• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಸತ್ತಿನಲ್ಲಿ ಸಚಿವರ ಉತ್ತರ: ದೆಹಲಿ ಗಡಿಯಲ್ಲಿ ರೈತರ ಸಾವಿನ ದಾಖಲೆಯಿಲ್ಲ, ಪರಿಹಾರ ಕೊಡಲ್ಲ

|
Google Oneindia Kannada News

ನವದೆಹಲಿ, ಡಿಸೆಂಬರ್ 1: ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸಿದ ರೈತರ ಸಾವಿನ ಕುರಿತಾಗಿ ಸರ್ಕಾರದ ಬಳಿ ಯಾವುದೇ ದಾಖಲೆಗಳಿಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸಂಸತ್ ಅಧಿವೇಶನಕ್ಕೆ ಮಾಹಿತಿ ನೀಡಿದರು.

ಚಳಿಗಾಲ ಅಧಿವೇಶನದ ಮೂರನೇ ದಿನ ಪ್ರತಿಪಕ್ಷಗಳ ಪ್ರಶ್ನೆಗೆ ಸಚಿವರು ಲಿಖಿತ ರೂಪದಲ್ಲಿ ಪ್ರತಿಕ್ರಿಯೆ ನೀಡಿದರು. ಕಳೆದ ಒಂದು ವರ್ಷದಿಂದ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸಿದರ ರೈತರಲ್ಲಿ ಕೆಲವು ಮೃತಪಟ್ಟಿದ್ದು, ಅವರ ಕುಟುಂಬಕ್ಕೆ ಯಾವಾಗ ಪರಿಹಾರ ನೀಡುತ್ತೀರಿ ಎಂಬ ಪ್ರಶ್ನೆಗೆ ಸಚಿವರು ಉತ್ತರಿಸಿದರು. "ಕೃಷಿ ಸಚಿವಾಲಯವು ವಿಷಯದಲ್ಲಿ ಯಾವುದೇ ದಾಖಲೆಯನ್ನು ಹೊಂದಿಲ್ಲ ಮತ್ತು ಆದ್ದರಿಂದ ಪ್ರಶ್ನೆ ಉದ್ಭವಿಸುವುದಿಲ್ಲ," ಎಂದರು.

ಕಳೆದ 2020ರ ನವೆಂಬರ್ 26 ರಿಂದ ರೈತರು ದೆಹಲಿಯ ಮೂರು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಿಂಘು, ಟಿಕ್ರಿ ಮತ್ತು ಗಾಜಿಪುರ ಗಡಿಯಲ್ಲಿ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾಗ 700ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ ಎಂದು ರೈತ ಮುಖಂಡರು ಹೇಳುತ್ತಿದ್ದಾರೆ. ಮೈಕೊರೆಯುವ ಚಳಿ, ನೈರ್ಮಲ್ಯ ಮತ್ತು ಆತ್ಮಹತ್ಯೆಯಿಂದ ರೈತರು ಪ್ರಾಣ ಬಿಟ್ಟಿದ್ದಾರೆ ಎಂದು ರೈತ ಮುಖಂಡರು ತಿಳಿಸಿದ್ದು, ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆಯೂ ಸರ್ಕಾರದ ಎದುರಿಗೆ ಬೇಡಿಕೆ ಇಟ್ಟಿದ್ದಾರೆ.

ಎಲ್ಲ ಬೇಡಿಕೆ ಬಗ್ಗೆ ಚರ್ಚಿಸಲು ರೈತರ ಕರೆ:

ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನ ಲೋಕಸಭೆಯಲ್ಲಿ ಕೃಷಿ ಕಾಯ್ದೆಗಳ ರದ್ಧತಿ ಮಸೂದೆ, 2021 ಅನ್ನು ಅಂಗೀಕರಿಸಲಾಗಿದೆ. ಆದರೆ ನಮ್ಮ ಬೇಡಿಕೆಗಳು ಇನ್ನೂ ಪೂರ್ಣವಾಗಿಲ್ಲ ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ಟಿಕಾಯತ್ ಹೇಳಿದ್ದರು. ದೇಶದಲ್ಲಿ ಯಾವುದೇ ಪ್ರತಿಭಟನೆಗಳು ನಡೆಯಬಾರದು ಎಂದು ಕೇಂದ್ರ ಸರ್ಕಾರ ಬಯಸುತ್ತದೆ. ಆದರೆ ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಇತರ ವಿಷಯಗಳು ಕುರಿತು ಯಾವುದೇ ಚರ್ಚೆ ನಡೆಯದ ಹೊರತಾಗಿ ನಾವು ಪ್ರತಿಭಟನಾ ಸ್ಥಳದಿಂದ ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಸಿದ್ದರು.

ಕನಿಷ್ಠ ಬೆಂಬಲ ಬೆಲೆ ಬೇಡಿಕೆ ಈಡೇರಿಕೆ:

"ಕೇಂದ್ರ ಸರ್ಕಾರ ರಚಿಸುತ್ತಿರುವ ಈ ಸಮಿತಿಯ ಸಂವಿಧಾನದೊಂದಿಗೆ ಕನಿಷ್ಛ ಬೆಂಬಲ ಬೆಲೆ(MSP) ಮೇಲಿನ ರೈತರ ಬೇಡಿಕೆಯನ್ನು ಈಡೇರಿಸುತ್ತದೆ. ಹೊಲಗದ್ದೆಯಲ್ಲಿ ಪೈರಿನ ನಂತರ ಕಸ ಸುಡುವುದನ್ನು ಅಪರಾಧ ಅಲ್ಲದಂತೆ ಪರಿಗಣಿಸಲು ರೈತ ಸಂಘಟನೆಗಳು ಒತ್ತಾಯಿಸಿದ್ದವು. ಭಾರತ ಸರ್ಕಾರ ಈ ಬೇಡಿಕೆಯನ್ನೂ ಒಪ್ಪಿಕೊಂಡಿದೆ. ಹೀಗಿರುವಾಗ ರೈತರು ಆಂದೋಲನವನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ. ರೈತರು ತಮ್ಮ ಆಂದೋಲನವನ್ನು ಕೊನೆಗೊಳಿಸಿ ಮನೆಗೆ ಹೋಗಬೇಕೆಂದು ನಾನು ಒತ್ತಾಯಿಸುತ್ತೇನೆ," ಎಂದು ತೋಮರ್ ಹೇಳಿದ್ದರು.

ಕೇಂದ್ರ ಸರ್ಕಾರದ ಘೋಷಣೆಗೆ ಪ್ರತಿಕ್ರಿಯಿಸಿದ ರೈತರ ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮುಖಂಡ ಬಲ್ಬೀರ್ ಸಿಂಗ್ ರಾಜೇವಾಲ್, "ನಾವು ರಚಿಸಲಾದ ಸಮಿತಿಯ ವಿವರಗಳನ್ನು ಓದಿಲ್ಲ. ವಿವರಗಳ ಬಗ್ಗೆ ನಮಗೆ ತಿಳಿಸಿದ ನಂತರವೇ ನಾವು ಪ್ರತಿಕ್ರಿಯಿಸುತ್ತೇವೆ ಮತ್ತು ಕ್ರಮ ಕೈಗೊಳ್ಳುತ್ತೇವೆ," ಎಂದು ತಿಳಿಸಿದ್ದರು.

