ಕನ್ನಡಿಗ ಕಂಡಕ್ಟರ್ ಮೇಲೆ ಹಲ್ಲೆ; ರಾಜ್ಯಕ್ಕೆ ಬಸ್ ಸೇವೆ ಬಂದ್ ಮಾಡಿದ ಮಹಾರಾಷ್ಟ್ರ
ಬೆಳಗಾವಿ ತಾಲೂಕಿನ ಬಾಳೆಕುಂದ್ರಿಯಲ್ಲಿ ಕರ್ನಾಟಕ ಸರ್ಕಾರಿ ಬಸ್ ಕಂಡಕ್ಟರ್ ಮೇಲೆ ಮರಾಠಿ ಪುಂಡರು ಹಲ್ಲೆ ಮಾಡಿದ ಬಳಿಕ ಗಡಿ ಭಾಗದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಕನ್ನಡ ಪರ ಸಂಘನಟೆಗಳು ಘಟನೆಯನ್ನು ಖಂಡಿಸಿ ಮಹಾರಾಷ್ಟ್ರ ಸಾರಿಗೆ ಬಸ್ ಮತ್ತು ಚಾಲಕನಿಗೆ ಕಪ್ಪು ಮಸಿ ಬಳಿದಿದ್ದರು. ಇದಕ್ಕೆ ಪ್ರತಿಯಾಗಿ ಕರ್ನಾಟಕ ಬಸ್‌ಗಳ ಮೇಲೆ ಮರಾಠಿ ಪುಂಡರು ಮಸಿ ಬಳಿದಿದ್ದಾರೆ.
ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಳ್ಳುತ್ತಿರುವಾಗ ಮುಂಜಾಗ್ರತಾ ಕ್ರಮವಾಗಿ ಮಹಾರಾಷ್ಟ್ರ ಕರ್ನಾಟಕ ರಾಜ್ಯಕ್ಕೆ ಸಾರಿಗೆ ಬಸ್ ಸೇವೆಯನ್ನು ನಿಲ್ಲಿಸಿದೆ. ಎಂಎಸ್‌ಆರ್‌ಟಿಸಿ ಬಸ್ ಮೇಲೆ ದಾಳಿ ನಡೆದ ನಂತರ ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್ ನಾಯಕ್ ಅವರು ಕರ್ನಾಟಕಕ್ಕೆ ರಾಜ್ಯ ಸಾರಿಗೆ ಬಸ್‌ಗಳನ್ನು ಸ್ಥಗಿತಗೊಳಿಸುವಂತೆ ಶನಿವಾರ ಆದೇಶಿಸಿದ್ದಾರೆ.

ಬೆಂಗಳೂರಿನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮ (ಎಂಎಸ್‌ಆರ್‌ಟಿಸಿ) ಬಸ್ ಮೇಲೆ ಶುಕ್ರವಾರ ರಾತ್ರಿ ಕರ್ನಾಟಕದ ಚಿತ್ರದುರ್ಗದಲ್ಲಿ ಕನ್ನಡ ಪರ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಸರ್ನಾಯಕ್ ಹೇಳಿದ್ದಾರೆ.
ಚಾಲಕ ಭಾಸ್ಕರ್ ಜಾಧವ್ ಅವರ ಮುಖಕ್ಕೆ ಕಪ್ಪು ಬಣ್ಣ ಬಳಿದು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಚಿವರು ಆರೋಪಿಸಿದ್ದಾರೆ. ಕರ್ನಾಟಕ ಸರ್ಕಾರ ಈ ವಿಷಯದ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸದ ಹೊರತು ಬಸ್ ಸೇವೆಗಳನ್ನು ಆರಂಭಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಕರ್ನಾಟಕ ಕೂಡ ಮಹಾರಾಷ್ಟ್ರಕ್ಕೆ ಬಸ್ ಸೇವೆಗಳನ್ನು ನಿಲ್ಲಿಸಿದ್ದು, ಕಂಡಕ್ಟರ್ ಮೇಲಿನ ಹಲ್ಲೆಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಖಂಡಿಸಿದ್ದಾರೆ. ಕಂಡಕ್ಟರ್ ಮೇಲಿನ ಹಲ್ಲೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಹಲ್ಲೆ ಮಾಡಿದವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ಕನ್ನಡಪರ ಸಂಘಟನೆಗಳ ಹೋರಾಟ
ಹಲ್ಲೆಗೊಳಗಾದ ಕಂಡಕ್ಟರ್ ವಿರುದ್ಧವೇ ಮರಾಠಿ ಪುಂಡರು ಬಸ್‌ನಲ್ಲಿ ಅಪ್ರಾಪ್ತೆಯಿಂದ ದೂರು ದಾಖಲಿಸುವ ಮೂಲಕ ಕಂಡಕ್ಟರ್ ಮೇಲೆ ಪೋಕ್ಸೋ ಪ್ರಕರಣ ದಾಖಲಸಿದ್ದಾರೆ. ಇದು ಕನ್ನಡಿಗರನ್ನು ಮತ್ತಷ್ಟು ಕೆರಳಿಸಿದ್ದು, ದೂರು ವಾಪಸ್ ಪಡೆಯದಿದ್ದರೆ ದೊಡ್ಡ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದೆ.
ಕರ್ನಾಟಕ ರಕ್ಷಣಾ ವೇದಿಕೆ ಕಂಡಕ್ಟರ್ ಮೇಲೆ ನಡೆದ ಹಲ್ಲೆಯನ್ನು ತೀವ್ರವಾಗಿ ಖಂಡಿಸಿದ್ದು, ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲು ಯೋಜನೆ ರೂಪಿಸುತ್ತಿದೆ. ಈಗಾಗಲೇ ಬಾಳೆಕುಂದ್ರಿ ಹೋರಾಟಕ್ಕೆ ಕರೆ ಕೊಟ್ಟಿದ್ದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಸಜ್ಜಾಗಿದೆ.












Click it and Unblock the Notifications