ಮಣಿಪುರ ಪೊಲೀಸರಿಗೆ ಸೇರಿದ ನೂರಾರು ಎಕೆ ರೈಫಲ್, 19,000 ಬುಲೆಟ್ ಲೂಟಿ: ಮುಗಿಲುಮುಟ್ಟಿದ ಅರಾಜಕತೆ, ಮಕ್ಕಳಾಟವಾದ ಆಂತರಿಕ ಭದ್ರತ
ಇಂಫಾಲ್, ಆಗಸ್ಟ್ 04: ಮಣಿಪುರದಲ್ಲಿ ಅರಾಜಕತೆ ಮುಗಿಲು ಮುಟ್ಟಿದೆ. ಭದ್ರತೆ, ಶಾಂತಿ, ನೆಮ್ಮದಿಗೆ ಈಶಾನ್ಯ ರಾಜ್ಯದಲ್ಲಿ ಅರ್ಥವೇ ಇಲ್ಲದಂತಾಗಿದೆ. ಅಲ್ಲಿ ಪೊಲೀಸರು, ಯೋಧರು, ಸರ್ಕಾರ ಎಲ್ಲವೂ ಅಸಹಾಯಕವಾಗಿ ಕುಳಿತಿದೆ ಎಂಬುದು ಮೇಲ್ನೊಟಕ್ಕೆ ಕಂಡುಬಂದಿದೆ. ಶಸ್ತ್ರಾಸ್ತ್ರ ಲೂಟಿಯ ಹೊಸ ಘಟನೆಯೊಂದರಲ್ಲಿ, ನೂರಾರು ಆಕ್ರಮಣಕಾರಿ ರೈಫಲ್‌ಗಳು ಹಾಗೂ 19,000 ಬುಲೆಟ್‌ಗಳನ್ನು ಲೂಟಿ ಮಾಡಲಾಗಿದೆ.
ಬಹುಸಂಖ್ಯಾತ ಮೈತೇಯಿ ಸಮುದಾಯಕ್ಕೆ ಸೇರಿದ ಗಲಭೆಕೋರರ ಗುಂಪೊಂದು ಪೊಲೀಸರ ಶಸ್ತ್ರಾಸ್ತ್ರಗಳನ್ನು ಕದ್ದಿದ್ದಾರೆ. ಎಕೆ ಮತ್ತು 'ಘಾತಕ್' ಸರಣಿಯ ಆಕ್ರಮಣಕಾರಿ ರೈಫಲ್‌ಗಳನ್ನು ಹೊತ್ತೊಯ್ದಿದ್ದಾರೆ. ವಿವಿಧ ಕ್ಯಾಲಿಬರ್‌ಗಳ 19,000 ಬುಲೆಟ್‌ಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಷ್ಣುಪುರ್ ಜಿಲ್ಲೆಯ ನರನ್ಸೇನಾದಲ್ಲಿರುವ 2 ನೇ ಇಂಡಿಯಾ ರಿಸರ್ವ್ ಬೆಟಾಲಿಯನ್ ಪ್ರಧಾನ ಕಛೇರಿಯಲ್ಲಿ ಈ ಘಟನೆ ನಡೆದಿದೆ. ಜನಾಂಗೀಯ ಘರ್ಷಣೆಯಲ್ಲಿ ಕೊಲ್ಲಲ್ಪಟ್ಟ ಕುಕಿ ಜನರ ಸಾಮೂಹಿಕ ಸಮಾಧಿ ಮಾಡಲು ಸಾವಿರಾರು ಜನರು ಸೇರಿದ್ದರು. ಇದನ್ನು ವಿರೋಧಿಸಿರುವ ಬಹುಸಂಖ್ಯಾತ ಮೈತೇಯಿ ಸಮುದಾಯದ ಜನರು ಪ್ರತಿಭಟನೆ ನಡೆಸಿದರು. ಆ ವೇಳೆ, ಚುರಚಂದ್‌ಪುರ ಕಡೆಗೆ ಮೆರವಣಿಗೆ ನಡೆಸಲು ಮುಂದಾದರು. ಇದಕ್ಕೆ ಪೊಲೀಸರು ತಡೆಯೊಡ್ಡಿದರು. ಆ ಬಳಿಕ ಪೊಲೀಸ್ ಶಸ್ತ್ರಾಗಾರಗಳಿಗೆ ನುಗ್ಗಿದ ಗಲಭೆಕೋರರು ಲೂಟಿ ಮಾಡಿದ್ದಾರೆ.
