Manipur violence: ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ, ನಿಲ್ಲದ ರಕ್ತಪಾತ- ಉದ್ರಿಕ್ತರಿಗೆ ಭದ್ರತಾ ಪಡೆಗಳೇ ಟಾರ್ಗೆಟ್
ಇಂಫಾಲ, ಆಗಸ್ಟ್ 03: ಮಣಿಪುರದ ಚುರಾಚಂದ್‌ಪುರದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯರ ನಡುವೆ ಘರ್ಷಣೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಇಂಫಾಲದ ಪಶ್ಚಿಮ ಮತ್ತು ಪೂರ್ವ ಪ್ರದೇಶಗಳಲ್ಲಿ ಜಾರಿಯಲ್ಲಿದ್ದ ಕರ್ಪ್ಯೂ ಸಡಿಲಿಕೆಯನ್ನು ಹಿಂಪಡೆಯಲಾಗಿದೆ.
ಗಲಭೆ ಪೀಡಿತ ರಾಜ್ಯದ ವಿವಿಧೆಡೆ ಕರ್ಫ್ಯೂ ಹೇರಲಾಗಿದೆ. ಆದರೆ, ಇಂಫಾಲ್ ನಗರದ ಪಶ್ಚಿಮ ಮತ್ತು ಪೂರ್ವ ಪ್ರದೇಶಗಳಲ್ಲಿ ಬೆಳಿಗ್ಗೆ 05:00 ರಿಂದ ರಾತ್ರಿ 08:00 ರ ವರೆಗೆ ಸಡಿಲಿಸಲಾಗಿತ್ತು. ಈ ವೇಳೆ, ಭದ್ರತಾ ಪಡೆಗಳು ಹಾಗೂ ಸ್ಥಳೀಯರ ನಡುವೆ ಸಂಘರ್ಷ ಏರ್ಪಟ್ಟಿದೆ.

ಸಂಘರ್ಷಗಳು ಉಂಟಾದ ಬಳಿಕ ಕರ್ಪ್ಯೂ ಅನ್ನು ಮತ್ತೆ ಹೇರಲಾಗಿದೆ.
'ಇಂಫಾಲದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದೆ. ಯಾವುದೇ ಅಹಿತಕರ ಘಟನೆ ತಡೆಗಟ್ಟಲು, ಪ್ರಾಣ ಹಾಗೂ ಆಸ್ತಿಪಾಸ್ತಿ ನಷ್ಟವನ್ನು ನಿಲ್ಲಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಕರ್ಫ್ಯೂ ಹೇರಲಾಗಿದೆ' ಎಂದು ಜಿಲ್ಲಾಡಳಿತ ಹೇಳಿಕೆ ನೀಡಿದೆ.
ತಕ್ಷಣದಿಂದ ಜಾರಿಗೆ ಬರುವಂತೆ ಜಿಲ್ಲೆಯಲ್ಲಿ ಸಂಪೂರ್ಣ ಕರ್ಫ್ಯೂ ವಿಧಿಸಲಾಗಿದೆ. ಇಂಫಾಲ್ ಪಶ್ಚಿಮ ಜಿಲ್ಲೆಯ ಎಲ್ಲಾ ಪ್ರದೇಶಗಳಲ್ಲಿ ಸಾರ್ವಜನಿಕರು ತಮ್ಮ ನಿವಾಸಗಳಿಂದ ಹೊರಗೆ ಹೋಗದಂತೆ ನಿರ್ಬಂಧಿಸಲಾಗಿದೆ ಎಂದು ಆದೇಶವು ತಿಳಿಸಿದೆ.

