ಲೋಕಪಾಲ್ ಆಯ್ಕೆ ಸಮಿತಿಗೆ ಖರ್ಗೆ ಗೈರು, ಮೋದಿಗೆ ಪತ್ರ
ನವದೆಹಲಿ, ಸೆಪ್ಟೆಂಬರ್ 19 : ಲೋಕಪಾಲ್ ಆಯ್ಕೆ ಸಂಬಂಧ ನಡೆಯುವ ಸಭೆಗೆ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಸಹ ಗೈರು ಹಾಜರಾಗಲಿದ್ದಾರೆ. ಲೋಕಪಾಲ್ ಆಯ್ಕೆ ಸಮಿತಿ ಕುರಿತು ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ನರೇಂದ್ರ ಮೋದಿ ಅವರಿಗೆ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಬುಧವಾರ ಪತ್ರ ಬರೆದಿದ್ದಾರೆ. ಆಯ್ಕೆ ಸಮಿತಿಯಲ್ಲಿ ಪ್ರಮುಖ ಪ್ರತಿಪಕ್ಷದ ನಾಯಕರನ್ನು ಸದಸ್ಯರು ಎಂದು ಪರಿಗಣಿಸುವ ತನಕ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಲೋಕಪಾಲ್ ಆಯ್ಕೆ ಸಮಿತಿ ಸಭೆಗೆ ವಿಶೇಷ ಆಹ್ವಾನಿತರಾಗಿ ಕರೆದಿದ್ದಕ್ಕೆ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದೆ ಈ ಕುರಿತು ಬರೆದ ಪತ್ರವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಖರ್ಗೆ ಇಂದಿನ ಪತ್ರದಲ್ಲಿ ದೂರಿದ್ದಾರೆ.

ಲೋಕಪಾಲ್ ಕಾಯ್ದೆ 2013ರ ಅನ್ವಯ ಪ್ರಮುಖ ವಿರೋಧ ಪಕ್ಷದ ನಾಯಕನ್ನು ಸಮಿತಿಗೆ ಸೇರಿಸಿಕೊಳ್ಳಬೇಕು. ಲೋಕಪಾಲ ಕಾಯ್ದೆ ಸೆಕ್ಷನ್ 4ರ ಅನ್ವಯ ವಿಶೇಷ ಆಹ್ವಾನಿತರಾಗಿ ಆಹ್ವಾನಿಸಲು ಅವಕಾಶವಿಲ್ಲ ಎಂದು ಖರ್ಗೆ ತಿಳಿಸಿದ್ದಾರೆ.
ಮಾರ್ಚ್‌ನಲ್ಲಿ ನಡೆದ ಲೋಕಪಾಲ್ ಆಯ್ಕೆ ಸಮಿತಿ ಸಭೆಗೂ ಮಲ್ಲಿಕಾರ್ಜುನ ಖರ್ಗೆ ಗೈರು ಹಾಜರಾಗಿದ್ದರು. ಆಗಲೂ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದ ಅವರು ವಿಶೇಷ ಆಹ್ವಾನಿತರಾಗಿ ಸಭೆಗೆ ಆಹ್ವಾನಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.












Click it and Unblock the Notifications