Dhananjay Munde: ಮಹಾರಾಷ್ಟ್ರದ ಸಚಿವ ಧನಂಜಯ ಮುಂಡೆ ರಾಜೀನಾಮೆ
ಮುಂಬೈ, ಮಾರ್ಚ್ 03: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮಹಾರಾಷ್ಟ್ರದ ಸಚಿವ ಧನಂಜಯ ಮುಂಡೆ ರಾಜೀನಾಮೆ ನೀಡಿದ್ದಾರೆ. 2024ರ ಅಂತ್ಯದಲ್ಲಿ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು. 'ಮಹಾಯುತಿ' ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಧನಂಜಯ ಮುಂಡೆ ಎನ್‌ಸಿಪಿ (ಅಜಿತ್ ಪವಾರ್ ಬಣ) ಪಕ್ಷದ ನಾಯಕರು.
ಸೋಮವಾರ ಮಹಾರಾಷ್ಟ್ರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಧನಂಜಯ ಮುಂಡೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಅವರು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ಗೆ ಸಲ್ಲಿಕೆ ಮಾಡಿದ್ದು, ಅದನ್ನು ರಾಜ್ಯಪಾಲರಿಗೆ ರವಾನೆ ಮಾಡಲಾಗಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿಕೊಂಡಿರುವ 'ಮಹಾಯುತಿ' ಮೈತ್ರಿಕೂಟದ ಸರ್ಕಾರ ಅಸ್ತಿತ್ವದಲ್ಲಿದೆ. ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಗಳು. ಅಜಿತ್ ಪವಾರ್, ಏಕನಾಥ್ ಶಿಂಧೆ ಉಪ ಮುಖ್ಯಮಂತ್ರಿಗಳು.
ರಾಜೀನಾಮೆ ಕೇಳಿದ್ದ ಸಿಎಂ: ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಚಿವ ಧನಂಜಯ ಮುಂಡೆ ಅವರಿಗೆ ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದರು ಎಂಬ ಮಾಹಿತಿ ಸಿಕ್ಕಿದೆ.
ಸಚಿವ ಧನಂಜಯ ಮುಂಡೆ ಆಪ್ತ ವಾಲ್ಮಿಕ್ ಕರಾಡ್‌ನನ್ನು ಸಂತೋಷ್ ದೇಶ್‌ಮುಖ್ ಹತ್ಯೆ ಪ್ರಕರಣದ ಪ್ರಮುಖ ಸಂಚುಕೋರ ಎಂದು ಸಿಐಡಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು. ಆದ್ದರಿಂದ ವಿರೋಧ ಪಕ್ಷಗಳು ರಾಜೀನಾಮೆಗೆ ಒತ್ತಾಯಿಸಿದ್ದವು.
2024ರ ಡಿಸೆಂಬರ್‌ನಲ್ಲಿ ಸಂತೋಷ್ ದೇಶ್‌ಮುಖ್ ಅಪಹರಣ ಮಾಡಿ, ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು. ಮಸ್ಸಾಜೋಗ್ ಗ್ರಾಮದ ಸರ್‌ಪಂಚ್ ಆಗಿದ್ದ ಅವರ ಕೊಲೆ ಪ್ರಕರಣ ರಾಜ್ಯದಲ್ಲಿ ಭಾರೀ ಸಂಚಲನ ಉಂಟು ಮಾಡಿತ್ತು.
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀಡ್ ಜಿಲ್ಲಾ ಕೋರ್ಟ್‌ಗೆ 1,200 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿತ್ತು. ಸಿಐಡಿ ಪ್ರಕರಣದಲ್ಲಿ ವಾಲ್ಮಿಕ್ ಕರಾಡ್ ಪ್ರಮುಖ ಆರೋಪಿ ಎಂದು ಹೇಳಿತ್ತು.
ಸಚಿವ ಧನಂಜಯ ಮುಂಡೆ ಆಪ್ತ ಸಹಾಯಕ ಪ್ರಶಾಂತ್ ಜೋಶಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಿವಾಸಕ್ಕೆ ಭೇಟಿ ನೀಡಿ, ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದಾರೆ. ಅಜಿತ್ ಪವಾರ್ ಮತ್ತು ಪ್ರಫುಲ್ ಪಟೇಲ್‌ಗೆ ಪತ್ರವನ್ನು ಬರೆದಿದ್ದ ದೇವೇಂಧ್ರ ಫಡ್ನವೀಸ್ ಸಚಿವರ ರಾಜೀನಾಮೆ ಪಡೆಯುವಂತೆ ಮನವಿ ಮಾಡಿದ್ದರು.
ಸಂತೋಷ್ ದೇಶ್‌ಮುಖ್ ಕೊಲೆ ಪ್ರಕರಣದಲ್ಲಿ ಧನಂಜಯ ಮುಂಡೆ 6 ಸಹಾಯಕರನ್ನು ಬಂಧಿಸಲಾಗಿತ್ತು. ಪ್ರಕರಣದ ತನಿಖೆ ಸರಿಯಾಗಿ ನಡೆಯಲು ಸಚಿವರು ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿದ್ದವು.
ಧನಂಜಯ ಮುಂಡೆ ಬೀಡ್ ಜಿಲ್ಲೆಯ ಪಾರ್ಲಿ ಕ್ಷೇತ್ರದ ಎನ್‌ಸಿಪಿ ಶಾಸಕರು. ಅವರು ಮೊದಲು ಬೀಡ್ ಜಿಲ್ಲಾ ಉಸ್ತುವಾರಿಯಾಗಿಯೂ ಕೆಲಸ ಮಾಡಿದ್ದರು.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಅಸ್ತಿತ್ವಕ್ಕೆ ಬಂದ ಬಳಿಕ 'ಮಹಾಯುತಿ' ಮೈತ್ರಿಕೂಟದ ಮಿತ್ರಪಕ್ಷವಾದ ಎನ್‌ಸಿಪಿಯ ಧನಂಜಯ ಮುಂಡೆ ಅವರನ್ನು ಸಚಿವರಾಗಿ ದೇವೇಂದ್ರ ಫಡ್ನವೀಸ್ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು.












Click it and Unblock the Notifications