ಕಾಶ್ಮೀರಿ ಯುವಕನನ್ನು ಜೀಪಿಗೆ ಕಟ್ಟಿದ 'ಮೇಜರ್'ಗೆ ಸೇನೆಯಿಂದ ಸನ್ಮಾನ
ಬಂಡುಕೋರರ ವಿರುದ್ಧ ಕಾರ್ಯಾಚರಣೆ ನಡೆಸಿದ್ದಕ್ಕೆ ಮೇಜರ್ ಗೆ ಪದಕ ಪ್ರದಾನ ಮಾಡಲಾಗಿದೆ. ಆದರೆ ಕಾಶ್ಮೀರಿ ಯುವಕನನ್ನು ಜೀಪಿಗೆ ಕಟ್ಟಿದ್ದಕ್ಕೇ ಈ ಸನ್ಮಾನವೋ ಎಂಬುದನ್ನು ಸೇನೆ ಸ್ಪಷ್ಟಪಡಿಸಿಲ್ಲ.
ಕಾಶ್ಮೀರ, ಮೇ 22: ಕಲ್ಲು ತೂರಾಟಗಾರರನ್ನು ಹಾದು ಹೋಗಲು ಸೇನೆಯ ಜೀಪಿನ ಮುಂಭಾಗಕ್ಕೆ ಕಾಶ್ಮೀರಿ ಯುವಕನನ್ನೇ ಕಟ್ಟಿ ಮಾನವ ಗುರಾಣಿಯಂತೆ ಬಳಸಿಕೊಂಡ ಮೇಜರ್ ತರುಣ್ ಗೊಗೋಯಿಗೆ ಸೇನೆಯೇ ಸನ್ಮಾನ ಮಾಡಿದೆ.
ಗಲಭೆ ನಿಯಂತ್ರಣ ಕಾರ್ಯಾಚರಣೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಕ್ಕೆ ಮೇಜರ್ ಗೆ ಸೇನಾ ಮುಖ್ಯಸ್ಥರ ಮೆಚ್ಚುಗೆ ಪತ್ರ ಹಾಗೂ ಪದಕ ಪ್ರದಾನ ಮಾಡಲಾಗಿದೆ. ಆದರೆ ಕಾಶ್ಮೀರಿ ಯುವಕನನ್ನು ಜೀಪಿಗೆ ಕಟ್ಟಿದ್ದಕ್ಕೇ ಈ ಸನ್ಮಾನವೋ ಎಂಬುದನ್ನು ಸೇನೆ ಸ್ಪಷ್ಟಪಡಿಸಿಲ್ಲ.

ಏಪ್ರಿಲ್ 9ರಂದು ಕಾಶ್ಮೀರದಲ್ಲಿ ಉಪ ಚುನಾವಣೆ ವೇಳೆ ಬುದ್ಗಾಮ್ ಜಿಲ್ಲೆಯಲ್ಲಿ ಫಾರೂಕ್ ಅಹ್ಮದ್ ಧರ್ ರನ್ನು ಸೇನೆಯ ವಾಹನದ ಮುಂಭಾಗಕ್ಕೆ ಗುರಾಣಿಯಂತೆ ಕಟ್ಟಲಾಗಿತ್ತು. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಾದ ನಂತರ ಸೇನೆಯ ವಿರುದ್ಧ ಮಾನವ ಹಕ್ಕುಗಳ ಹೋರಾಟಗಾರರು ವಾಗ್ದಾಳಿ ನಡೆಸಿದ್ದರು.
ಈ ಪ್ರಕರಣ ಸಂಬಂಧ ಭೂಸೇನೆಯ ನ್ಯಾಯಾಲಯ ವಿಚಾರಣೆಯನ್ನೂ ಆರಂಭಿಸಿತ್ತು. ಆದರೆ ಇದರ ತನಿಖಾ ವರದಿ ಇನ್ನೂ ಹೊರ ಬಿದ್ದಿಲ್ಲ. ಇನ್ನು ಶುಕ್ರವಾರ ಮಾತನಾಡಿದ್ದ ಅರುಣ್ ಜೇಟ್ಲಿ ಚುನಾವಣಾ ಕೆಲಸಕ್ಕೆ ತೆರಳಿದ ಸಿಬ್ಬಂದಿಗಳನ್ನು ರಕ್ಷಿಸುವುದು ಮಿಲಿಟರಿ ಅಧಿಕಾರಿಯ ಕೆಲಸ ಎಂದು ಹೇಳಿ ಸೇನಾಧಿಕಾರಿಯ ಕ್ರಮವನ್ನು ಪರೋಕ್ಷವಾಗಿ ಬೆಂಬಲಿಸಿದ್ದರು.
ಇದಲ್ಲದೆ ಹಲವು ನಿವೃತ್ತಿ ಅಧಿಕಾರಿಗಳು ಹಾಗೂ ಸೇನಾಧಿಕಾರಿಗಳೇ ಗೊಗೋಯಿ ನಡೆಯನ್ನು ಬೆಂಬಲಿಸಿದ್ದರು. ಮಾತ್ರವಲ್ಲ ಕಾಶ್ಮೀರದಲ್ಲಿ ಕಲ್ಲು ತೂರುವವರಿಗೆ ಹೀಗೆಯೇ ಮಾಡಬೇಕು ಎಂದೂ ಹೇಳಿದ್ದರು.












Click it and Unblock the Notifications