Maharashtra assembly election: ಮಹಾರಾಷ್ಟ್ರ ಚುನಾವಣೆ: ಮತಗಟ್ಟೆಗಳ ಬಳಿ ಚಪ್ಪಲಿ ನಿಷೇಧಕ್ಕೆ ಮನವಿ, ಕಾರಣವೇನು ?!
ಮಹಾರಾಷ್ಟ್ರದಲ್ಲಿ ನಾಳೆ (ನವೆಂಬರ್ 20) ಬುಧವಾರ ಒಂದೇ ಹಂತದಲ್ಲಿ ಎಲ್ಲಾ 288 ವಿಧಾನಸಭಾ ಕ್ಷೇತ್ರಗಳಲ್ಲೂ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಈ ನಡುವೆ ಮಹಾರಾಷ್ಟ್ರದಲ್ಲಿ ವಿಭಿನ್ನ ಮನವಿಯೊಂದನ್ನು ಪಕ್ಷವೊಂದು ಮಾಡಿದೆ. ಅದೇ ಮತಗಟ್ಟೆಗಳ ಬಳಿ ಚಪ್ಪಲಿ ನಿಷೇಧ ಮಾಡುವಂತೆ ಮನವಿ ಮಾಡಲಾಗಿದೆ. ಈ ವಿಷಯ ಇದೀಗ ಸಾಕಷ್ಟು ಟ್ರೋಲ್ ಹಾಗೂ ಚರ್ಚೆಗೆ ಕಾರಣವಾಗಿದೆ. ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ನಲ್ಲಿ ನಾಳೆ ವಿಧಾನಸಭೆ ಚುನಾವಣೆ ನಡೆಯಲಿದೆ. ಜಾರ್ಖಂಡ್‌ನಲ್ಲಿ ಈಗಾಗಲೇ ಒಂದು ಹಂತದ ಚುನಾವಣೆ ಮುಕ್ತಾಯವಾಗಿದೆ. ಇದೀಗ ಎರಡನೇ ಹಂತದ ಚುನಾವಣೆ ನಡೆಯುತ್ತಿದೆ.
ದೇಶದ ಪ್ರಮುಖ ರಾಜ್ಯಗಳಲ್ಲಿ ಮಹಾರಾಷ್ಟ್ರ ಸಹ ಒಂದಾಗಿದ್ದು, ಈ ರಾಜ್ಯದಲ್ಲಿ ನಡೆಯುವ ಚುನಾವಣೆ ಭಾರೀ ಕುತೂಹಲವನ್ನು ಮೂಡಿಸಿದೆ. ಮಹಾರಾಷ್ಟ್ರದಲ್ಲಿ ಇದೀಗ ಮಹಾಯುತಿ ಸಮ್ಮಿಶ್ರ ಸರ್ಕಾರದ ಇದೆ. ಮಹಾಯುತಿ ಹಾಗೂ ಮಹಾ ವಿಕಾಸ್ ಅಘಾಡಿಯ ನಡುವೆ ನೇರ ಹಣಾಹಣಿ ಇದೆ. ಹೀಗಾಗಿ, ಯಾವ ಪಕ್ಷ ಗೆಲ್ಲಲಿದೆ ಎನ್ನುವ ಕುತೂಹಲ ತೀವ್ರವಾಗಿದೆ. ಅಲ್ಲದೇ ಇಲ್ಲಿ ಪಕ್ಷಗಳ ವಿಭಜನೆಯಾದ ನಂತರ ಭಾರೀ ಹೈಡ್ರಾಮಾವೇ ನಡೆದಿದೆ.

ಕಳೆದ ಐದು ವರ್ಷಗಳಲ್ಲಿ ಮಹಾ ಹೈಡ್ರಾಮಾಕ್ಕೆ ಮಹಾರಾಷ್ಟ್ರದ ಜನ ಸಹ ಬೆಚ್ಚಿ ಬಿದಿದ್ದಾರೆ. ಹೀಗಾಗಿ, ನಾಳೆ ಮಹಾರಾಷ್ಟ್ರದ ಜನ ಇದಕ್ಕೆ ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಯಾಕೆಂದರೆ ಕಳೆದ ಐದು ವರ್ಷದಲ್ಲಿ ಮಹಾರಾಷ್ಟ್ರ ರಾಜಕೀಯದಲ್ಲಿ ಹಿಂದೆಂದೂ ಆಗದಷ್ಟು ಬದಲಾವಣೆಗಳು ಆಗಿವೆ. ದಶಕಗಳ ಕಾಲ ಮಹಾರಾಷ್ಟ್ರದಲ್ಲಿ ರಾಜಕೀಯ ಇತಿಹಾಸ ಸೃಷ್ಟಿಸಿದ್ದ ಪಕ್ಷಗಳು ಇದೀಗ ಇದೇ ಮೊದಲ ಬಾರಿ ಇಬ್ಭಾಗವಾಗಿವೆ.
