Government Employee: NPSನಲ್ಲಿ ಮಹತ್ವದ ಬದಲಾವಣೆ, ಶೀಘ್ರವೇ ಘೋಷಣೆ
ನವದೆಹಲಿ, ಜುಲೈ 13: ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಿ ನೌಕರರು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಅಥವ ನೂತನ ಪಿಂಚಣಿ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಸರ್ಕಾರ ಇದನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಬೇಡಿಕೆಯನ್ನು ಇಡುತ್ತಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 23ರಂದು 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್‌ಗೂ ಮುನ್ನ ಸಂಪುಟ ಕಾರ್ಯದರ್ಶಿಗೆ ಪತ್ರ ಬರೆದಿರುವ ಕೇಂದ್ರ ಸರ್ಕಾರಿ ನೌಕರರು ಹಳೆ ಪಿಂಚಣಿ ಯೋಜನೆ ಮರು ಜಾರಿಗೊಳಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ.

ಸರ್ಕಾರಿ ನೌಕರರು ನೂತನ ಪಿಂಚಣಿ ಯೋಜನೆ ವಿರೋಧಿಸಿ, ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲು ಒತ್ತಾಯ ಮಾಡುತ್ತಿರುವುದರಿಂದ ಕೇಂದ್ರ ಸರ್ಕಾರ ನೂತನ ಪಿಂಚಣಿ ಯೋಜನೆಯನ್ನು ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ. ಈ ಕುರಿತು ಬಜೆಟ್‌ನಲ್ಲಿ ಘೋಷಣೆಯಾಗಬಹುದು ಎಂಬುದು ಲೆಕ್ಕಾಚಾರವಾಗಿದೆ.
ಯಾವ-ಯಾವ ಬದಲಾವಣೆ?; ಸದ್ಯದ ಮಾಹಿತಿ ಪ್ರಕಾರ ಕೇಂದ್ರ ಸರ್ಕಾರಿ ನೌಕರರು ನೂತನ ಪಿಂಚಣಿ ಯೋಜನೆಯಡಿ ನಿವೃತ್ತಿ ಬಳಿಕ ತಮ್ಮ ಕೊನೆಯ ವೇತನದ ಶೇ 50ರಷ್ಟು ಮೊತ್ತವನ್ನು ಪಿಂಚಣಿಯಾಗಿ ಪಡೆಯಲಿದ್ದಾರೆ. ಈ ಕುರಿತು ನಿಯಮ ಬದಲಾವಣೆ ಮಾಡಿ ಬಜೆಟ್‌ನಲ್ಲಿ ಘೋಷಣೆ ಮಾಡಲಾಗುತ್ತದೆ.
ಹಣಕಾಸು ಇಲಾಖೆ ಕಾರ್ಯದರ್ಶಿ ಟಿ. ವಿ. ಸೋಮನಾಥನ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಲಾಗಿತ್ತು. ಕೇಂದ್ರ ಸರ್ಕಾರಿ ನೌಕರರ ಪಿಂಚಣಿಗೆ ಸಂಬಂಧಿಸಿದಂತೆ ವರದಿ ನೀಡುವಂತೆ ಸಮಿತಿಗೆ ನಿರ್ದೇಶನ ನೀಡಲಾಗಿತ್ತು. ಈಗ ಸಮಿತಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ಗೆ ವರದಿ ನೀಡಿದ್ದು, ಪಿಂಚಣಿ ವ್ಯವಸ್ಥೆಯಲ್ಲಿನ ಬದಲಾವಣೆ ಕುರಿತು ಕೆಲವು ಶಿಫಾರಸು ಮಾಡಿದೆ.
ಹಳೆ ಪಿಂಚಣಿ ಯೋಜನೆ ಮರು ಸ್ಥಾಪನೆ ಮನವಿಯನ್ನು ಪದೇ ಪದೇ ತಳ್ಳಿ ಹಾಕುತ್ತಿರುವ ಕೇಂದ್ರ ಸರ್ಕಾರ ನೂತನ ಪಿಂಚಣಿ ಯೋಜನೆಯಲ್ಲಿಯೇ ಕೆಲವು ಬದಲಾವಣೆಯನ್ನು ಮಾಡಿ, ಅದನ್ನು ನೌಕರರಿಗೆ ನೀಡುವ ಮೂಲಕ ಅವರ ಬೇಡಿಕೆ ಈಡೇರಿಸಲು ಮುಂದಾಗಿದೆ. ಅದರಂತೆ ಸಮಿತಿ ನೀಡಿರುವ ಶಿಫಾರಸು ಜಾರಿಗೊಳಿಸಲಾಗುತ್ತದೆ.
