700 ರೈತರ ಸಾವಿನ ಲೆಕ್ಕವಿಡದ ಕೇಂದ್ರಕ್ಕೆ ಕೊವಿಡ್ ಸಾವಿನ ಲೆಕ್ಕ ಹೇಗೆ ಸಿಕ್ಕಿತು?: ಖರ್ಗೆ
ನವದೆಹಲಿ, ಡಿಸೆಂಬರ್ 1: ದೆಹಲಿಯಲ್ಲಿ ಪ್ರತಿಭಟನಾನಿರತ ರೈತರ ಸಾವಿನ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎನ್ನುವ ಮೂಲಕ ಕೇಂದ್ರ ಸರ್ಕಾರವು ರೈತರಿಗೆ ಅವಮಾನ ಮಾಡಿದೆ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದ್ದಾರೆ.
ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದರು. "ಮೂರು ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ನಡೆಸಿದ ಪ್ರತಿಭಟನೆಯಲ್ಲಿ 700ಕ್ಕೂ ಹೆಚ್ಚು ರೈತರು ಪ್ರಾಣ ಬಿಟ್ಟಿದ್ದಾರೆ. ರೈತರ ಸಾವಿನ ಬಗ್ಗೆ ಯಾವುದೇ ರೀತಿ ದಾಖಲೆಗಳಿಲ್ಲ ಎಂದು ಕೇಂದ್ರ ಸರ್ಕಾರವು ಹೇಗೆ ತಾನೇ ಹೇಳುವುದಕ್ಕೆ ಸಾಧ್ಯ," ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.
"ಕೇಂದ್ರ ಸರ್ಕಾರದ ಬಳಿ 700 ರೈತರ ಸಾವಿನ ಬಗ್ಗೆ ದಾಖಲೆಗಳು ಇಲ್ಲದಿದ್ದರೆ, ಅವರು ಸಾಂಕ್ರಾಮಿಕ ಪಿಡುಗಿನ ಕಾಲದಲ್ಲಿ ಲಕ್ಷಗಟ್ಟಲೆ ಜನರ ಸಾವಿನ ಅಂಕಿ-ಅಂಶಗಳನ್ನು ಹೇಗೆ ಸಂಗ್ರಹಿಸಿದರು. ದೇಶದಲ್ಲಿ ಕಳೆದ ಎರಡು ವರ್ಷಗಳಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ 50 ಲಕ್ಷಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಕೇಂದ್ರ ಸರ್ಕಾರದ ಪ್ರಕಾರ, ಕೇವಲ 4 ಲಕ್ಷ ಜನರು ಮಾತ್ರ ಕೊವಿಡ್-19 ಸೋಂಕಿನಿಂದ ಮೃತಪಟ್ಟಿದ್ದಾರೆ," ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

ಕೇಂದ್ರ ಕೃಷಿ ಸಚಿವರು ಹೇಳಿದ್ದೇನು?
ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸಿದ ರೈತರ ಸಾವಿನ ಕುರಿತಾಗಿ ಸರ್ಕಾರದ ಬಳಿ ಯಾವುದೇ ದಾಖಲೆಗಳಿಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸಂಸತ್ ಅಧಿವೇಶನಕ್ಕೆ ಮಾಹಿತಿ ನೀಡಿದ್ದರು. ಚಳಿಗಾಲ ಅಧಿವೇಶನದ ಮೂರನೇ ದಿನ ಪ್ರತಿಪಕ್ಷಗಳ ಪ್ರಶ್ನೆಗೆ ಸಚಿವರು ಲಿಖಿತ ರೂಪದಲ್ಲಿ ಪ್ರತಿಕ್ರಿಯೆ ನೀಡಿದರು. ಕಳೆದ ಒಂದು ವರ್ಷದಿಂದ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸಿದರ ರೈತರಲ್ಲಿ ಕೆಲವು ಮೃತಪಟ್ಟಿದ್ದು, ಅವರ ಕುಟುಂಬಕ್ಕೆ ಯಾವಾಗ ಪರಿಹಾರ ನೀಡುತ್ತೀರಿ ಎಂಬ ಪ್ರಶ್ನೆಗೆ ಸಚಿವರು ಉತ್ತರಿಸಿದರು. ""ಕೃಷಿ ಸಚಿವಾಲಯವು ವಿಷಯದಲ್ಲಿ ಯಾವುದೇ ದಾಖಲೆಯನ್ನು ಹೊಂದಿಲ್ಲ ಮತ್ತು ಆದ್ದರಿಂದ ಪ್ರಶ್ನೆ ಉದ್ಭವಿಸುವುದಿಲ್ಲ," ಎಂದಿದ್ದರು.