ವಿವಿಧ ಕ್ಯಾಲಿಬರ್‌ಗಳ 19,000 ಕ್ಕೂ ಹೆಚ್ಚು ಬುಲೆಟ್‌ಗಳು, ಎಕೆ ಸರಣಿಯ ಅಸಾಲ್ಟ್ ರೈಫಲ್, ಮೂರು 'ಘಾತಕ್' ರೈಫಲ್‌ಗಳು, 195 ಸ್ವಯಂ-ಲೋಡಿಂಗ್ ರೈಫಲ್‌ಗಳು, ಐದು ಎಂಪಿ-5 ಗನ್‌ಗಳು, 169 ಎಂಎಂ ಪಿಸ್ತೂಲ್‌ಗಳು, 25 ಬುಲೆಟ್ ಪ್ರೂಫ್ ಜಾಕೆಟ್‌ಗಳು, 21 ಕಾರ್ಬೈನ್‌ಗಳು, ಇತರ 124 ಕಾರ್ಬೈನ್‌ಗಳು, 124 ಗುಂಪು ಲೂಟಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುಡಕಟ್ಟು ಜನಾಂಗದವರ ಸಾಮೂಹಿಕ ಸಮಾಧಿ ಕಾರ್ಯಕ್ರಮವು ಗಲಭೆ ಪೀಡಿತ ರಾಜ್ಯದಲ್ಲಿ ಹೊಸ ಉದ್ವಿಗ್ನತೆಯನ್ನು ಹುಟ್ಟುಹಾಕಿದೆ. ಬಹುಸಂಖ್ಯಾತ ಸಮುದಾಯವು ಕುಕಿ ಸಮುದಾಯದ ಕ್ರಮವನ್ನು ವಿರೋಧಿಸಿದೆ.
ಮೈತೇಯಿ ಸಮುದಾಯದ ಸಾವಿರಾರು ಜನರು ಪ್ರತಿಭಟನೆಗೆ ಮುಂದಾಗಿದ್ದರಿಂದ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆ ವೇಳೆ, ಪೊಲೀಸರು ಹಾಗೂ ಉದ್ರಿಕ್ತರ ನಡುವೆ ಘರ್ಷಣೆ ಉಂಟಾಗಿ 25 ಜನರು ಗಾಯಗೊಂಡಿದ್ದಾರೆ.
ಬಹುಸಂಖ್ಯಾತ ಸಮುದಾಯದ ಜನರು ರಾಜ್ಯದ ರಾಜಧಾನಿ ಇಂಫಾಲದಲ್ಲಿರುವ ಇತರ ಎರಡು ಶಸ್ತ್ರಾಗಾರಗಳನ್ನು ಲೂಟಿ ಮಾಡಲು ಪ್ರಯತ್ನಿಸಿದೆ. ಆದರೆ, ಅವರ ಪ್ರಯತ್ನಗಳು ವಿಫಲವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಬೆಳಗ್ಗೆ ಗೃಹ ಸಚಿವಾಲಯದೊಂದಿಗೆ ಚರ್ಚಿಸಿದ ನಂತರ ಸಾಮಾಹಿಕ ಸಮಾಧಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಕುಕಿ ಸಮುದಾಯ ಹೇಳಿಕೊಂಡಿದೆ. ಆದರೆ, ಪರಿಸ್ಥಿತಿ ಮಾತ್ರ ಉದ್ವಿಗ್ನವಾಗಿದೆ.
ಮೇ 3 ರಂದು ಮಣಿಪುರದಲ್ಲಿ ನಡೆದ ಜನಾಂಗೀಯ ಘರ್ಷಣೆಯಿಂದ 160 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಜನರು ಗಾಯಗೊಂಡಿದ್ದಾರೆ. 50,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.
ಮಣಿಪುರದ ಜನಸಂಖ್ಯೆಯ ಶೇಕಡ 53 ರಷ್ಟಿರುವ ಮೈತೇಯಿಗಳು ಇಂಫಾಲ್ ಕಣಿವೆಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಬುಡಕಟ್ಟು ಜನಾಂಗವಾದ ನಾಗಾಗಳು ಮತ್ತು ಕುಕಿಗಳು ಶೇಕಡಾ 40 ಕ್ಕಿಂತ ಹೆಚ್ಚಿದ್ದಾರೆ. ಅವರು ಬೆಟ್ಟಗುಡ್ಡಗಳಿರುವ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.












Click it and Unblock the Notifications