ಪಟ್ನಾ ವಿಪಕ್ಷಗಳ ಸಭೆಯಲ್ಲಿ ಮಮತಾ ಬ್ಯಾನರ್ಜಿ ಹಾಜರ್?
ಪಟ್ನಾ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೊಡೆತಟ್ಟಲು ವಿಪಕ್ಷಗಳು ಸಜ್ಜಾಗಿವೆ. ಹೀಗಾಗಿ ಬಿಹಾರದಲ್ಲಿ ವಿಪಕ್ಷಗಳ ಮಹತ್ವದ ಸಭೆ ಆಯೋಜಿಸಲಾಗಿದೆ. ಆದರೆ ಸಭೆಗೆ ಮೊದಲೇ ವಿಪಕ್ಷಗಳ ಒಗ್ಗಟ್ಟು ಒಡೆದ ಮನೆಯಾಗಿತ್ತು. ಇದೀಗ ಸಮಸ್ಯೆ ಬಹುತೇಕ ಬಗೆಹರಿದಂತೆ ಕಾಣುತ್ತಿದ್ದು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ವಿಪಕ್ಷಗಳ ಒಗ್ಗಟ್ಟಿನ ಸಭೆಗೆ ಹಾಜರಾಗುವ ಸಾಧ್ಯತೆ ಇದೆ.
2024ರ ಲೋಕಸಭಾ ಚುನಾವಣೆಗೆ ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಮಹಾಮೈತ್ರಿ ರೂಪಿಸಲು ಪ್ರಯತ್ನ ಆರಂಭಿಸಿದ್ದ ವಿಪಕ್ಷಗಳ ನಾಯಕರು ಆ ಕಸರತ್ತು ಮುಂದುವರಿಸಿದ್ದಾರೆ. ಜೂನ್ 12ರಂದು ನಡೆಯಲಿರುವ ಪ್ರತಿಪಕ್ಷಗಳ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ಇದೆ. ಆದರೆ ಅದಕ್ಕೂ ಮೊದಲೇ ಸಭೆ ದೆಹಲಿಯಲ್ಲಿ ಮಾಡಿ ಅಂತಾ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪರ ಇರುವ ಪಕ್ಷಗಳು ಆಗ್ರಹಿಸಿದ್ದವು. ಈ ನಡುವೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಮಾತ್ರ ಈ ವಿಚಾರದಲ್ಲಿ ಪಟ್ಟು ಹಿಡಿದು, ಸಭೆ ಪಟ್ನಾದಲ್ಲೇ ನಡೆಯಬೇಕು ಎಂದಿದ್ದರು. ಇದೀಗ ಮಮತಾ ಆಸೆ ನೆರವೇರಿದೆ.

ಮಮತಾ ಬ್ಯಾನರ್ಜಿ ಹಠ ಗೆದ್ದೇಬಿಡ್ತಾ?
ಬಿಹಾರದ ಸಿಎಂ ನಿತೀಶ್ ಕುಮಾರ್, ಬಿಜೆಪಿ ವಿರುದ್ಧ ಪ್ರತಿಪಕ್ಷಗಳನ್ನು ಒಂದೇ ವೇದಿಕೆ ಅಡಿ ತರಲು ಮುಂದಾಗಿದ್ದಾರೆ. ಹೀಗಾಗಿ ನಿತೀಶ್ ಕುಮಾರ್ ನೇತೃತ್ವದಲ್ಲೇ ಪಟ್ನಾದಲ್ಲಿ ವಿಪಕ್ಷಗಳ ನಾಯಕರ ಸಭೆ ಜೂನ್ 12ರಂದು ನಡೆಯಲಿದೆ. ಕಳೆದ ತಿಂಗಳಷ್ಟೇ ನಿತೀಶ್ ಕುಮಾರ್ ಕೋಲ್ಕತ್ತದಲ್ಲಿ ಮಮತಾರನ್ನ ಭೇಟಿ ಮಾಡಿ ಚರ್ಚಿಸಿದ್ದರು. ಆಗ ಜಯಪ್ರಕಾಶ್ ನಾರಾಯಣ್ ಅವರ ಹೋರಾಟ ಸ್ಮರಿಸಿ, ಪ್ರತಿಪಕ್ಷಗಳ ಸಭೆ ಪಟ್ನಾದಲ್ಲೇ ಆಯೋಜನೆ ಮಾಡಲು ಸಲಹೆ ನೀಡಿದ್ದರು. ಇದೀಗ ಮಮತಾ ಅವರ ಹಠ ಗೆದ್ದಿದ್ದು, ಮಮತಾ ಬ್ಯಾನರ್ಜಿ ಈ ಸಭೆಗೆ ಬರುವ ನಿರೀಕ್ಷೆ ಇದೆ.
ಏನಾಯ್ತೋ... ಇದೇನಾಯ್ತೋ..?
'ಎತ್ತು ಏರಿಗೆ, ಕೋಣ ನೀರಿಗೆ' ಅನ್ನುವಂತೆ ವಿಪಕ್ಷ ನಾಯಕರ ನಡುವೆಯೇ ಒಮ್ಮತ ಮೂಡುತ್ತಿಲ್ಲ. ಪಕ್ಷಗಳ ನಡುವಿನ ಭಿನ್ನಾಭಿಪ್ರಾಯದ ಕಾರಣ ಬಿಹಾರದಲ್ಲಿ ನಡೆಸಲು ಉದ್ದೇಶಿಸಿದ್ದ ವಿಪಕ್ಷಗಳ ಜಂಟಿ ಸಭೆ ಸ್ಥಳ ಹಾಗೂ ದಿನಾಂಕ ಘೋಷಣೆ ಲೇಟ್ ಆಗುತ್ತಾ ಬಂದಿತ್ತು. ಕಿತ್ತಾಟದ ಪರಿಣಾಮ ಲೋಕಸಭಾ ಚುನಾವಣೆ ಮೇಲೆ ಆಗೋದು ಪಕ್ಕಾ ಅನ್ನೋ ಮಾತು ಕೇಳಿಬರುತ್ತಿತ್ತು. ಆದರೆ ಕೊನೆಗೆ ಮಾತುಕತೆ ಫೈನಲ್ ಆಗಿ, ಅಂತಿಮವಾಗಿ ಮಮತಾ ಬ್ಯಾನರ್ಜಿ ಬಣ ಗೆದ್ದಿದೆ. ಬಿಹಾರದಲ್ಲೇ ವಿಪಕ್ಷ ನಾಯಕರ ಸಭೆ ಭರ್ಜರಿಯಾಗಿ ನಡೆಯಲಿದೆ. ಆದರೆ ಮಮತಾ ಬರ್ತಾರ? ಬರಲ್ವಾ? ಅನ್ನೋ ಅನುಮಾನ ಕಾಡುತ್ತಿತ್ತು. ಇದೀಗ ಮಮತಾ ಈ ವಿಚಾರದಲ್ಲಿ ಗೆದ್ದು ಬೀಗಿದ್ದಾರೆ.