ಜಾಗತಿಕವಾಗಿ ನೌಕರರಿಗೆ ಸಿಗುವ ಪಿಂಚಣಿ, ಆಂಧ್ರ ಪ್ರದೇಶ ರಾಜ್ಯದಲ್ಲಿ ಮಾಡಿರುವ ಪಿಂಚಣಿ ನಿಯಮ ಬದಲಾವಣೆಯನ್ನು ಟಿ. ವಿ. ಸೋಮನಾಥನ್ ನೇತೃತ್ವದಲ್ಲಿ ಸಮಿತಿ ಅಧ್ಯಯನ ಮಾಡಿದೆ. ಇದನ್ನು ಆಧರಿಸಿ ಸಮಿತಿ ಶಿಫಾರಸುಗಳನ್ನು ಮಾಡಿದೆ.
ಉದ್ಯೋಗಿಗಳು ಪಿಂಚಣಿಗಾಗಿ ತಮ್ಮ ಮೂಲ ವೇತನದ ಶೇ 10ರಷ್ಟು ಎನ್‌ಪಿಎಸ್ ಅಡಿ ಪಾವತಿ ಮಾಡುತ್ತಾರೆ. ಇದಕ್ಕೆ ಸರ್ಕಾರ ಶೇ 14ರಷ್ಟು ಮೊತ್ತವನ್ನು ಸೇರಿಸುತ್ತದೆ. ಉದ್ದೇಶಿತ ಶಿಫಾರಸು ಅನ್ವಯ 20-25 ವರ್ಷ ಸೇವೆ ಸಲ್ಲಿಸಿದ ಉದ್ಯೋಗಿಗಳು ನಿವೃತ್ತಿ ಹೊಂದುವ ತಿಂಗಳಿನಲ್ಲಿ ಪಡೆಯುವ ವೇತನದಲ್ಲಿ ಶೇ 50ರಷ್ಟನ್ನು ಪಿಂಚಣಿಯಾಗಿ ಪಡೆಯಲಿದ್ದಾರೆ.
ಈಗಾಗಲೇ 7ನೇ ವೇತನ ಆಯೋಗ ಮಾಡಿರುವ ಪಿಂಚಣಿ ಶಿಫಾರಸಿನಲ್ಲಿ ಕೂಡ ಇದೇ ಮಾದರಿಯನ್ನು ಉಲ್ಲೇಖ ಮಾಡಲಾಗಿದೆ. ಕೆಲವು ಖಾಸಗಿ ಕಂಪನಿಗಳು ಉದ್ಯೋಗಿಗಳಿಗೆ ನಿವೃತ್ತಿ ಪ್ರಯೋಜನಗಳನ್ನು ಒದಗಿಸಲು ನಿಧಿಯನ್ನು ಸ್ಥಾಪನೆ ಮಾಡುತ್ತಿವೆ. ಇದೇ ಮಾದರಿಯಲ್ಲಿ ಕೇಂದ್ರ ಕೂಡ ನಿಧಿ ಸ್ಥಾಪಿಸುವ ಕುರಿತು ಸಹ ಬಜೆಟ್‌ನಲ್ಲಿ ಘೋಷಣೆ ನಿರೀಕ್ಷೆ ಮಾಡಲಾಗಿದೆ.
ಸದ್ಯ ಹಳೆಯ ಪಿಂಚಣಿ ಯೋಜನೆಯ ಅನ್ವಯ 20-25 ವರ್ಷ ಸೇವೆ ಸಲ್ಲಿಸಿದ ಉದ್ಯೋಗಿಗಳು ನಿವೃತ್ತಿ ನಂತರ ದೊಡ್ಡ ಮೊತ್ತದ ಪಿಂಚಣಿ ಹಣವನ್ನು ಪಡೆಯುತ್ತಿದ್ದಾರೆ. ಆದರೆ ಇದರಿಂದ ಹೊರಗಿರುವ ಅಂದರೆ ನೂತನ ಪಿಂಚಣಿ ಯೋಜನೆಯಲ್ಲಿರುವ ನೌಕರರಿಗೆ ಈ ಸೌಲಭ್ಯ ಸಿಗುತ್ತಿಲ್ಲ. ಆದ್ದರಿಂದ ಎನ್‌ಪಿಎಸ್ ಬೇಡ, ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಿ ಎಂದು ನೌಕರರು ಒತ್ತಾಯಿಸುತ್ತಿದ್ದಾರೆ.
ಈ ಸಮಸ್ಯೆ ನಿವಾರಣೆಗಾಗಿ ಪಿಂಚಣಿ ನಿಯಮದಲ್ಲಿ ಬದಲಾವಣೆಯನ್ನು ತಂದು ನೂತನ ಪಿಂಚಣಿ ಯೋಜನೆಯ ಅನ್ವಯ ಶೇ 50ರಷ್ಟು ಪಿಂಚಣಿ ಪಡೆಯುವಂತೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತು ಬಜೆಟ್‌ನಲ್ಲಿ ಯಾವ ಘೋಷಣೆ ಮಾಡಲಾಗುತ್ತದೆ ಎಂದು ಕಾದು ನೋಡಬೇಕಿದೆ.












Click it and Unblock the Notifications