ಇಂಫಾಲ್ ಪೂರ್ವ ಜಿಲ್ಲೆಗೆ ಹೊರಡಿಸಿದ ಆದೇಶದ ಪ್ರಕಾರ, 'ಆಗಸ್ಟ್ 2ರ ಬೆಳಿಗ್ಗೆ ಐದು ಗಂಟೆಯಿಂದ ಆಗಸ್ಟ್ 3 ರ ಸಂಜೆ ಎಂಟು ಗಂಟೆವರೆಗೆ ಕರ್ಫ್ಯೂ ಸಡಿಲಿಕೆ ಮಾಡಲಾಗಿತ್ತು. ಆದರೆ, ಘರ್ಷಣೆಗಳು ಉಂಟಾಗಿರುವುದರಿಂದ ಈ ಸಡಿಲಿಕೆಯನ್ನು ರದ್ದುಗೊಳಿಸಲಾಗಿದೆ' ಎಂದು ತಿಳಿಸಿದೆ.
ಆರೋಗ್ಯ, ವಿದ್ಯುತ್, ಪಿಎಚ್‌ಇಡಿ, ಪೆಟ್ರೋಲ್ ಪಂಪ್‌ಗಳು, ಶಾಲೆಗಳು, ಕಾಲೇಜುಗಳು, ಪುರಸಭೆ, ಪತ್ರಿಕಾ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು ಮತ್ತು ನ್ಯಾಯಾಲಯಗಳ ಕಾರ್ಯನಿರ್ವಹಣೆಯಂತಹ ಅಗತ್ಯ ಸೇವೆಗಳಿಗೆ ಸಂಬಂಧಿಸಿದವರು ಕರ್ಫ್ಯೂ ಹೇರಿಕೆಯಿಂದ ವಿನಾಯಿತಿ ಪಡೆದಿದ್ದಾರೆ ಎಂದು ಆದೇಶದಲ್ಲಿ ಹೇಳಲಾಗಿದೆ.

ವಿಮಾನ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಹೋಗಲು ಅನುಮತಿ ಇದೆ.
ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ಸ್ಥಳೀಯರ ಗುಂಪೊಂದು ಬಿಷ್ಣುಪುರದಿಂದ ಚುರಂಚಂದಪುರ ಕಡೆಗೆ ತೆರಳಲು ಪ್ರಯತ್ನಿಸಿದೆ. ಅಲ್ಲಿ ಅವರನ್ನು ಭದ್ರತಾ ಪಡೆಗಳು ತಡೆದಿವೆ. ಆ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಮುಂದಾಗಿವೆ. ಆ ವೇಳೆಯಲ್ಲಿ ಘರ್ಷಣೆಗಳು ಸಂಭವಿಸಿವೆ.
ಅಸ್ಸಾಂ ರೈಫಲ್ಸ್, ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್) ತಂಡಗಳು ಸ್ಥಳದಲ್ಲಿದ್ದವು ಎಂದು ತಿಳಿದುಬಂದಿದೆ.
ಮಣಿಪುರ ಹಿಂಸಾಚಾರ
ಮೇ 3 ರಿಂದ, ಈಶಾನ್ಯ ರಾಜ್ಯವು ಜನಾಂಗೀಯ ಘರ್ಷಣೆಗಳಿಂದ ಬಳಲುತ್ತಿದೆ. ಮುಖ್ಯವಾಗಿ ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುವ ಬುಡಕಟ್ಟು ಕುಕಿಗಳು ಮತ್ತು ಇಂಫಾಲ್ ಕಣಿವೆಯ ಪ್ರಬಲ ಸಮುದಾಯವಾದ ಬಹುಸಂಖ್ಯಾತ ಮೈತೀಸ್ ನಡುವೆ ಸಂಘರ್ಷಗಳು ಏರ್ಪಟ್ಟಿವೆ. ಇದರಲ್ಲಿ ಕನಿಷ್ಠ 150 ಜನರು ಸಾವನ್ನಪ್ಪಿದ್ದಾರೆ. 50,000 ಮಂದಿ ಸ್ಥಳಾಂತರಗೊಂಡಿದ್ದಾರೆ.












Click it and Unblock the Notifications