Manipur violence: ಬಿರೇನ್ ಸಿಂಗ್ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದ ಕುಕಿ ಪೀಪಲ್ಸ್ ಅಲೈಯನ್ಸ್!
ಇಂಫಾಲ್ ಆಗಸ್ಟ್ 7: ಮಣಿಪುರದಲ್ಲಿ ಎನ್‌ಡಿಎ ಮೈತ್ರಿಕೂಟದ ಕುಕಿ ಪೀಪಲ್ಸ್ ಅಲೈಯನ್ಸ್ (ಕೆಪಿಎ) ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಜ್ಯ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂಪಡೆಯುವುದಾಗಿ ಘೋಷಣೆ ಮಾಡಿದೆ. ಕೆಪಿಎ ಅಧ್ಯಕ್ಷ ಟೊಂಗ್‌ಮಂಗ್ ಹಾಕಿಪ್ ಅವರು ಮಣಿಪುರ ರಾಜ್ಯಪಾಲರಾದ ಅನುಸೂಯಾ ಉಯ್ಕೆ ಅವರಿಗೆ ಪತ್ರ ಬರೆದು, ಬಿಜೆಪಿಯೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುವ ಪಕ್ಷದ ನಿರ್ಧಾರದ ಬಗ್ಗೆ ತಿಳಿಸಿದ್ದಾರೆ.
ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದ ನಡುವೆ ಈ ಬೆಳವಣಿಗೆ ಕಂಡುಬಂದಿದೆ. ಕಳೆದ ಮೂರು ತಿಂಗಳಿನಿಂದ ಈಶಾನ್ಯ ರಾಜ್ಯದಲ್ಲಿ ನಡೆದ ಜನಾಂಗೀಯ ಹಿಂಸಾಚಾರದ ಪರಿಣಾಮವಾಗಿ 160 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದೇ ವಿಚಾರವಾಗಿ ಹಾಲಿ ಬೀರೇನ್ ಸಿಂಗ್ ಸರ್ಕಾರದೊಂದಿಗೆ ಅಸಮಾಧಾನ ಹೊಂದಿದ್ದ ಕುಕಿ ಪೀಪಲ್ಸ್ ಅಲೈಯನ್ಸ್ ಇದೀಗ ಎನ್ ಡಿಎ ಮೈತ್ರಿಕೂಟದಿಂದ ಹೊರನಡೆದಿದ್ದು, ಮಾತ್ರವಲ್ಲದೇ ಹಾಲಿ ಬೀರೇನ್ ಸಿಂಗ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನೂ ಹಿಂಪಡೆದುಕೊಂಡಿದೆ.

"ಪ್ರಸ್ತುತ ಮಣಿಪುರ ಹಿಂಸಾಚಾರವನ್ನು ಎಚ್ಚರಿಕೆಯಿಂದ ಪರಿಗಣಿಸಿ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ನೇತೃತ್ವದ ಮಣಿಪುರದ ಹಾಲಿ ಸರ್ಕಾರಕ್ಕೆ ಇನ್ನು ಮುಂದೆ ಬೆಂಬಲ ನೀಡುವುದಿಲ್ಲ" ಎಂದು ಹಾಕಿಪ್ ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಮಣಿಪುರ ಸರ್ಕಾರದೊಂದಿಗಿನ KPA ಬೆಂಬಲವನ್ನು ಈ ಮೂಲಕ ಹಿಂತೆಗೆದುಕೋಮಡಿದೆ ಎಂದು ಹಾಕಿಪ್ ಹೇಳಿದರು.
ಸೈಕುಲ್‌ನಿಂದ ಕಿಮ್ನಿಯೊ ಹಾಕಿಪ್ ಹ್ಯಾಂಗ್‌ಶಿಂಗ್ ಮತ್ತು ಸಿಂಘಾಟ್‌ನಿಂದ ಚಿನ್ಲುಂಥಾಂಗ್ ಇಬ್ಬರು ಶಾಸಕರು ಸೇರಿದಂತೆ ಕೆಪಿಎ 60 ಸದಸ್ಯರನ್ನು ಮಣಿಪುರ ಸದನದಲ್ಲಿ ಹೊಂದಿದೆ. ಬಿಜೆಪಿ 32 ಸದಸ್ಯರೊಂದಿಗೆ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿದೆ. ಹೆಚ್ಚುವರಿಯಾಗಿ, ಪಕ್ಷವು ಐದು NPF ಶಾಸಕರು ಮತ್ತು ಮೂರು ಸ್ವತಂತ್ರ ಶಾಸಕರ ಬೆಂಬಲವನ್ನು ಹೊಂದಿದೆ.
ಮತ್ತೊಂದೆಡೆ, ವಿರೋಧ ಪಕ್ಷವು ವಿವಿಧ ಪಕ್ಷಗಳ ಪ್ರತಿನಿಧಿಗಳನ್ನು ಒಳಗೊಂಡಿದೆ. ಎನ್‌ಪಿಪಿ ಏಳು ಸ್ಥಾನಗಳನ್ನು ಹೊಂದಿದೆ. ಕಾಂಗ್ರೆಸ್ ಐದು ಮತ್ತು ಜೆಡಿಯು ಆರು ಸ್ಥಾನಗಳನ್ನು ಹೊಂದಿದೆ.

