ಮಹಾರಾಷ್ಟ್ರ ಮಳೆ: ಕೊಲ್ಹಾಪುರದಲ್ಲಿ 12 ಗಂಟೆ ಮರದ ಮೇಲೆ ಸಿಲುಕಿದ್ದ ವ್ಯಕ್ತಿಯ ರಕ್ಷಣೆ
ಮುಂಬೈ, ಜುಲೈ. 28: ಪಶ್ಚಿಮ ಮಹಾರಾಷ್ಟ್ರದ ಕೊಲ್ಲಾಪುರ ಮತ್ತು ಸಾಂಗ್ಲಿ ಜಿಲ್ಲೆಗಳ ಗಡಿಯಲ್ಲಿ ತುಂಬು ಹರಿಯುತ್ತಿರುವ ವಾರ್ನಾ ನದಿಯಲ್ಲಿ 50 ವರ್ಷದ ಬಜರಂಗ್ ಖಮ್ಕರ್ ಎಂಬ ವ್ಯಕ್ತಿ 12 ಗಂಟೆಗಳು ಮರದ ಮೇಲೆ ಸಿಲುಕಿದ್ದ ಘಟನೆ ವರದಿಯಾಗಿದೆ. ರಕ್ಷಣೆಗಾಗಿ ಕಾಯುತ್ತಿದ್ದ ಅವರನ್ನು ಶುಕ್ರವಾರ ರಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೊಲ್ಹಾಪುರ ವಿಪತ್ತು ನಿರ್ವಹಣಾ ಪಡೆ (ಕೆಡಿಆರ್‌ಎಫ್) ಸಿಬ್ಬಂದಿ ವ್ಯಕ್ತಿಯನ್ನು ರಕ್ಷಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಕೊಲ್ಹಾಪುರ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಪಂಚಗಂಗಾ, ವಾರ್ನಾ ಸೇರಿದಂತೆ ಹಲವು ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

ಕೊಲ್ಲಾಪುರ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಪ್ರಸಾದ್ ಸಂಕ್ಪಾಲ್ ಪ್ರಕಾರ, ಸಾಂಗ್ಲಿಯ ಶಿರಾಳದ ಲಖೆವಾಡಿ ಗ್ರಾಮದ ನಿವಾಸಿ ಬಜರಂಗ್ ಖಮಕರ್ ಎಂದು ಗುರುತಿಸಲಾದ ವ್ಯಕ್ತಿ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಸೇತುವೆಯಿಂದ ವಾರ್ನಾ ನದಿಯ ನೀರಿನ ಮಟ್ಟವನ್ನು ನೋಡಲು ಹೋಗಿದ್ದರು. ಆದರೆ ಆಯತಪ್ಪಿ ನೀರಿಗೆ ಬಿದ್ದ ಅವರು ಬಲವಾದ ಪ್ರವಾಹದಲ್ಲಿ ಕೊಚ್ಚಿಹೋಗಿದ್ದರು.
ಶುಕ್ರವಾರ ಬೆಳಗ್ಗೆ ನದಿಯ ಮಧ್ಯದಲ್ಲಿ ಮರವೊಂದರ ಮೇಲೆ ಸಿಕ್ಕಿಹಾಕಿಕೊಂಡಿದ್ದನ್ನು ಕಂಡ ಕೆಲವರು ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಕೆಡಿಆರ್‌ಎಫ್ ತಕ್ಷಣವೇ ವ್ಯಕ್ತಿಯನ್ನು ರಕ್ಷಿಸಲು ತಂಡವನ್ನು ಕಳುಹಿಸಿದೆ ಎಂದು ಪ್ರಸಾದ್ ಸಂಕ್ಪಾಲ್ ತಿಳಿಸಿದ್ದಾರೆ.
"ಬೆಳಗ್ಗೆ 10.30 ರ ಸುಮಾರಿಗೆ, ತಂಡದ ಕಮಾಂಡರ್‌ಗಳಾದ ಕೃಷ್ಣ ಸೊರ್ಟೆ, ಸುನೀಲ್ ಕಾಂಬ್ಳೆ, ಶುಭಂ ಕಾಟ್ಕರ್, ಜೀವನ್ ಕುಬ್ಡೆ, ಶ್ರವಣ್ ಮತ್ತು ಸೋಮನಾಥ್ ಸುತಾರ್ ಅವರನ್ನು ಒಳಗೊಂಡ ತಂಡವು ರಕ್ಷಣಾ ದೋಣಿಯನ್ನು ಬಳಸಿ ಮರದಿಂದ ಬಜರಂಗ್ ಖಮಕರ್ ಅವರನ್ನು ರಕ್ಷಿಸಿತು. ಅವರಿಗೆ ವೈದ್ಯಕೀಯ ಸಹಾಯವನ್ನೂ ನೀಡಲಾಗಿದೆ" ಎಂದು ಪ್ರಸಾದ್ ಸಂಕ್ಪಾಲ್ ಹೇಳಿದ್ದಾರೆ.

ಇನ್ನು, ಈಗಾಗಲೇ ಎಚ್ಚರಿಕೆಯ ಮಟ್ಟಕ್ಕಿಂತ ಹೆಚ್ಚು ಹರಿಯುತ್ತಿರುವ ಕೊಲ್ಲಾಪುರದ ಪಂಚಗಂಗಾ ನದಿಯ ನೀರಿನ ಮಟ್ಟ 41. 2 ಅಡಿ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜಾರಾಂ ವರೆಯಲ್ಲಿ ನದಿಯ ಎಚ್ಚರಿಕೆಯ ಗುರುತು 39 ಅಡಿಗಳಿದ್ದರೆ, ಅಪಾಯದ ಗುರುತು 43 ಅಡಿಗಳಾಗಿದೆ. ಕೊಲ್ಹಾಪುರ ಜಿಲ್ಲಾ ಉಸ್ತುವಾರಿ ಸಚಿವ ದೀಪಕ್ ಕೇಸರಕರ್ ಗುರುವಾರ ನಗರಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.
ರಾಧಾನಗರಿ ಅಣೆಕಟ್ಟಿನ ಐದು ಸ್ವಯಂಚಾಲಿತ ಗೇಟ್‌ಗಳನ್ನು ತೆರೆದ ನಂತರ ಪಂಚಗಂಗಾ ನದಿಯ ನೀರಿನ ಮಟ್ಟ 5 ರಿಂದ 6 ಅಡಿಗಳಷ್ಟು ಏರಿಕೆಯಾಗುವ ಅಂದಾಜಿತ್ತು, ಆದರೆ ಮಳೆಯ ತೀವ್ರತೆ ಕಡಿಮೆಯಾದ ಕಾರಣ ನೀರಿನ ಮಟ್ಟ ಏರಿಕೆಯಾಗಲಿಲ್ಲ. ಇದರ ಜೊತೆಗೆ ಮಳೆ ಹಾನಿಯಿಂದ ತಮ್ಮ ಮನೆ ಮಠ ಕಳೆದುಕೊಂಡು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿರುವ ಜನರನ್ನು ಪರಿಶೀಲನೆ ನಡೆಸಿ ಅವರ ಸ್ಥಳಗಳಿಗೆ ವಾಪಸ್ ಕಳುಹಿಸುವಂತೆ ಜಿಲ್ಲಾಡಳಿತಕ್ಕೆ ತಿಳಿಸಿದ್ದೇನೆ ಎಂದು ದೀಪಕ್ ಕೇಸರಕರ್ ತಿಳಿಸಿದ್ದಾರೆ.












Click it and Unblock the Notifications