ಮಹಾರಾಷ್ಟ್ರ ಚುನಾವಣೆ: ದುಡ್ಡಿನ ಮಳೆ, ಬರೋಬ್ಬರಿ ಇಷ್ಟು ಕೋಟಿ ವಶ!
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಯುತ್ತಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ದುಡ್ಡಿನ ಸುರಿಮಳೆಯನ್ನೇ ಸುರಿಸುತ್ತಿವೆ. ಇಲ್ಲಿಯ ವರೆಗೆ ಕೋಟ್ಯಾಂತರ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ದೇಶದ ಪ್ರಮುಖ ರಾಜ್ಯಗಳಲ್ಲಿ ಮಹಾರಾಷ್ಟ್ರ ರಾಜ್ಯವೂ ಒಂದಾಗಿದೆ. ಆದಾಯದಿಂದಲೂ ಈ ರಾಜ್ಯ ಮುಂಚೂಣಿಯಲ್ಲಿ ಇದೆ.
ಈ ರಾಜ್ಯದಲ್ಲಿ ನವೆಂಬರ್ 20ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಈ ನಡುವೆ ಈ ರಾಜ್ಯದಲ್ಲಿ ಕೋಟ್ಯಾಂತರ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದೆ. ಮಾದರಿ ಚುನಾವಣೆ ನೀತಿ ಸಂಹಿತೆ ಜಾರಿ ಇರುವ ಹೊರತಾಗಿಯೂ ಈ ರಾಜ್ಯದಲ್ಲಿ ಹಲವು ಅಕ್ರಮಗಳು ನಡೆಯುತ್ತಿರುವುದು ವರದಿಯಾಗಿದೆ. ಕಳೆದ 24 ಗಂಟೆಯ ಅವಧಿಯಲ್ಲಿ ಬರೋಬ್ಬರಿ 52 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಹಾರಾಷ್ಟ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಕ್ಟೋಬರ್ 15 ರಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಘೋಷಣೆ ಮಾಡಲಾಗಿದೆ. ಭಾರತೀಯ ಚುನಾವಣಾ ಆಯೋಗವು ಚುನಾವಣೆ ದಿನಾಂಕ ಘೋಷಣೆ ಮಾಡಿದಾಗಿನಿಂದಲೂ ಮಹಾರಾಷ್ಟ್ರದಾದ್ಯಂತ 90 ಕೋಟಿಗೂ ಹೆಚ್ಚಿನ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಮಹಾರಾಷ್ಟ್ರದ ಕಾನೂನು ಜಾರಿಯ 19 ಕಾನೂನು ಸಂಸ್ಥೆಗಳಿಂದ ಈ ರೀತಿ ಮಹಾರಾಷ್ಟ್ರದಾದ್ಯಂತ ವಶಪಡಿಸಿಕೊಳ್ಳಲಾಗಿದೆ.
ಇನ್ನು ಚುನಾವಣಾ ಆಯೋಗದ ಆ್ಯಪ್‌ನ ಮೂಲಕ ಇಲ್ಲಿಯವರೆಗೆ 1,144 ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ದೂರುಗಳು ದಾಖಲಾಗಿವೆ. ಅದರಲ್ಲಿ ಶೇ 99 ದೂರುಗಳನ್ನು ಪರಿಹರಿಸಲಾಗಿದೆ ಎಂದು ಹೇಳಲಾಗಿದೆ. ಇನ್ನು ಮಹಾರಾಷ್ಟ್ರದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ದೂರು ನೀಡಲು ಜನರಿಗೆ ಅನುಕೂಲವಾಗುವಂತೆ ಇವಿಜಿಲ್ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿದೆ. ಮುಂದಿನ ತಿಂಗಳು ನವೆಂಬರ್ 20 ರಂದು ಮಹಾರಾಷ್ಟ್ರ ಚುನಾವಣೆ ನಡೆಯಲಿದೆ. ನವೆಂಬರ್ 23ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ಇನ್ನು ಮಹಾರಾಷ್ಟ್ರದಲ್ಲಿ ರಾಜಕೀಯದಲ್ಲಿ ಹೊಸ ಬೆಳವಣಿಗೆಯೊಂದು ನಡೆದಿದೆ. ನವೆಂಬರ್ 20ರಂದು ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಿವೆ, ಮ್ಯಾಜಿಕ್ ಸಂಖ್ಯೆ 145 ಇದೆ. ಹರಿಯಾಣದಲ್ಲಿ ಸೋಲು ಕಂಡ ನಂತರ ಮಹಾರಾಷ್ಟ್ರದಲ್ಲಿ ಹೇಗಾದರೂ ಗೆಲ್ಲಬೇಕು ಎನ್ನುವ ಪ್ಲಾನ್ ಕಾಂಗ್ರೆಸ್ ಮಾಡಿಕೊಂಡಿತ್ತು. ಆದರೆ, ಇದೀಗ ಕಾಂಗ್ರೆಸ್ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ.
ಬಿಜೆಪಿಯ ಹೊಸ ಪ್ಲಾನ್ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳಿಗೆ ಸಂಕಷ್ಟ ತಂದೊಡ್ಡಿದೆ. ಶಿವಸೇನೆ (ಉದ್ಧವ್ ಠಾಕ್ರೆ ಬಣ) ಕಾಂಗ್ರೆಸ್ ಮೈತ್ರಿ ಪಕ್ಷದಲ್ಲೇ ಉಳಿಯುವ ಬಗ್ಗೆಯೂ ಪ್ರಶ್ನೆಗಳು ಎದುರಾಗಿವೆ. ಇಲ್ಲ ಬಿಜೆಪಿಯೊಂದಿಗೆ ಮತ್ತೆ ಕೈಜೋಡಿಸಲಿದೆಯೇ ಎನ್ನುವುದು ಈಗ ಇರುವ ಕುತೂಹಲ.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ನೇರ ಹಣಾಹಣಿ ಇದೆ. ಆದರೆ, ಇಲ್ಲಿ ಹಲವು ಸಣ್ಣ ಪಕ್ಷಗಳು ಇವೆ. ಇದರೊಂದಿಗೆ ಬಣ ರಾಜಕೀಯವೂ ಇದೆ. ಈ ಎಲ್ಲಾ ಪಕ್ಷಗಳನ್ನು ಜನ ಹೇಗೆ ಸ್ವೀಕರಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications