ಮಣಿಪುರ ಹಿಂಸಾಚಾರ: ರಾಹುಲ್ ಗಾಂಧಿ ಭೇಟಿ ಬೆನ್ನಲ್ಲೇ ಸಿಎಂ ಬಿರೇನ್ ಸಿಂಗ್ ರಾಜೀನಾಮೆ ಸಾಧ್ಯತೆ
ಮಣಿಪುರದಲ್ಲಿ ಹಿಂಸಾಚಾರ ಮುಂದುವರಿದಿದ್ದು, ಸಿಎಂ ಬಿರೇನ್ ಸಿಂಗ್ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಇಂದು ಮಧ್ಯಾಹ್ನ 1 ಗಂಟೆಗೆ ಅವರು ರಾಜ್ಯಪಾಲರಾದ ಅನುಸೂಯಾ ಉಯ್ಕೆ ಅವರನ್ನು ಭೇಟಿ ಮಾಡಲಿದ್ದು, ಬಹುತೇಕ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ.
ಮಣಿಪುರದಲ್ಲಿ ಕಳೆದ ಎರಡು ತಿಂಗಳಿನಿಂದ ಹಿಂಸಾಚಾರ ನಡೆಯುತ್ತಿದ್ದು ಈಗಾಗಲೇ 120 ಕ್ಕೂ ಮಂದಿ ಪ್ರಾಣ ಕಳೆದುಕೊಂಡಿದ್ದು, 1000 ಜನರನ್ನು ಸ್ಥಳಾಂತರಿಸಲಾಗಿದೆ.

"ಬಿರೇನ್ ಸಿಂಗ್ ಇಂದು ರಾಜೀನಾಮೆ ನೀಡುವ ಸಾಧ್ಯತೆಯಿದೆ" ಎಂದು ಸಿಂಗ್ ಅವರಿಗೆ ನಿಕಟವಾಗಿರುವ ಮಣಿಪುರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಡಿಹೆಚ್ ಕೂಡ ವರದಿ ಮಾಡಿದೆ.
ಮಣಿಪುರದ ಪ್ರಮುಖ ಆಂಗ್ಲ ದೈನಿಕದಲ್ಲಿ ಪ್ರಕಟವಾದ ಸುದ್ದಿ ವರದಿಯೊಂದು ಶುಕ್ರವಾರ ಸಿಎಂ ಬಿರೇನ್ ಸಿಂಗ್ ಅವರ ರಾಜೀನಾಮೆ ಸುದ್ದಿಗೆ ಇನ್ನಷ್ಟು ಪುಷ್ಠಿ ನೀಡಿದೆ. ಮುಖ್ಯವಾಗಿ ಹಿಂಸಾಚಾರವನ್ನು ತಡೆಯುವಲ್ಲಿ ವಿಫಲರಾಗಿದ್ದಕ್ಕೆ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಹೇಳಲಾಗಿದೆ.
ರಾಷ್ಟ್ರಪತಿ ಆಡಳಿತ ಸಾಧ್ಯತೆ
ಸಂಗೈ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾದ ಸುದ್ದಿ ವರದಿಯ ಪ್ರಕಾರ ಬಿರೇನ್ ಸಿಂಗ್ ಅವರಿಗೆ ಗುರುವಾರ ನವದೆಹಲಿಯಿಂದ ಹಲವು ಕರೆಗಳು ಹೋಗಿವೆ. ಬಿಜೆಪಿ ಹೈಕಮಾಂಡ್ ಸೂಚನೆ ಮೇರೆಗೆ ಅವರು ರಾಜೀನಾಮೆ ನೀಡುವ ಸಾಧ್ಯತೆ ಇದೆ. ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದ್ದು, ವಿಧಾನಸಭೆಯನ್ನು ಅಮಾನುಗೊಳಿಸುವ ಸಾಧ್ಯತೆ ಕೂಡ ಇದೆ ಎಂದು ವರದಿ ಹೇಳಿದೆ.
