ಬೇಡಿಕೆಯನ್ನು ವಿರೋಧಿಸಿವೆ. ಇದು 1990ರ ದಶಕದಲ್ಲಿ ನಡೆದ ಕುಕಿ-ನಾಗಾ ಘರ್ಷಣೆಯಂತಹ ಹಿಂಸಾತ್ಮಕ ಘಟನೆಗಳು ಸೇರಿದಂತೆ ಎರಡು ಸಮುದಾಯಗಳ ನಡುವೆ ಘರ್ಷಣೆಗೆ ಕಾರಣವಾಗಿದೆ. ಇದು ನೂರಾರು ಜನರ ಸಾವಿಗೆ ಕಾರಣವಾಯಿತು.

ಮಣಿಪುರದಲ್ಲಿ ಮೈಟೈಸ್ ಮತ್ತು ಇತರ ಜನಾಂಗೀಯ ಗುಂಪುಗಳ ನಡುವೆ ಉದ್ವಿಗ್ನತೆಗಳಿವೆ. ಮೈಟಿಗಳು ರಾಜ್ಯದ ಅತಿದೊಡ್ಡ ಮತ್ತು ಪ್ರಬಲ ಸಮುದಾಯವಾಗಿದೆ. ಮೈಟಿಗಳು ಇತರ ಜನಾಂಗೀಯ ಗುಂಪುಗಳನ್ನು ಕೀಳಾಗಿ ನೋಡುತ್ತಾರೆ ಎಂದು ಆರೋಪಿಸಲಾಗಿದೆ. ಇದು ಅಸಮಾಧಾನ ಮತ್ತು ಸಂಘರ್ಷಕ್ಕೆ ಕಾರಣವಾಗಿದೆ.
ಈಗ ನಡೆಯುತ್ತಿರುವ ಸಂಘರ್ಷವು ಕೇವಲ ಮೀಸಲಾತಿಯ ಕಾರಣಕ್ಕಾಗಿ ಅಲ್ಲ. ಅಲ್ಲಿನ ಜನಾಂಗೀಯ ಸಂಘರ್ಷಕ್ಕೆ ಸುದೀರ್ಘ ಇತಿಹಾಸವಿದೆ. ದೇಶದ ಸಣ್ಣ ರಾಜ್ಯವೊಂದರಲ್ಲಿ ನೆಲೆಗೊಂಡಿರುವ ಬಗೆಹರಿಯದ ಸಮಸ್ಯೆಗಳನ್ನು ಸರ್ಕಾರಗಳು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಿರುವುದು ಮಾತ್ರ ದುರಂತ.












Click it and Unblock the Notifications