ಮಹಾರಾಷ್ಟ್ರ ಚುನಾವಣೆ: ಬಿಜೆಪಿ ಸಮ್ಮಿಶ್ರ ಸರ್ಕಾರದ ಕೊನೆ ಕ್ಷಣದ ಸರ್ಕಸ್; ಕಾಂಗ್ರೆಸ್‌ಗೆ ಶಾಕ್!
ಮಹಾರಾಷ್ಟ್ರ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಚುನಾವಣಾ ದಿನಾಂಕ ಘೋಷಣೆಯಾದ ಕೂಡಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತದೆ. ಭಾರತೀಯ ಚುನಾವಣಾ ಆಯೋಗವು ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭೆ ಚುನಾವಣೆಗಳಿಗೆ ಮಂಗಳವಾರ ದಿನಾಂಕ ಘೋಷಣೆ ಮಾಡಿದೆ. ಇದಕ್ಕೂ ಕೆಲವೇ ಗಂಟೆಗಳ ಮುಂಚೆ ಮಹಾರಾಷ್ಟ್ರ ಸಮ್ಮಿಶ್ರ ಸರ್ಕಾರ ಭಾರೀ ಸರ್ಕಸ್ ಮಾಡಿರುವುದು ಈಗ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದಲ್ಲಿ ಚುನಾವಣಾ ಕಣ ರಂಗೇರಿದೆ. ಮಹಾರಾಷ್ಟ್ರದಲ್ಲಿ ನವೆಂಬರ್ 20ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. 288 ವಿಧಾನಸಭಾ ಸ್ಥಾನಗಳನ್ನು ಈ ರಾಜ್ಯ ಹೊಂದಿದೆ. ಇಷ್ಟು ಕ್ಷೇತ್ರಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಯಲಿದೆ. ಅಂದರೆ, ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಚುನಾವಣಾ ಆಯೋಗ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿ ಮಾಡುವುದಕ್ಕೂ ಮುನ್ನ ಮಹಾರಾಷ್ಟ್ರ ಸರ್ಕಾರ ಎದ್ನೋ ಬಿದ್ನೋ ಅಂತ ಕೆಲಸ ಮಾಡಿದೆ. ಟಕಾ ಟಕ್ ಅಂತ ಕಡತಗಳಿಗೆ, ಬಾಕಿ ನಿರ್ಣಯಗಳಿಗೆ ಅನುಮೋದನೆ ನೀಡಲಾಗಿದೆ.

ಮಂಗಳವಾರ ಚುನಾವಣೆ ದಿನಾಂಕ ನಿಗದಿಯಾಗಲಿದೆ ಎಂದು ಬೆಳಿಗ್ಗೆ ಗೊತ್ತಾಗುತ್ತಿದ್ದಂತೆಯೇ ರಾಜ್ಯದಲ್ಲಿ ಕಡತಗಳ ವಿಲೇವಾರಿ ಹಾಗೂ ಬಾಕಿ ನಿರ್ಣಯಗಳನ್ನು ವೇಗವಾಗಿ ತೆಗೆದುಕೊಳ್ಳಲಾಗಿದೆ. ಸಚಿವಾಲಯದಲ್ಲಿ ಭಾರೀ ಗದ್ದಲ, ಅವಸರದಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಸಚಿವರು ಸಹ ಫುಲ್ ಬ್ಯುಸಿಯಾಗಿದ್ದರು.
ಮಹಾರಾಷ್ಟ್ರ ಸಚಿವಾಲಯ ಎಷ್ಟೊಂದು ಬ್ಯುಸಿಯಾಗಿತ್ತೆಂದರೆ (ಕಾರ್ಯಮಗ್ನ) ಸಚಿವ ಸಂಪುಟದಲ್ಲಿ ತೆಗೆದುಕೊಳ್ಳಲಾಗಿದ್ದ ನಿರ್ಣಯಗಳಿಗೆ ಅನುಮೋದನೆ ನೀಡುವುದಕ್ಕೂ ಸಮಯವಿರಲಿಲ್ಲ ಎನ್ನಲಾಗಿದೆ.
ಹಲವು ಪ್ರಮುಖ ನಿರ್ಣಯ: ಅತ್ತ ಚುನಾವಣಾ ಆಯೋಗವು ಮಹಾರಾಷ್ಟ್ರ ಚುನಾವಣೆಗೆ ಸಂಬಂಧಿಸಿದಂತೆ ದಿನಾಂಕ ಪ್ರಕಟಿಸಲು ಸಿದ್ಧವಾಗುತ್ತಿತ್ತು. ಇತ್ತ ಮಹಾರಾಷ್ಟ್ರ ಸರ್ಕಾರ ಹಲವು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿತ್ತು. ಚುನಾವಣಾ ಆಯೋಗವು ಮಂಗಳವಾರ ಮಧ್ಯಾಹ್ನ 3.30ಕ್ಕೆ ಪತ್ರಿಕಾಗೋಷ್ಠಿಯನ್ನು ಕರೆದಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಮಂಗಳವಾರ ಬೆಳಿಗ್ಗೆಯಿಂದಲೇ ಮಹಾರಾಷ್ಟ್ರ ಸರ್ಕಾರ ಹಲವು ಪ್ರಮುಖ ಕಡತಗಳಿಗೆ ಅನುಮೋದನೆ ನೀಡಿದೆ. ಇದಕ್ಕೆ ಮುಖ್ಯ ಕಾರಣ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದ ಕ್ಷಣದಿಂದಲೇ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತದೆ.