ಅನುಸೂಯಾ ಉಯ್ಕೆ ಅವರು ನವದೆಹಲಿಗೆ ಭೇಟಿ ನೀಡಿದ ಎರಡು ದಿನಗಳ ಬಳಿಕ ಈ ಬೆಳವಣಿಗೆ ನಡೆಯುತ್ತಿದೆ. ರಾಜ್ಯಪಾಲರು ದೆಹಲಿ ಭೇಟಿ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಇತರರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮಣಿಪುರದ ಪರಿಸ್ಥಿತಿ ಮತ್ತು ಶಾಂತಿ ಮರುಸ್ಥಾಪನೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದರು.
ಸಿಎಂ ಬಿರೇನ್ ಸಿಂಗ್ ವಿರುದ್ಧ ಸ್ವಪಕ್ಷದಲ್ಲೇ ಅಸಮಾಧಾನ
ಮಣಿಪುರ ಸಿಎಂ ಬಿರೇನ್ ಸಿಂಗ್ ವಿರುದ್ಧ ವಿರೋಧ ಪಕ್ಷಗಳು ಮಾತ್ರವಲ್ಲದ ಸ್ವಪಕ್ಷೀಯರು ಕೂಡ ಕೋಪಗೊಂಡಿದ್ದು, ವಾಗ್ದಾಳಿ ನಡೆಸುತ್ತಿದ್ದಾರೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ರಾಜ್ ಕುಮಾರ್ ರಂಜನ್ ಸಿಂಗ್ ಕೂಡ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಫಲವಾಗಿದೆ ಎಂದು ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದರು. ಇತ್ತೀಚೆಗಷ್ಟೇ ಇಂಫಾಲ್‌ನಲ್ಲಿರುವ ಅವರ ನಿವಾಸವನ್ನು ದುಷ್ಕರ್ಮಿಗಳು ಸುಟ್ಟು ಹಾಕಿದ್ದ ನಂತರ ಅವರು ಬಿರೇನ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಪ್ರತಿಪಕ್ಷ ಕಾಂಗ್ರೆಸ್ ಸೇರಿದಂತೆ ಹಲವು ಸಂಘಟನೆಗಳು ಸಿಂಗ್ ಅವರನ್ನು ಪದಚ್ಯುತಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಒತ್ತಾಯಿಸಿವೆ. ಜೂನ್ 25ರಂದು ನವದೆಹಲಿಯಲ್ಲಿ ಬಿರೇನ್ ಸಿಂಗ್ ಅಮಿತ್ ಶಾರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಕೂಡ, ಮಣಿಪುರ ಹಿಂಸಾಚಾರ ತಡೆಗೆ ಬಿರೇನ್ ಸಿಂಗ್ ವಿಫಲವಾಗಿರುವುದಕ್ಕೆ ಆತಂಕ ವ್ಯಕ್ತಪಡಿಸಿದ್ದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಣಿಪುರಕ್ಕೆ ಭೇಟಿ ನೀಡುತ್ತಿರುವ ಸಂದರ್ಭದಲ್ಲೇ ಸಿಎಂ ರಾಜೀನಾಮೆ ಬೆಳವಣಿಗೆ ನಡೆಯುತ್ತಿದೆ. ಮಣಿಪುರದಲ್ಲಿ ಬಿಜೆಪಿ ಮೊದಲ ಬಾರಿಗೆ ಸಂಪೂರ್ಣ ಬಹುಮತ ಗಳಿಸಿದ ನಂತರ 62 ವರ್ಷದ ಬಿರೇನ್ ಕಳೆದ ವರ್ಷ ಎರಡನೇ ಅವಧಿಗೆ ಮಣಿಪುರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಮೈತೈ ಸಮುದಾಯದ ನಾಯಕರಾಗಿದ್ದ ಬಿರೇನ್, 2016 ರಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ್ದರು. 2017 ರ ವಿಧಾನಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ಸಿಎಂ ಆದರು.












Click it and Unblock the Notifications