ಹೊಡೆದರೆ ಹೀಗೆ ಹೊಡೀಬೇಕು ಲಕ್ಕು, ಬಡವನಿಗೆ ಸಿಕ್ತು ಭಾರಿ ವಜ್ರದ ತುಣುಕು
ಭೋಪಾಲ್, ಅಕ್ಟೋಬರ್ 10: ಕುಟುಂಬವೊಂದರ ಎರಡು ತಲೆಮಾರುಗಳು ಸುಮಾರು ವರ್ಷ ವಜ್ರಕ್ಕಾಗಿ ಭೂಮಿ ಅಗೆಯುತ್ತಲೇ ಇತ್ತು ಆದರೆ ಸಿಕ್ಕಿರಲಿಲ್ಲ. ಆದರೆ ಈಗ ಅದೇ ಕುಟುಂಬದ ಮೂರನೇ ತಲೆಮಾರಿನ ವ್ಯಕ್ತಿಗೆ ವಜ್ರ ಸಿಕ್ಕಿದೆ ಅದು ಆತನ ಹಾಗೂ ಆತನ ಮುಂದಿನ ತಲೆಮಾರಿನ ಜೀವನವನ್ನೇ ಬದಲಾಯಿಸಿದೆ!
ಇದು ಸಿನಿಮಾದ ಕತೆಯಲ್ಲ, ಈ ಘಟನೆ ನಡೆದಿರುವುದು ನಿನ್ನೆಯಷ್ಟೆ (ಮಂಗಳವಾರ) ಮಧ್ಯ ಪ್ರದೇಶದ ವಜ್ರದ ಗಣಿಗಾರಿಕೆಗೆ ಹೆಸರಾದ ಪನ್ನಾ ಎಂಬಲ್ಲಿ ಈ ಘಟನೆ ನಡೆದಿದೆ.
ಪ್ರಜಾಪತಿ ಎಂಬ ಬಡಕುಟುಂಬದ ವ್ಯಕ್ತಿಗೆ 42.9 ಕ್ಯಾರೆಟ್‌ನ ವಜ್ರದ ತುಣುಕು ಸಿಕ್ಕಿದೆ. ಅದರ ಅಂದಾಜು ಮೌಲ್ಯ 1.5 ಕೋಟಿಯಿಂದ 2.5 ಕೋಟಿ ಇರಬಹುದೆಂದು ಅಂದಾಜಿಸಲಾಗಿದೆ.

ಪ್ರಜಾಪತಿ ಅವರು ಪನ್ನಾದ ವಜ್ರದ ಗಣಿಗಾರಿಕೆ ಪ್ರದೇಶದಲ್ಲಿ ಇಂತಿಷ್ಟು ಸ್ಥಳವನ್ನು ಭೋಗ್ಯಕ್ಕೆ ಪಡೆದು ಪ್ರತಿ ದಿನವೂ ವಜ್ರಕ್ಕಾಗಿ ಭೂಮಿ ಅಗೆಯುತ್ತಿದ್ದರು. ಅವರ ತಾತನವರೂ ಅದೇ ಪನ್ನಾದಲ್ಲಿ ವಜ್ರಕ್ಕಾಗಿ ಭೂಮಿ ಅಗೆಯುತ್ತಿದ್ದವರೆ. ಅವರ ತಂದೆಯವರೂ ಅದೇ ಕೆಲಸ ಮಾಡುತ್ತಿದ್ದರು ಆದರೆ ಅವರಿಗಾರಿಗೂ ಸಿಗದ ವಜ್ರ ಪ್ರಜಾಪತಿಗೆ ಸಿಕ್ಕಿದೆ.
ಬಹು ವರ್ಷದಿಂದಲೂ ಪ್ರಜಾಪತಿ ಅವರು ಪನ್ನಾದಲ್ಲಿ ವಜ್ರದ ಗಣಿಗಾರಿಕೆ ನಡೆಸುತ್ತಿದ್ದರು. ಎಂದಿನಂತೆ ಮಂಗಳವಾರ ವಜ್ರಕ್ಕಾಗಿ ಭೂಮಿ ಅಗೆಯುತ್ತಿದ್ದಾಗ ಅಚಾನಕ್ಕಾಗಿ ವಜ್ರದ ತುಣುಕು ಸಿಕ್ಕಿದೆ. ಅದನ್ನು ಕೂಡಲೇ ಅವರು ಅಲ್ಲಿನ ಗಣಿಗಾರಿಕೆ ಮೇಲುಸ್ತುವಾರಿ ನೋಡಿಕೊಳ್ಳುವ ಸರ್ಕಾರಿ ಅಧಿಕಾರಿಗಳ ಬಳಿ ತೋರಿಸಿದ್ದಾರೆ.
ನಿಯಮದಂತೆ ವಜ್ರದ ತುಣುಕನ್ನು ಹರಾಜು ಮಾಡಲಾಗುತ್ತದೆ ಅದರಿಂದ ಬಂದ ಬಹುಪಾಲು ಹಣ ಪ್ರಜಾಪತಿ ಅವರಿಗೆ ಸೇರುತ್ತದೆ. ಸರ್ಕಾರಕ್ಕೂ ಸ್ವಲ್ಪ ಪಾಲು ಹೋಗುತ್ತದೆ.
'ನನ್ನ ಕುಟುಂಬ ಸಾಲದಲ್ಲಿದೆ ಬಂದ ಹಣದಿಂದ ಮೊದಲು ಸಾಲಗಳನ್ನು ತೀರಿಸುತ್ತೇನೆ. ಒಳ್ಳೆಯ ಮನೆ ಕಟ್ಟಿಸಿಕೊಳ್ಳುತ್ತೇನೆ. ನನ್ನ ಮಕ್ಕಳು ಇನ್ನು ಮುಂದೆ ಒಳ್ಳೆಯ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಾರೆ ಎಂದು ಖುಷಿಯಿಂದ ಹೇಳಿದ್ದಾರೆ ಪ್ರಜಾಪತಿ.












Click it and Unblock the Notifications