ಕಾಂಗ್ರೆಸ್ ನೇತೃತ್ವ ಬೇಡ ಅಂದಿದ್ರಾ ಮಮತಾ?
ಬಿಹಾರ ಸಿಎಂ ವಿರೋಧ ಪಕ್ಷಗಳ ನಾಯಕರನ್ನ ಒಗ್ಗೂಡಿಸುವ ಕೆಲಸ ಮಾಡುತ್ತಿದ್ರೆ, ಮತ್ತೊಂದು ಕಡೆಯಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನಿತೀಶ್ ಕಾರ್ಯಕ್ಕೆ ಹೆಗಲು ನೀಡುತ್ತಿದ್ದಾರೆ. ಹೀಗೆ ವಿಪಕ್ಷ ನಾಯಕರು ತಮ್ಮ ನಡುವಿನ ಭಿನ್ನಾಭಿಪ್ರಾಯ ಮರೆತು ಒಂದಾಗುತ್ತಿದ್ದಾರೆ. ಆ ಮೂಲಕ ಮುಂಬರುವ ದಿನಗಳಲ್ಲಿ ಒಗ್ಗಟ್ಟಿನ ಹೋರಾಟ ಪ್ರದರ್ಶಿಸಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ನೇತೃತ್ವ ತೋರಿಸುವುದು ಬೇಡ ಅನ್ನೋದು ಮಮತಾ ಅವರ ಪ್ಲ್ಯಾನ್ ಎನ್ನಲಾಗುತ್ತಿದೆ.
ಒಟ್ನಲ್ಲಿ ಅಂತೂ ತಮ್ಮ ನಡುವಿನ ಕಿರಿಕ್ ಸರಿ ಮಾಡಿಕೊಂಡು ವಿಪಕ್ಷಗಳ ನಾಯಕರು ಒಂದೇ ಕಡೆ ಸೇರುತ್ತಿದ್ದಾರೆ. ಈ ಸಭೆಗೆ ಬಿಹಾರ ಸಿಎಂ ಹಾಗೂ ಪ್ರಧಾನಿ ಮೋದಿ ಪಕ್ಷದ ಮಾಜಿ ಸ್ನೇಹಿತ ನಿತೀಶ್ ಕುಮಾರ್ ನೇತೃತ್ವ ವಹಿಸುತ್ತಿದ್ದಾರೆ. ಮತ್ತೊಂದ್ಕಡೆ 2024ರ ಲೋಕಸಭೆ ಚುನಾವಣೆಗೆ ಕೂಡ ಕೌಂಟ್‌ಡೌನ್ ಶುರುವಾಗಿದ್ದು, ಈ ಬಾರಿ ಬಿಜೆಪಿಗೆ ಸೋಲು ಕರುಣಿಸಬೇಕು ಅಂತಾ ವಿರೋಧ ಪಕ್ಷಗಳು ಪಣತೊಟ್ಟಿವೆ. ಹಾಗೇ ಬಿಜೆಪಿ ಕೂಡ ವಿಪಕ್ಷಗಳ ಒಗಟ್ಟಿನ ಮಂತ್ರವನ್ನು ಅತಿಸೂಕ್ಷ್ಮವಾಗಿ ಪರಿಗಣಿಸಿದ್ದು, ಮುಂದೆ ಏನೆಲ್ಲಾ ಆಗುತ್ತೆ ಅನ್ನೋದನ್ನ ಕಾದು ನೋಡಬೇಕು.












Click it and Unblock the Notifications