ಸಂಸತ್ ಅಧಿವೇಶನದ ಮೊದಲ ದಿನವೇ ಅಂಗೀಕಾರ
ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳ ರದ್ಧತಿ ಮಸೂದೆಯನ್ನು ಸಂಸತ್ತಿನ ಅಧಿವೇಶನದ ಮೊದಲ ದಿನವೇ ಉಭಯ ಸದನಗಳಲ್ಲಿ ಅಂಗೀಕರಿಸಲಾಗಿದೆ. ಹೊಸ ಮಸೂದೆಯ ಮೇಲೆ ಚರ್ಚೆ ನಡೆಸುವಂತೆ ಪ್ರತಿಪಕ್ಷಗಳು ಪಟ್ಟು ಹಿಡಿದು ಕುಳಿತಿದ್ದವು. ಇದರ ಹೊರತಾಗಿಯೂ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕೃಷಿ ಕಾಯ್ದೆಗಳ ರದ್ದತಿ ಮಸೂದೆ, 2021 ಅನ್ನು ಲೋಕಸಭೆಯಲ್ಲಿ ಮಂಡಿಸಿದರು. ಧ್ವನಿಮತದ ಮೂಲಕ ಕೇಂದ್ರ ಸರ್ಕಾರವು ಮಸೂದೆಯನ್ನು ಅಂಗೀಕರಿಸಿದೆ. ತದನಂತರ ರಾಜ್ಯಸಭೆಯಲ್ಲೂ ಯಾವುದೇ ರೀತಿ ಚರ್ಚೆಯಿಲ್ಲದೇ ಅಂಗೀಕರಿಸಲಾಗಿತ್ತು.

ಎಲ್ಲ ಬೇಡಿಕೆ ಬಗ್ಗೆ ಚರ್ಚಿಸಲು ರೈತರ ಕರೆ
ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನ ಲೋಕಸಭೆಯಲ್ಲಿ ಕೃಷಿ ಕಾಯ್ದೆಗಳ ರದ್ಧತಿ ಮಸೂದೆ, 2021 ಅನ್ನು ಅಂಗೀಕರಿಸಲಾಗಿದೆ. ಆದರೆ ನಮ್ಮ ಬೇಡಿಕೆಗಳು ಇನ್ನೂ ಪೂರ್ಣವಾಗಿಲ್ಲ ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ಟಿಕಾಯತ್ ಹೇಳಿದ್ದರು. ದೇಶದಲ್ಲಿ ಯಾವುದೇ ಪ್ರತಿಭಟನೆಗಳು ನಡೆಯಬಾರದು ಎಂದು ಕೇಂದ್ರ ಸರ್ಕಾರ ಬಯಸುತ್ತದೆ. ಆದರೆ ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಇತರ ವಿಷಯಗಳು ಕುರಿತು ಯಾವುದೇ ಚರ್ಚೆ ನಡೆಯದ ಹೊರತಾಗಿ ನಾವು ಪ್ರತಿಭಟನಾ ಸ್ಥಳದಿಂದ ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಸಿದ್ದರು.

ರೈತ ಹೋರಾಟದಲ್ಲಿ 700ಕ್ಕೂ ಹೆಚ್ಚು ರೈತರ ಸಾವು
ಕೇಂದ್ರ ಸರ್ಕಾರದ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ 2020, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ 2020, (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ 2020 ಅನ್ನು ರದ್ದುಗೊಳಿಸುವುದಕ್ಕಾಗಿ ಕೃಷಿ ಕಾಯ್ದೆ ರದ್ಧತಿ 2021ರ ಮಸೂದೆಯನ್ನು ರಚಿಸಲಾಗಿತ್ತು. ಈ ಹಿಂದೆ ನವೆಂಬರ್ 24ರಂದು ಈ ಸಂಬಂಧ ಕೇಂದ್ರ ಸಂಪುಟದ ಅನುಮೋದನೆಯನ್ನು ಪಡೆದುಕೊಳ್ಳಲಾಗಿತ್ತು.
ಸಂಸತ್ತಿನಲ್ಲಿ ಸಚಿವರ ಉತ್ತರ: ದೆಹಲಿ ಗಡಿಯಲ್ಲಿ ರೈತರ ಸಾವಿನ ದಾಖಲೆಯಿಲ್ಲ, ಪರಿಹಾರ ಕೊಡಲ್ಲಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶದ ವಿವಿಧ ರೈತ ಸಂಘಗಳ ಆಶ್ರಯದಲ್ಲಿ ಸಾವಿರಾರು ರೈತರು ಕಳೆದ 2020ರ ನವೆಂಬರ್ 26 ರಿಂದ ದೆಹಲಿಯ ಘಾಜಿಪುರ, ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಮೇಲೆ ಖಾಸಗೀಕರಣವನ್ನು ಹೇರುತ್ತಿರುವುದಕ್ಕೆ ಹಾಗೂ ಕಾರ್ಪೊರೇಟ್‌ಗಳ ಪರ ಒಲವು ಹೊಂದಿರುವ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದಿರುವ ಹಾಗೂ ಈಗಲೂ ಮುಂದುವರಿದಿರುವ ರೈತರ ಆಂದೋಲಯದಲ್ಲಿ 700ಕ್ಕೂ ಹೆಚ್ಚು ರೈತರು ಪ್ರಾಣಬಿಟ್ಟಿದ್ದರು ಎಂದು ರೈತ ಮುಖಂಡರು ಹೇಳಿದ್ದು, ಎಲ್ಲರ ಕುಟುಂಬಕ್ಕೂ ಪರಿಹಾರ ನೀಡುವಂತೆ ಪಟ್ಟು ಹಿಡಿದು ಕುಳಿತ್ತಿದ್ದಾರೆ.












Click it and Unblock the Notifications