ಮಣಿಪುರ ಹಿಂಸಾಚಾರ
ಇನ್ನೂ ಇತ್ತ ಮಣಿಪುರ ಗಲಭೆ ನಿಯಂತ್ರಣಕ್ಕೆ ಬರುವ ಲಕ್ಷಣಗಳೇ ಕಾಣುತ್ತಿಲ್ಲ. ರಾಜ್ಯಾದ್ಯಂತ ಕುಕಿ ಹಾಗೂ ಮೀಟಿ ಸಮುದಾಯಗಳು ಮತ್ತೊಮ್ಮೆ ಘರ್ಷಣೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 900ಕ್ಕೂ ಹೆಚ್ಚು ಭದ್ರತಾ ಪಡೆ ಯೋಧರನ್ನು ಮಣಿಪುರಕ್ಕೆ ರವಾನೆ ಮಾಡಿದೆ.
ಕೇಂದ್ರ ಸರ್ಕಾರದ ಗೃಹ ಸಚಿವಾಲಯವು 10ಕ್ಕೂ ಹೆಚ್ಚು ಕಂಪನಿಗಳ 900ಕ್ಕೂ ಹೆಚ್ಚು ಯೋಧರನ್ನು ಮಣಿಪುರಕ್ಕೆ ರವಾನೆ ಮಾಡಿದೆ ಎಂದು ಇಲ್ಲಿನ ಹಿರಿಯ ಪೊಲೀಸ್ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈ 900 ಯೋಧರ ಪೈಕಿ ಪ್ಯಾರಾ ಮಿಲಿಟರಿ ಪಡೆ, ಸಿಆರ್‌ಪಿಎಫ್, ಬಿಎಸ್‌ಎಫ್, ಐಟಿಬಿಪಿ ಹಾಗೂ ಎಸ್‌ಎಸ್‌ಬಿ ಪಡೆಗಳ ಯೋಧರೂ ಸೇರಿದ್ದಾರೆ.
ಮೇ 3 ರಂದು ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಆರಂಭವಾದ ದಿನದಿಂದ ಹಿಡಿದು ಇಲ್ಲಿಯವರೆಗೆ 40 ಸಾವಿರಕ್ಕೂ ಹೆಚ್ಚು ಸೇನಾ ಪಡೆ ಯೋಧರನ್ನು ಮಣಿಪುರಕ್ಕೆ ರವಾನೆ ಮಾಡಲಾಗಿದೆ. ಕೇಂದ್ರ ಗೃಹ ಸಚಿವಾಲಯವು ಶತಾಯಗತಾಯ ಹಿಂಸಾಚಾರನ್ನು ಹತ್ತಿಕ್ಕಲೇ ಬೇಕು ಎಂದು ನಿರ್ಧರಿಸಿದ್ದು, ಅಸ್ಸಾಂ ರೈಫಲ್ಸ್, ಕೇಂದ್ರೀಯ ಶಸ್ತ್ರಾಸ್ತ್ರ ಪೊಲೀಸ್ ಪಡೆ ಸೇರಿದಂತೆ ಹಲವು ವಿಭಾಗಗಳ ಯೋಧರನ್ನು ಮಣಿಪುರದಲ್ಲಿ ನಿಯೋಜನೆ ಮಾಡಿದೆ.












Click it and Unblock the Notifications