ಮಹಾರಾಷ್ಟ್ರ ಚುನಾವಣೆ: "ಕೈ" ಜೋಡಿಸುತ್ತಾ ಅಸಾದುದ್ದೀನ್ ಓವೈಸಿ ಎಐಎಂಐಎಂ !
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ಕೆಲವು ದಿನಗಳ ಮಾತ್ರ ಬಾಕಿ ಉಳಿದಿದೆ. ಈ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಮಹತ್ವದ ರಾಜಕೀಯ ಚರ್ಚೆಯೊಂದು ನಡೆಯುತ್ತಿದೆ. ಕಾಂಗ್ರೆಸ್ ಮೈತ್ರಿಕೂಟಕ್ಕೆ ಓವೈಸಿ ಎಐಎಂಐಎಂ ಸೇರುತ್ತಾ ಎನ್ನುವ ಚರ್ಚೆ ನಡೆದಿದೆ. ಮಹಾರಾಷ್ಟ್ರದಲ್ಲಿ ನವೆಂಬರ್ 20ರಂದು ಚುನಾವಣೆ ನಡೆಯಲಿದೆ. ಈ ನಡುವೆ ಎಲ್ಲಾ ಪಕ್ಷಗಳು ಓವೈಸಿ ಪಕ್ಷದಿಂದ ಅಂತರ ಕಾಪಾಡಿಕೊಂಡಿವೆ.
ಮಹಾರಾಷ್ಟ್ರದ ಚುನಾವಣೆ ಇದೀಗ ಜಿದ್ದಾಜಿದ್ದಿನ ಕಣವಾಗಿ ಬದಲಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಮೈತ್ರಿ ಪಕ್ಷಗಳು ಸೀಟು ಹಂಚಿಕೆಯ ಅಂತಿಮ ಹಂತಕ್ಕೆ ಬಂದು ತಲುಪಿವೆ. ಅಲ್ಲದೇ ಕುಟುಂಬ ರಾಜಕೀಯ ಆರೋಪ ಹಾಗೂ ಪ್ರತ್ಯಾರೋಪಗಳು ಜೋರಾಗಿವೆ. ಈ ನಡುವೆ ಮಹಾರಾಷ್ಟ್ರದಲ್ಲಿ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳದ ಎಐಎಂಐಎಂ ಪಕ್ಷದ ನಡೆ ಏನು, ಈ ಪಕ್ಷ ಕಾಂಗ್ರೈಸ್ ಮೈತ್ರಿ ಒಕ್ಕೂಟದೊಂದಿಗೆ ಸೇರುತ್ತಾ ಎನ್ನುವ ಪ್ರಶ್ನೆ ಎದುರಾಗಿದೆ.

ಕೆಲವು ದಿನಗಳ ಹಿಂದಷ್ಟೇ ಎಐಎಂಐಎಂ ಪಕ್ಷದ ಮುಖಂಡರೊಬ್ಬರು ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಅಧ್ಯಕ್ಷರಿಗೆ ಈ ಸಂಬಂಧ ಪತ್ರ ಬರೆದಿದ್ದಾರೆ. ಆದರೆ, ಇದಕ್ಕೆ ಕಾಂಗ್ರೆಸ್ ಕ್ಯಾರೇ ಎಂದಿಲ್ಲ. ಪಕ್ಷದ ಮುಖಂಡರು ನಮ್ಮ ಪಕ್ಷವನ್ನು ಸಹ ಇಂಡಿಯಾ ಮೈತ್ರಿಕೂಟಕ್ಕೆ ಸೇರಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಆದರೆ, ಆ ಮನವಿಯ ಬಗ್ಗೆ ಕಾಂಗ್ರೆಸ್ ಅಂತರ ಕಾಪಾಡಿಕೊಂಡಿದೆ.
ನಮ್ಮನ್ನು ಸೇರಿಸಿಕೊಳ್ಳಲ್ಲ ಆದರೆ ಬಿ ಟೀಂ ಅಂತಾರೆ: ಈ ಬಗ್ಗೆ ಪ್ರತಿಕ್ರಿಯಿಸಿರುವ ಎಐಎಂಐಎಂ ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಅವರು, ನಮ್ಮ ಪಕ್ಷವನ್ನು ಕಾಂಗ್ರೆಸ್ ಮೈತ್ರಿಕೂಟಕ್ಕೆ (ಇಂಡಿಯಾ ಒಕ್ಕೂಟ)ಕ್ಕೆ ಸೇರಿಸಿಕೊಳ್ಳುತ್ತಿಲ್ಲ. ಮೂರು ತಿಂಗಳ ಹಿಂದೆಯೇ ಈ ಬಗ್ಗೆ ಕಾಂಗ್ರೆಸ್‌ಗೆ ಪತ್ರ ಬರೆಯಲಾಗಿದೆ. ಆದರೆ, ಇಲ್ಲಿಯವರೆಗೆ ಕಾಂಗ್ರೆಸ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇಷ್ಟಾದರೂ ಕಾಂಗ್ರೆಸ್ ನಮ್ಮನ್ನು ಬಿಟೀಂ ಎನ್ನುವುದು ಬಿಟ್ಟಿಲ್ಲ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ರಾಜಕೀಯ ಚಿತ್ರಣ ಹೇಗಿದೆ ?
ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ನವೆಂಬರ್ 20ಕ್ಕೆ ನಡೆಯಲಿದೆ. 288 ವಿಧಾನಸಭಾ ಕ್ಷೇತ್ರಗಳ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದ್ದು, ನವೆಂಬರ್ 23ಕ್ಕೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ಮಹಾರಾಷ್ಟ್ರದ ಚುನಾವಣೆ ಅತ್ಯಂತ ಜಿದ್ದಾಜಿದ್ದಿನ ಕಣವಾಗಿ ಬದಲಾಗಿದೆ.
ಮಹಾರಾಷ್ಟ್ರದಲ್ಲಿ ಮಹಾಯುತಿ ಹಾಗೂ ಮಹಾವಿಕಾಸ ಅಘಾಡಿ ಎನ್ನುವ ಒಕ್ಕೂಟಗಳು ಇವೆ. ಮಹಾಯುತಿಯಲ್ಲಿ ಬಿಜೆಪಿ, ನ್ಯಾಷನಲಿಸ್ಟ್ ಕಾಂಗ್ರೆಸ್ (ಅಜಿತ್‌ಪವಾರ್ ಬಣ), ಶಿವಸೇನಾ (ಏಕಾನಾಥ್ ಶಿಂಧೆ ಬಣ) ಇದೆ. ಇನ್ನು ಮಹಾವಿಕಾಸ ಅಘಾಡಿಯಲ್ಲಿ ಕಾಂಗ್ರೆಸ್, ನ್ಯಾಷನಲಿಸ್ಟ್ ಕಾಂಗ್ರೆಸ್ (ಶರದ್ ಪವಾರ್) ಹಾಗೂ ಶಿವಸೇನಾ (ಉದ್ಧವ್ ಠಾಕ್ರೆ ಬಣ) ಇದೆ.
ಈ ಹಿಂದೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಹಾಗೂ ಶಿವಸೇನಾ ಪಕ್ಷಗಳು ವಿಭಜನೆ ಆಗಿರಲಿಲ್ಲ. ಈ ಪಕ್ಷಗಳು ವಿಭಜನೆಯಾದ ಮೇಲೆ ನಡೆಯುತ್ತಿರುವ ಮೊದಲ ವಿಧಾನಸಭೆ ಚುನಾವಣೆ ಇದಾಗಿದ್ದು, ಈ ಬಾರಿ ಇಲ್ಲಿನ ಮತದಾರರು ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.












Click it and Unblock the Notifications