ಚುನಾವಣಾ ನೀತಿ ಸಂಹಿತೆ ಜಾರಿಯಾದ ಮೇಲೆ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳನ್ನು ಘೋಷಿಸುವಂತಿಲ್ಲ. ತುರ್ತು ಹಾಗೂ ಪ್ರವಾಹ ಅಥವಾ ಬರದಂತಹ ಅತ್ಯಗತ್ಯ ಸೇವೆಗಳನ್ನು ಅನುಮತಿಯೊಂದಿಗೆ ಮಾಡಬಹುದು. ಈ ವಿಷಯವನ್ನೂ ಸಹ ಚುನಾವಣಾ ಆಯೋಗದ ಗಮನಕ್ಕೆ ತರಬೇಕಾಗುತ್ತದೆ. ಹೀಗಾಗಿ, ಮಹಾರಾಷ್ಟ್ರ ಸರ್ಕಾರ ಮಂಗಳವಾರ ಮಧ್ಯಾಹ್ನದ ಒಳಗೆ ಬೆಂಕಿ ಬಿದ್ದಂತೆ ಕೆಲಸ ಮಾಡಿದೆ. ಸರ್ಕಾರ ಎಷ್ಟರ ಮಟ್ಟಿಗೆ ಫಾಸ್ಟ್ ಆಗಿ ಕೆಲಸ ಮಾಡಿದೆ ಎಂದರೆ ಒಂದೇ ದಿನ 244 ನಿರ್ಣಯಗಳನ್ನು ಪಾಸ್ ಮಾಡಿದೆ. ಆ ಎಲ್ಲಾ ನಿರ್ಣಯಗಳನ್ನು ಮಹಾರಾಷ್ಟ್ರ ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಈ 244 ನಿರ್ಣಯಗಳಲ್ಲಿ ಹಲವು ಪ್ರಮುಖ ನಿರ್ಣಯಗಳು ಸೇರಿವೆ. ಸರ್ಕಾರಿ ನಿರ್ಣಯಗಳ ವಿವರಣೆಯು ವಿಸ್ತಾರವಾಗಿವೆ. ಮಹಾರಾಷ್ಟ್ರಕ್ಕೆ ಸಂಬಂಧಿಸಿದ ಪ್ರಮುಖ ನಿರ್ಣಯಗಳು, ಸ್ಥಳೀಯ ಮಟ್ಟದ ಅಭಿವೃದ್ಧಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡುವುದು ಸಹ ಇದರಲ್ಲಿ ಸೇರಿದೆ. ಮುಂದುವರಿದು ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ವಿವಿಧ ಸಂಸ್ಥೆಗಳಿಂದ ಬಂದಿರುವ ಪ್ರಸ್ತಾವನೆಗಳಿಗೂ ಅಸ್ತು ಎನ್ನಲಾಗಿದೆ. ಇದರೊಂದಿಗೆ ಪ್ರವಾಹ ಮತ್ತು ಭಾರೀ ಮಳೆಯಿಂದ ಹಾನಿಗೆ ಒಳಗಾಗಿರುವ ಹಳ್ಳಿ ಹಾಗೂ ಸಣ್ಣ ಗ್ರಾಮಗಳಿಗೆ ರಾಜ್ಯ ಸರ್ಕಾರದ ಖಜಾನೆಯಿಂದ ಆರ್ಥಿಕ ಪರಿಹಾರ ನೀಡುವ ಪ್ರಮುಖ ಅಂಶಗಳು ಸಹ ಸೇರಿವೆ.
ತೀರ್ಥಯಾತ್ರೆ ಯೋಜನೆಗೆ ಒಪ್ಪಿಗೆ: ಸರ್ಕಾರ ಅನುಮೋದನೆ ನೀಡಿರುವ 244 ನಿರ್ಣಯಗಳಲ್ಲಿ ಮಹಾರಾಷ್ಟ್ರದ 95 ಯಾತ್ರಾ ಕ್ಷೇತ್ರಗಳು ಮತ್ತು ಭಾರತದಲ್ಲಿ 15 ಕ್ಷೇತ್ರಗಳಿಗೆ ಭೇಟಿ ನೀಡುವ ಅವಕಾಶ ನೀಡುವ "ಮುಖ್ಯಮಂತ್ರಿ ತೀರ್ಥ ದರ್ಶನ ಯೋಜನೆ"ಯೂ ಇದೆ. ಚುನಾವಣೆ ಸಮೀಪದಲ್ಲಿ ಇರುವುದರಿಂದ ಮಹಾರಾಷ್ಟ್ರ ಸರ್ಕಾರವು ಈಗಾಗಲೇ ಹಲವು ಗಿಫ್ಟ್‌ಗಳನ್ನು ಜನರಿಗೆ ನೀಡಿದೆ. ಈಚೆಗಷ್ಟೇ ಮುಂಬೈನ ಐದು ಟೋಲ್‌ಗಳಲ್ಲಿ ಟೋಲ್ ಶುಲ್ಕ ಫ್ರೀ ಮಾಡಲಾಗಿತ್ತು. ರಾಜ್ಯ ಸರ್ಕಾರದ ಕೊನೆ ಕ್ಷಣದಲ್ಲಿ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ವಿರೋಧ ಪಕ್ಷಗಳಿಗೆ ಸಹಜವಾಗಿಯೇ ಶಾಕ್ ನೀಡಿದಂತಾಗಿದೆ.












Click it and Unblock the Notifications