ಮಲ್ಯ, ಮೋದಿ, ಚೋಕ್ಸಿಗೆ ತಟ್ಟಲಿದೆ 'ಇಡಿ'ಯ ಹೊಸ ಕಾನೂನಿನ ಬಿಸಿ
ನವದೆಹಲಿ, ಏಪ್ರಿಲ್ 25: ಜಾರಿ ನಿರ್ದೇಶನಾಲಯ 'ಫುಜಿಟಿವ್ ಎಕನಾಮಿಕ್ ಅಫೆಂಡರ್ಸ್ ಆರ್ಡಿನೆನ್ಸ್' ಜಾರಿಗೆ ತರಲು ಮುಂದಾಗಿದ್ದು ಇದು ದೇಶ ಬಿಟ್ಟಿರುವ ಆರೋಪಿ ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಗೆ ಕಂಟಕ ತರಲಿದೆ.
ಮ್ಯಾರಥಾನ್ ಸಭೆಯ ನಂತರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಲೇವಾದೇವಿ ತಡೆ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದು, ದೇಶ ಬಿಟ್ಟಿರುವ ಉದ್ಯಮಿಗಳನ್ನು 'ತಲೆ ಮರೆಸಿಕೊಂಡಿರುವವರು' ಎಂದು ಘೋಷಿಸುವಂತೆ ಬೇಡಿಕೆ ಸಲ್ಲಿಸಲಿದೆ. ಇದಕ್ಕಾಗಿ ಇತ್ತೀಚೆಗೆ ಸಂಪುಟ ಸಭೆ ಒಪ್ಪಿಗೆ ನೀಡಿದ ಹೊಸ ಕಾನೂನನ್ನು ಇಡಿ ಉಲ್ಲೇಖಿಸಿದೆ.
ಹೊಸ ಕಾನೂನು ಜಾರಿಗೆ ಬರುವ ಮೊದಲು, ಜಪ್ತಿ ಮಾಡಿರುವ ಆಸ್ತಿಗೆ ತಲೆ ಮರೆಸಿಕೊಂಡಿರುವ ಆರೋಪಿಗಳೇ ಮಾಲಿಕರಾಗಿರುತ್ತಾರೆ. ಆದರೆ ಹೊಸ ಕಾನೂನಿನ ಪ್ರಕಾರ ಜಪ್ತಿ ಮಾಡಿದ ಆಸ್ತಿಗಳು ಕೇಂದ್ರ ಸರಕಾರದ ವಶಕ್ಕೆ ಸೇರಲಿವೆ, ಮತ್ತು ವಂಚನೆಯ ಮೊತ್ತವನ್ನು ಮರು ವಶಪಡಿಸಿಕೊಳ್ಳಲು ಇವುಗಳನ್ನು ಹರಾಜು ಹಾಕಬಹುದಾಗಿದೆ.

ಈ ಹೊಸ ಕಾನೂನಿನ ಬಿಸಿ ಮೊದಲಿಗೆ ವಿಜಯ್ ಮಲ್ಯಗೆ ತಟ್ಟಿಲಿದೆ. ಕಾರಣ ಈಗಾಗಲೇ ವಿಜಯ್ ಮಲ್ಯ ವಿರುದ್ಧ ಬಂಧನ ವಾರಂಟ್ ಜಾರಿಯಾಗಿದೆ ಮತ್ತು ಚಾರ್ಜ್ ಶೀಟನ್ನೂ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಇನ್ನು ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಮೊದಲಿಗೆ ಚಾರ್ಜ್ ಶೀಟ್ ಸಲ್ಲಿಸಬೇಕಾಗಿದೆ.
ಮೂರು ಜನರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ 12,000 ಕೋಟಿ ರೂಪಾಯಿ ಆಸ್ತಿಯನ್ನು ಪತ್ತೆ ಹಚ್ಚಿದ್ದು ಇದನ್ನು ವಶಕ್ಕೆ ಪಡೆದುಕೊಂಡಿದೆ. ಈ ಆಸ್ತಿಗಳ ಹರಾಜಿಗೆ ನ್ಯಾಯಾಲಯ ಒಪ್ಪಿಗೆ ನೀಡಬೇಕಾಗಿದೆ. ಒಪ್ಪಿಗೆ ನೀಡಿದ ನಂತರ ಇವುಗಳನ್ನು ಹರಾಜು ಹಾಕಬಹುದು.












Click it and Unblock the Notifications