Maharashtra Polls 2024: ಪ್ರಚಾರದ ವೇಳೆ ಶರದ್ ಪವಾರ್ ಫೋಟೊ, ವಿಡಿಯೊ ಬಳಸಬೇಡಿ: ಅಜಿತ್ ಪವಾರ್‌ಗೆ 'ಸುಪ್ರೀಂ' ತಾಕೀತು
Maharashtra assembly election 2024: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಶರದ್ ಪವಾರ್ ಅವರ ಚಿತ್ರಗಳು, ವಿಡಿಯೊಗಳು ಅಥವಾ ಯಾವುದೇ ಹೋಲಿಕೆಗಳನ್ನು ಬಳಸದಂತೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಜಿತ್ ಪವಾರ್ ಅವರ ಬಣಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಹಿರಿಯ ನಾಯಕ ಶರದ್ ಪವಾರ್ ಅವರ ಫೋಟೊ ಹಾಗೂ ವಿಡಿಯೊಗಳನ್ನು ಬಳಸಿಕೊಳ್ಳಲು ಅಜಿತ್ ಪವಾರ್ ಮುಂದಾಗಿದ್ದರು. ಇದು ಮಹಾರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಮಟ್ಟದ ಕಲ್ಲೋಲವನ್ನೇ ಸೃಷ್ಟಿ ಮಾಡಿತ್ತು.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ನವೆಂಬರ್ 20 ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಶರದ್ ಪವಾರ್ ಹೆಸರು, ಫೋಟೊ ಹಾಗೂ ವಿಡಿಯೊಗಳನ್ನು ಬಳಸಿಕೊಳ್ಳಲು ಅಜಿತ್ ಪವಾರ್ ಬಣ ಮುಂದಾಗಿತ್ತು. ಈ ಕುರಿತು ಹೇಳಿಕೆ ನೀಡಿರುವ ಸುಪ್ರೀಂ ಕೋರ್ಟ್ ಪೀಠವು, 'ನಿಮ್ಮ ( ಅಜಿತ್ ಪವಾರ್ ) ಸ್ವಂತ ಕಾಲಿನ ಮೇಲೆ ನಿಲ್ಲಲು ಕಲಿಯಿರಿ. ಈಗ ನೀವು ಶರದ್ ಪವಾರ್ ಅವರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು ಹೊಂದಿದ್ದೀರಿ. ಶರದ್ ಪವಾರ್ ಅವರಿಂದ ದೂರವಾದ ನಂತರ ನೀವು ಅವರ ಹೆಸರು, ಫೋಟೋ ಅಥವಾ ವಿಡಿಯೊವನ್ನು ಬಳಸಬಾರದು' ಎಂದು ತಾಕೀತು ಮಾಡಿದೆ.

ಈ ಹೇಳಿಕೆಯ ಮೂಲಕ ಅಜಿತ್ ಪವಾರ್ ಅವರ ಪಕ್ಷವು ಸ್ವಂತಿಕೆಯನ್ನು ಬೆಳೆಸಿಕೊಳ್ಳಬೇಕು. ಮತದಾರರ ಮೇಲೆ ಪ್ರಭಾವ ಬೀರಲು ಶರದ್ ಪವಾರ್ ಅವರನ್ನು ಅವಲಂಬಿಸಬಾರದು ಎಂಬ ಸಂದೇಶವನ್ನು ಸುಪ್ರೀಂ ಕೋರ್ಟ್ ರವಾನಿಸಿದೆ.
ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ಶರದ್ ಪವಾರ್ ಅವರ ಬಣವನ್ನು ಪ್ರತಿನಿಧಿಸುವ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಅಜಿತ್ ಪವಾರ್ ವಿರುದ್ಧ ಆರೋಪದ ಸುರಿಮಳೆಯನ್ನೇ ಗೈದಿದ್ದಾರೆ. ತಮ್ಮ ಚಿಕ್ಕಪ್ಪನ ಖ್ಯಾತಿಯ ಲಾಭ ಪಡೆಯಲು ಅಜಿತ್ ಪವಾರ್ ಯತ್ನಿಸುತ್ತಿದ್ದಾರೆ ಎಂದು ವಾದಿಸಿದರು.
ಸುಪ್ರೀಂ ಕೋರ್ಟ್‌ನ ಹಿಂದಿನ ಆದೇಶಗಳ ಉಲ್ಲಂಘನೆಯನ್ನು ಅಜಿತ್ ಪವಾರ್ ಮಾಡಿದ್ದಾರೆ ಎಂದು ಸಿಂಘ್ವಿ ಆರೋಪಿಸಿದರು. ಸುಪ್ರೀಂ ಕೋರ್ಟ್ ಆದೇಶದಂತೆ ಅವರು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಒತ್ತಿ ಹೇಳಿದರು.