No record of farmers deaths due to protest against Farm Laws; Govt tells Parliament

ಸಂಸತ್ ಅಧಿವೇಶನದ ಮೊದಲ ದಿನವೇ ಅಂಗೀಕಾರ:

ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳ ರದ್ಧತಿ ಮಸೂದೆಯನ್ನು ಸಂಸತ್ತಿನ ಅಧಿವೇಶನದ ಮೊದಲ ದಿನವೇ ಉಭಯ ಸದನಗಳಲ್ಲಿ ಅಂಗೀಕರಿಸಲಾಗಿದೆ. ಹೊಸ ಮಸೂದೆಯ ಮೇಲೆ ಚರ್ಚೆ ನಡೆಸುವಂತೆ ಪ್ರತಿಪಕ್ಷಗಳು ಪಟ್ಟು ಹಿಡಿದು ಕುಳಿತಿದ್ದವು. ಇದರ ಹೊರತಾಗಿಯೂ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕೃಷಿ ಕಾಯ್ದೆಗಳ ರದ್ದತಿ ಮಸೂದೆ, 2021 ಅನ್ನು ಲೋಕಸಭೆಯಲ್ಲಿ ಮಂಡಿಸಿದರು. ಧ್ವನಿಮತದ ಮೂಲಕ ಕೇಂದ್ರ ಸರ್ಕಾರವು ಮಸೂದೆಯನ್ನು ಅಂಗೀಕರಿಸಿದೆ. ತದನಂತರ ರಾಜ್ಯಸಭೆಯಲ್ಲೂ ಯಾವುದೇ ರೀತಿ ಚರ್ಚೆಯಿಲ್ಲದೇ ಅಂಗೀಕರಿಸಲಾಗಿತ್ತು.

ರೈತರ ಕೆಂಗಣ್ಣಿಗೆ ಗುರಿಯಾಗಿದ್ದ ಕೃಷಿ ಕಾಯ್ದೆಗಳು:

ಕೇಂದ್ರ ಸರ್ಕಾರದ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ 2020, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ 2020, (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ 2020 ಅನ್ನು ರದ್ದುಗೊಳಿಸುವುದಕ್ಕಾಗಿ ಕೃಷಿ ಕಾಯ್ದೆ ರದ್ಧತಿ 2021ರ ಮಸೂದೆಯನ್ನು ರಚಿಸಲಾಗಿತ್ತು. ಈ ಹಿಂದೆ ನವೆಂಬರ್ 24ರಂದು ಈ ಸಂಬಂಧ ಕೇಂದ್ರ ಸಂಪುಟದ ಅನುಮೋದನೆಯನ್ನು ಪಡೆದುಕೊಳ್ಳಲಾಗಿತ್ತು.

ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶದ ವಿವಿಧ ರೈತ ಸಂಘಗಳ ಆಶ್ರಯದಲ್ಲಿ ಸಾವಿರಾರು ರೈತರು ಕಳೆದ 2020ರ ನವೆಂಬರ್ 26 ರಿಂದ ದೆಹಲಿಯ ಘಾಜಿಪುರ, ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಮೇಲೆ ಖಾಸಗೀಕರಣವನ್ನು ಹೇರುತ್ತಿರುವುದಕ್ಕೆ ಹಾಗೂ ಕಾರ್ಪೊರೇಟ್‌ಗಳ ಪರ ಒಲವು ಹೊಂದಿರುವ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದಿರುವ ಹಾಗೂ ಈಗಲೂ ಮುಂದುವರಿದಿರುವ ರೈತರ ಆಂದೋಲಯದಲ್ಲಿ 700ಕ್ಕೂ ಹೆಚ್ಚು ರೈತರು ಪ್ರಾಣಬಿಟ್ಟಿದ್ದರು ಎಂದು ರೈತ ಮುಖಂಡರು ಹೇಳಿದ್ದು, ಎಲ್ಲರ ಕುಟುಂಬಕ್ಕೂ ಪರಿಹಾರ ನೀಡುವಂತೆ ಪಟ್ಟು ಹಿಡಿದು ಕುಳಿತಿದ್ದಾರೆ.

English summary
Union Agriculture Minister Narendra Singh Tomar informed Parliament that the govt has no record of the deaths of the farmers protesting against farm laws, so no financial assistance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X