ಈ ಪಕ್ಷಗಳ ನಾಯಕರು ಹರಿದು ಹಂಚಿ ಹೋಗಿದ್ದಾರೆ. ಹೀಗಾಗಿ, ಯಾರು ಗೆಲ್ಲುತ್ತಾರೆ ಹಾಗೂ ಯಾರು ಸೋಲುತ್ತಾರೆ ಎನ್ನುವ ಕುತೂಹಲವೊಂದು ಕಡೆಯಾದರೆ, ಮಹಾರಾಷ್ಟ್ರದ ಮಿತ್ರ ಪಕ್ಷಗಳ ನಡುವೆಯೇ ಭಾರೀ ಮುನಿಸು ಇದೆ. ಗೆಲ್ಲಬೇಕು ಎನ್ನುವ ಒಂದೇ ಕಾರಣಕ್ಕೆ ಈ ಪಕ್ಷದ ನಾಯಕರು ಹಲ್ಲು ಕಚ್ಚಿಕೊಂಡು ಚುನಾವಣೆಗೆ ಧುಮುಕಿದ್ದಾರೆ.
ಪಕ್ಷೇತರ ಸಣ್ಣ ಪಕ್ಷಗಳ ಅಬ್ಬರ
ಇನ್ನು ಮಹಾರಾಷ್ಟ್ರದಲ್ಲಿ ಈ ಬಾರಿ ಪಕ್ಷೇತರ ಹಾಗೂ ಸಣ್ಣ ಪಕ್ಷಗಳ ಪೈಪೋಟಿ ಜೋರಾಗಿಯೇ ಇದೆ. 15ಕ್ಕೂ ಹೆಚ್ಚು ಸಣ್ಣ ಪಕ್ಷಗಳು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಚುನಾವಣೆ ಅಖಾಡಕ್ಕೆ ಇಳಿಸಿವೆ. ಒಟ್ಟು 8,000 ಸಾವಿರಕ್ಕೂ ಹೆಚ್ಚು ಜನ ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿ ಇದ್ದಾರೆ. ಇದೀಗ ಈ ಅಭ್ಯರ್ಥಿಗಳು ದೊಡ್ಡ ಪಕ್ಷಗಳ ಅಭ್ಯರ್ಥಿಗಳಿಗೆ ಭಾರೀ ಪೈಪೋಟಿ ನೀಡಿದ್ದು, ಅಭ್ಯರ್ಥಿಗಳ ಮತ ವಿಭಜನೆಯಾಗುವ ಆತಂಕ ಎದುರಾಗಿದೆ.
ವೋಟ್ ಬೂತ್ ಬಳಿ ಚಪ್ಪಲಿ ಬೇಡ!
ಇದೀಗ ಮಹಾರಾಷ್ಟ್ರ ಚುನಾವಣೆಗೆ ಕೆಲವೇ ಗಂಟೆ ಬಾಕಿ ಉಳಿದಿರುವಾಗ ಪಕ್ಷೇತರ ಅಭ್ಯರ್ಥಿಯೊಬ್ಬರು ಚುನಾವಣಾ ಆಯೋಗಕ್ಕೆ ವಿಭಿನ್ನ ಮನವಿ ಮಾಡಿದ್ದಾರೆ. ಮತದಾನ ನಡೆಯುವಾಗ ವೋಟ್ ಬೂತ್‌ಗಳ ಬಳಿ ಚಪ್ಪಲಿಗಳಿಗೆ ನಿಷೇಧ ಹೇರುವಂತೆ ಮನವಿ ಮಾಡಿಕೊಂಡಿದ್ದಾರೆ.
ಹೌದು ಇದು ಈ ವಿಚಿತ್ರ ಮನವಿ ಚುನಾವಣಾ ಆಯೋಗದ ಅಧಿಕಾರಿ ಹಾಗೂ ಸಿಬ್ಬಂದಿಯಲ್ಲೂ ಅಚ್ಚರಿ ಮೂಡಿಸಿದೆ. ಮಹಾರಾಷ್ಟ್ರದ ಪರಂದಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಗುರುದಾಸ್ ಸಂಭಾಜಿ ಕಾಂಬ್ಳೆ ಎನ್ನುವ ವ್ಯಕ್ತಿ ಧಾರಾಶಿವ್‌ನಲ್ಲಿನ ಮತಗಟ್ಟೆಗಳ ಸಮೀಪ ಚಪ್ಪಲಿ ನಿಷೇಧಿಸುವಂತೆ ಮನವಿ ಮಾಡಿದ್ದಾರೆ.
ಗುರುದಾಸ್ ಸಂಭಾಜಿ ಅವರು ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಅವರದ್ದು ಚಪ್ಪಲಿ ಚಿಹ್ನೆಯಾಗಿದೆ. ಹೀಗಾಗಿ, ಮತಗಟ್ಟೆಗಳ ಬಳಿ ಚಪ್ಪಲಿ ಹಾಕಿಕೊಂಡು ಬರುವುದು ಚುನಾವಣಾ ನೀತಿಸಂಹಿತೆಯ ಉಲ್ಲಂಘನೆಯಾಗುತ್ತದೆ. ಹೀಗಾಗಿ, ಮತಗಟ್ಟೆಯ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಚಪ್ಪಲಿಗಳನ್ನು ಧರಿಸುವುದಕ್ಕೆ ನಿಷೇಧಿಸಬೇಕು ಎಂದು ಭಾರತೀಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ!
ಇದಕ್ಕೆ ಉತ್ತರಿಸಿರುವ ಚುನಾವಣಾ ಆಯೋಗವು, ಚಪ್ಪಲಿ ಬಳಕೆಯ ಮಾಡುವ ವಸ್ತುವಾಗಿದೆ. ಇದರ ಮೇಲೆ ನಿಷೇಧ ಹೇರಲು ಸಾಧ್ಯವಿಲ್ಲ ಎಂದು ಉತ್ತರಿಸಿದೆ.












Click it and Unblock the Notifications