ಮಹಾರಾಷ್ಟ್ರ ಚುನಾವಣೆ ವೇಳೆ ಶರದ್ ಪವಾರ್ ಅವರ ವಿಡಿಯೊವನ್ನು ಪ್ರಸಾರ ಮಾಡುವ ಮೂಲಕ ಅಜಿತ್ ಪವಾರ್ ಅವರು ಸುಪ್ರೀಂ ಕೋರ್ಟ್ ಆದೇಶದವನ್ನು ಉಲ್ಲಂಘಿಸಿದ್ದಾರೆ ಎಂದು ಸಿಂಘ್ವಿ ಹೇಳಿದ್ದಾರೆ.
'ನೀವು ನಮಗೆ ಮತ ನೀಡಿದರೆ ಶರದ್ ಪವಾರ್ ಅವರಿಗೆ ಮತ ನೀಡಿದಂತೆ, ನಾವು ಮತ್ತು ಶರದ್ ಪವಾರ್ ಒಟ್ಟಾರೆಯಾಗಿಯೇ ಇದ್ದೇವೆ. ನೀವು ಪವಾರ್ ಕುಟುಂಬಕ್ಕೆ ಮತ ನೀಡಿ. ನಾವು ದೂರವಾಗಿಲ್ಲ. ಅಜಿತ್ ಪವಾರ್ ಇನ್ನೂ ಶರದ್ ಪವಾರ್‌ಗೆ ನಿಕಟವಾಗಿದ್ದಾರೆ' ಎಂದು ಅಜಿತ್ ಪವಾರ್ ಹೇಳಿದ್ದಾರೆ. ಇದು ತಪ್ಪು ಎಂದು ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ದಾರೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠವು ಆರೋಪ ಹಾಗೂ ಪ್ರತ್ಯಾರೋಪವನ್ನು ಆಲಿಸಿತು. ಚುನಾವಣಾ ಪ್ರಕ್ರಿಯೆಯ ಮೇಲೆ ಕೃತಕ ಬುದ್ಧಿಮತ್ತೆಯ ಪ್ರಭಾವದ ಬಗ್ಗೆ ಸುಪ್ರೀಂ ಕೋರ್ಟ್ ಕಳವಳವನ್ನು ವ್ಯಕ್ತಪಡಿಸಿತು.
ತಿಳುವಳಿಕೆಯುತ ನಿರ್ಧಾರಗಳನ್ನು ತೆಗೆದುಕೊಳ್ಳುವ ಮತದಾರರ ಸಾಮರ್ಥ್ಯದ ಮೇಲೆ ನಂಬಿಕೆ ಇದೆ. ಆದರೂ, ನ್ಯಾಯಯುತ ಚುನಾವಣಾ ಚುನಾವಣಾ ಪ್ರಕ್ರಿಯೆಯ ಮೇಲೆ ಕೃತಕ ಬುದ್ಧಿಮತ್ತೆಯ ಕೃತಕ ಬುದ್ದಿಮತ್ತೆಯು ಪ್ರಭಾವ ಬೀರಬಹುದು ಎಂದು ನ್ಯಾಯಾಲವು ಆತಂಕ ವ್ಯಕ್ತಪಡಿಸಿತು.
ಇಂದು ಜಾರ್ಖಂಡ್ ವಿಧಾನಸಭೆ ಚುನಾವಣೆ
ನವೆಂಬರ್ 13 ರಂದು ( ಇಂದು ) ಜಾರ್ಖಂಡ್ ವಿಧಾನಸಭೆಗೆ ಮೊದಲ ಹಂತದ ಚುನಾವಣೆ ನಡೆಯುತ್ತಿದೆ. ಎರಡನೇ ಹಂತದ ಚುನಾವಣೆಯು ನವೆಂಬರ್ 20 ರಂದು ನಡೆಯಲಿದ್ದು, ಅದೇ ದಿನದಂದು ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆಯ ನಡೆಯಲಿದೆ. ಈ ಎರಡು ರಾಜ್ಯಗಳ ಚುನಾವಣಾ ಫಲಿತಾಂಶವು ನವೆಂಬರ್ 23 ರಂದು ಹೊರಬೀಳಲಿದೆ.
ಕರ್ನಾಟಕ ಉಪಚುನಾವಣೆ
ಕರ್ನಾಟಕದಲ್ಲಿ ಇಂದು ಉಪಚುನಾವಣೆ ನಡೆಯುತ್ತಿದೆ. ಲೋಕಸಭಾ ಚುನಾವಣೆ ವೇಳೆ ತೆರುವಾಗಿದ್ದ ಮೂರು ವಿಧಾನಸಭೆಗಳಿಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ, ಹಾವೇರಿ ಜಿಲ್ಲೆಯ ಶಿಗ್ಗಾವಿ ಹಾಗೂ ಬಳ್ಳಾರಿ ಜಿಲ್ಲೆಯ ಸಂಡೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ಈ ಚುನಾವಣೆಯ ಫಲಿತಾಂಶವು ನವೆಂಬರ್ 23 ರಂದು ಹೊರಬೀಳಲಿದೆ.












Click it and Unblock the Notifications